Advertisement

ಚಂಪಕ ಸರಸಿ ಕೊಳದ ಸಂಶೋಧನೆಯಾಗಲಿ: ನಾ|ಡಿಸೋಜ

04:50 PM Jun 08, 2019 | Naveen |

ಆನಂದಪುರ: ಚಂಪಕ ಸರಸಿ ಕೊಳದ ಇತಿಹಾಸದ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆ ಅಗತ್ಯ ಎಂದು ಖ್ಯಾತ ಸಾಹಿತಿ ನಾ| ಡಿಸೋಜ ಹೇಳಿದರು.

Advertisement

ಸಮೀಪದ ಮಲಂದೂರು ಮಹಾಂತಿಮಠದ ಚಂಪಕ ಸರಸಿ ಕೊಳದಲ್ಲಿ ಇತಿಹಾಸ ಪರಂಪರೆ ಉಳಿಸಿ ಅಭಿಯಾನಕ್ಕೆ ಗಿಡ ನೆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಕೆಳದಿ ಅರಸರ 17ನೇ ದೊರೆ ಬಸಪ್ಪ ನಾಯಕ ಬರೆದ ಶಿವತತ್ವ ರತ್ನಾಕರ ಎಂಬ ಪುಸ್ತಕದಲ್ಲಿ ಆನಂದಪುರದ ಮಹಾಂತಿ ಮಠದ ಚಂಪಕ ಸರಸದ ಬಗ್ಗೆ ಸುಂದರವಾಗಿ ಉಲೇಖೀಸಿದ್ದಾನೆ. ಹಾಗೆಯೇ ಈ ಆನಂದಪುರವನ್ನು ಆನಂತ ಶಿವಪುರಿ ಎಂದು ಸಂಬೋಧಿಸಿದ್ದಾನೆ. ಕೆಳದಿ ಅರಸರ ಕಾಲದ ಅನೇಕ ಶಾಸನಗಳಲ್ಲಿ ಈ ಚಂಪಕ ಸರಸಿ ಕೊಳದ ಬಗ್ಗೆ ಬರೆದಿದ್ದಾರೆ. ಈ ಕೊಳದ ಬಗ್ಗೆ ಕೆಲವರು ಆಪಾದನೆ ಮಾಡುತ್ತಿದ್ದಾರೆ. ಕೆಲವರು ಹೇಳುವ ಪ್ರಕಾರ ಚಂಪಕ ಒಬ್ಬ ಮಹಿಳೆಯ ಹೆಸರಾಗಿದ್ದು ಆಕೆ ವೇಶ್ಯೆಯಾಗಿದ್ದಳು. ಅವಳನ್ನು ಕೆಳದಿ ಅರಸರ ಕಾಲದಲ್ಲಿ ನಾಯಕ ಇಟ್ಟುಕೊಂಡ ಕಾರಣಕ್ಕೆ ಈ ಕೊಳವನ್ನು ನಿರ್ಮಾಣ ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾದ ವಿಚಾರ. ಈ ಪ್ರದೇಶದಲ್ಲಿ ಅತಿ ಹೆಚ್ಚು ಕಾಡು ಇದ್ದು ಸಂಪಿಗೆ ಮರಗಳು ಹೆಚ್ಚು ಇದ್ದುದರಿಂದ ಚಂಪಕ ಎಂಬ ಹೆಸರು ಬಂದಿರಬೇಕು ಎಂದು ತಿಳಿಯುತ್ತದೆ. ಇದರ ಬಗ್ಗೆ ಸಂಪೂರ್ಣ ಇತಿಹಾಸ ತಿಳಿಬೇಕಾಗಿದೆ. 7ನೇ ಚೋಳ ದೊರೆ ಕೃಷ್ಣಪ್ಪನಾಯಕ ಇಲ್ಲಿಗೆ ಸಮೀಪದ ಹರತಾಳು ಮತ್ತು ಅದರ ಪಕ್ಕದ ಪ್ರದೇಶವನ್ನು ತನ್ನ ವಶಕ್ಕೆ ಪಡೆದು ನಂತರ ಹುಂಚದಲ್ಲಿ ಜೈನ ದೊರೆಗಳು ಆಳುತಿದ್ದ 2 ಪ್ರದೇಶವನ್ನು ವಶಪಡಿಸಿದ್ದ. ಇದಕ್ಕೆ ಆನಂತಪುರ ಎಂದು ಕರೆದಿದ್ದ ಬಗ್ಗೆ ಶಾಸನಗಳು ಇವೆ. ನಂತರದಲ್ಲಿ ವೆಂಕಟಪ್ಪ ನಾಯಕ ಆನಂದಪುರ ಭಾಗದಲ್ಲಿ ಕೊಳ, ಬಾವಿ, ಸರೋವರ.ದೇವಾಲಯವನ್ನು ನಿರ್ಮಾಣ ಮಾಡಿದ್ದ. ಇವನ ಆಡಳಿತಾವಧಿಯಲ್ಲಿ ತಾಂಡವೇಶ್ವರ ದೇವಾಲಯ ನಿರ್ಮಾ ಣವಾಗಿದ್ದು ಅದು ಈ ಚಂಪಕ ಸರಸಿ ಕೊಳದಲ್ಲಿ ಎಂದು ಕಾಣುತ್ತದೆ ಎಂದರು.

ಚಂಪಕ ಸರಸಿ ಕೊಳದ ಬಗ್ಗೆ ಸಂಪೂರ್ಣ ಇತಿಹಾಸ ಅಧ್ಯಯನದಿಂದ ತಿಳಿಯಬಹುದು. ಇದಕ್ಕೆ ಐತಿಹಾಸಿಕ ಪುಟಗಳನ್ನು ತೆಗೆಯಬೇಕು. ಹಾಗೆಯೇ ಲೇಖನ, ವರದಿ, ಪುಸ್ತಕಗಳಾದಾಗ ಮಾತ್ರ ಸಂಪೂರ್ಣ ಇತಿಹಾಸ ತಿಳಿಯಲು ಸಾಧ್ಯ. ಇಂತಹ ಹಳೆಯ ಕೊಳಗಳು, ದೇವಾಲಯಗಳು, ಕಟ್ಟಡಗಳು, ಕೆರೆಗಳು, ಸರೋವರಗಳ ಸಂರಕ್ಷಣೆಯಾಗಬೇಕಾದ ಅವಶಕತೆ ಇದೆ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಮಂಜುನಾಥ್‌, ತಾಲೂಕು ಕನ್ನಡ ಜಾನಪದ ಪರಿಷತ್‌ ಅಧ್ಯಕ್ಷ ವಿ.ಟಿ. ಸ್ವಾಮಿ, ಸೈನಿಕ ಕಿಶೋರ್‌ ಭೈರಾಪುರ, ಬಿ.ಡಿ. ರವಿಕುಮಾರ್‌, ವಿವಿಧ ಸಂಘ-ಸಂಸ್ಥೆಯ ಸದಸ್ಯರಾದ ರಾಜೇಂದ್ರ ಗೌಡ, ಉಮೇಶ್‌, ಶೌಕತ್‌ ಅಲಿ, ವಕೀಲ ಪ್ರವೀಣ್‌, ಗಣೇಶ್‌, ಇಂತಿಯಾಜ್‌, ಸುಗಂಧ ರಾಜ್‌, ಅಶ್ವಿ‌ನ್‌, ಸಗಾರಿಯಮೇರಿ, ಸಾವಿತ್ರಮ್ಮ, ಗುರುರಾಜ್‌, ಜಯಪ್ಪ ಗೌಡ, ಅನಸೂಯ, ಕಾವ್ಯ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next