Advertisement

ಕಾಯ್ದೆ ವಿರುದ್ಧ ಧ್ವನಿ ಎತ್ತದ ಜನಪ್ರತಿನಿಧಿಗಳು: ಅಂಶುಮಂತ್‌

07:00 PM Sep 30, 2020 | Suhan S |

ಎನ್‌ ಆರ್‌ ಪುರ: ಜಿಲ್ಲೆಯ ಜನರ ಬದುಕಿಗೆ ಮಾರಕವಾಗಿರುವ ಪರಿಸರ ಸೂಕ್ಷ್ಮ ವಲಯದ ಬಗ್ಗೆ ಜವಾಬ್ದಾರಿ ಸ್ಥಾನದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಹಾಗೂ ತರೀಕೆರೆಯ ಬಿಜೆಪಿ ಶಾಸಕರು ಸದನದಲ್ಲಿ ಧ್ವನಿ ಎತ್ತಲಿಲ್ಲ ಎಂದು ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಡಾ| ಕೆ.ಪಿ. ಅಂಶುಮಂತ್‌ ಆರೋಪಿಸಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಟಿ.ಡಿ. ರಾಜೇಗೌಡರು ಸದನದಲ್ಲಿ ದೊರೆತ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಕ್ಷೇತ್ರದ ಜನರ ಸಮಸ್ಯೆಯ ಬಗ್ಗೆ ಧ್ವನಿ ಎತ್ತುವ ಕೆಲಸ ಮಾಡಿದ್ದಾರೆ ಎಂದರು. ಪರಿಸರ ಸೂಕ್ಷ್ಮವಲಯ, ಮೀಸಲು ಅರಣ್ಯ 4(1) ಅ ಸೂಚನೆ ಬಗ್ಗೆ ಸಂಸದೆ ಶೋಭಾ ಕರಂದ್ಲಾಜೆಯವರು ಮೌನ ವಹಿಸಿರುವುದು ರೈತಪರ ಕಾಳಜಿ ತೋರಿಸುತ್ತದೆ ಎಂದು ವ್ಯಂಗ್ಯವಾಡಿದರು.

ಮೀಸಲು ಅರಣ್ಯ ಅಧಿಸೂಚನೆ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ನೀಡಿ ಬದ್ಧತೆಯಿಂದ ಅರಣ್ಯ ವ್ಯವಸ್ಥಾಪನಾ ಅ ಧಿಕಾರಿ ಸ್ಥಳಕ್ಕೆ ಬಂದುಅರ್ಜಿ ಸ್ವೀಕರಿಸಬೇಕೆಂದು ಆಗ್ರಹಿಸಿದರು. ಮೀಸಲು ಅರಣ್ಯಕ್ಕೆ ಆಕ್ಷೇಪಣೆ ಸಲ್ಲಿಸಲು ಕಾಂಗ್ರೆಸ್‌ನಿಂದ ಜನರಿಗೆ ಅರ್ಜಿ ನೀಡಿರುವ ವಿಚಾರದಲ್ಲಿ ಭ್ರಷ್ಟಾಚಾರವಿದೆ ಎಂದಿರುವ ಮಾಜಿ ಶಾಸಕ ಜೀವರಾಜ್‌ ಹೇಳಿಕೆ ಹಾಸ್ಯಾಸ್ಪದವಾಗಿದೆ ಎಂದು ದೂರಿದರು. ರೈತರಿಗೆ ಭೂಮಿ ಕೊಡುವ ವಿಚಾರದಲ್ಲಿ ದಾಖಲೆಗಳನ್ನು ತಿದ್ದಿ ಲೋಕಾಯುಕ್ತದಲ್ಲಿ ತನಿಖೆ ಎದುರಿಸುತ್ತಿರುವವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿರುವುದು ತಾ ಕಳ್ಳ ಪರರ ನಂಬ ಎಂಬ ಮಾತಿನಂತಿದೆ ಎಂದು ಆರೋಪಿಸಿದರು.

2008ರಲ್ಲಿ ತಾಲೂಕಿನ ರಾವೂರು,ಲಿಂಗಾಪುರ ಆಡುವಳ್ಳಿ ಮತ್ತಿತರ ಗ್ರಾಮಗಳಲ್ಲಿ ಖಾತೆ ಇದ್ದ ನೂರಾರು ಎಕರೆ ಕಂದಾಯ ಭೂಮಿ ಮೀಸಲು ಹಾಗೂ ಕಿರು ಅರಣ್ಯಕ್ಕೆ ಸೇರಿಸುವಾಗ ಶಾಸಕರಾಗಿದ್ದ ಜೀವರಾಜ್‌ ಸದನದಲ್ಲಿ ಏನು ಮಾಡುತ್ತಿದ್ದರುಎಂದು ಪ್ರಶ್ನಿಸಿದರು. ಪ್ರಜಾಪ್ರಭುತ್ವದ ದೇಗುಲವಾಗಿರುವ ಸದನದಲ್ಲಿ ಹಿಂದಿನ ಬಿಜೆಪಿ ಸರ್ಕಾರದಲ್ಲಿನ ಮೂವರು ಸಚಿವರು ಏನು ಮಾಡಿದ್ದರು ಎಂಬುದನ್ನು ಮಾಜಿ ಶಾಸಕರು ನೆನಪಿಸಿಕೊಳ್ಳಲಿ. ಶಾಸಕ ಟಿ.ಡಿ. ರಾಜೇಗೌಡರಿಗೆ ಅತ್ಯಂತ ಕನಿಷ್ಠ ಪದಗಳನ್ನು ಬಳಸಿ ಬೇಜವಾಬ್ದಾರಿಯಿಂದ ಹೇಳಿಕೆ ನೀಡಿರುವ ಮಾಜಿ ಶಾಸಕರಿಗೆ ತಿಳುವಳಿಕೆ ಕೊರತೆಯಿದೆ ಎಂದು ಆರೋಪಿಸಿದರು. ಮುಖಂಡರಾದ ಗೇರುಬೈಲು ನಟರಾಜ್‌, ಸದಾಶಿವ, ಪ್ರಶಾಂತ್‌ ಶೆಟ್ಟಿ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next