ಮುಂಬಯಿ: ಮಹಾರಾಷ್ಟ್ರ ರಾಜ್ಯದ ಬರವನ್ನು ಶಾಶ್ವತವಾಗಿ ನೀಗಿಸಲು ಭಗೀರಥನಾಗಿರುವ ಬಾಲಿವುಡ್ ನಟ ಆಮಿರ್ ಖಾನ್, ಮುಂದಿನ ಐದು ವರ್ಷಗಳಲ್ಲಿ ಆ ರಾಜ್ಯದಲ್ಲಿನ ಬರವನ್ನು ಸಂಪೂರ್ಣ ನೀಗಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 2016ರಲ್ಲಿ ಜಲ ಸಂರಕ್ಷಣೆಗಾಗಿ ತಾವೇ ಸ್ಥಾಪಿಸಿದ್ದ ‘ಪಾನಿ ಫೌಂಡೇಷನ್ ‘ ಮೂಲಕ ಈಗಾಗಲೇ ಹಿವಾರೆ ಬಜಾರ್, ರಾಳೇಗಣ ಸಿದ್ಧಿ, ಹಿವ್ರೆ ಸೇರಿದಂತೆ ಹಲವಾರು ಹಳ್ಳಿಗಳಲ್ಲಿನ ಬರ ನೀಗಿಸಿದ್ದಾರೆ ಆಮೀರ್. ಇದರಿಂದ ಮತ್ತಷ್ಟು ಸ್ಫೂರ್ತಿಗೊಂಡಿರುವ ಅವರು, ಪುಣೆ, ಮುಂಬಯಿ, ನಾಸಿಕ್, ನಾಗ್ಪುರ ಪ್ರಾಂತ್ಯಗಳಲ್ಲಿ ತಮ್ಮ ಫೌಂಡೇಷನ್ ಅಡಿ ‘ಜಲ ಮಿತ್ರ’ ಎಂಬ ವಿದ್ಯಾರ್ಥಿ ಸಂಘಟನೆ ರಚಿಸಿದ್ದಾರೆ. ಮಹಾರಾಷ್ಟ್ರ ಸಂಸ್ಥಾಪನಾ ದಿನವೂ ಆದ, ಮೇ 1ರಂದು 1 ಲಕ್ಷದಷ್ಟು ವಿದ್ಯಾರ್ಥಿಗಳಿರುವ ‘ಜಲಮಿತ್ರ’ರ ಪಡೆ ಅಸ್ವಿತ್ತಕ್ಕೆ ತಂದು ಮುಂಬೈ, ನಾಸಿಕ್, ನಾಗ್ಪುರ ಪ್ರಾಂತ್ಯಗಳಲ್ಲಿ ಜಲಕ್ರಾಂತಿ ಮಾಡುವ ಸಂಕಲ್ಪ ಹೊಂದಿದ್ದಾರೆ ಅವರು.
ಪಾನಿ ಫೌಂಡೇಷನ್ ಸೇವೆ: ತನ್ನ ಸಂಸ್ಥಾಪನಾ ವರ್ಷದಲ್ಲಿ ಆಯ್ದ 3 ತಾಲೂಕು, 2017ರಲ್ಲಿ 74 ತಾಲೂಕುಗಳಲ್ಲಿನ ಬರವನ್ನು ಶಾಶ್ವತವಾಗಿ ನೀಗಿಸಿ, ಅಲ್ಲೆಲ್ಲಾ ಝುಳು ಝುಳು ನಾದ ಹರಿಸಿದ ಹೆಗ್ಗಳಿಕೆ ಪಾನಿ ಫೌಂಡೇಷನ್‌ನದ್ದು. ಈ ವರ್ಷ, 75 ತಾಲೂಕುಗಳ 4,000ಕ್ಕಿಂತ ಹೆಚ್ಚು ಹಳ್ಳಿಗಳಲ್ಲಿ ಜಲ ಸ್ವಾವಲಂಬಿ ಕೈಂಕರ್ಯ ಹಮ್ಮಿಕೊಂಡಿದ್ದಾರೆ.
ಸ್ಪರ್ಧೆ: ಹಳ್ಳಿಗಳ ನಡುವೆ ಜಲ ಸಂರಕ್ಷಣೆಯ ಬಗ್ಗೆ ಆರೋಗ್ಯಕರ ಸ್ಪರ್ಧೆ ನಡೆಸಲು ಸತ್ಯಮೇವ ಜಯತೆ ವಾಟರ್ ಕಪ್ ಎಂಬ ಸ್ಪರ್ಧೆ ಏರ್ಪಡಿಸಲಾಗಿದೆ. ಈ ಸ್ಪರ್ಧೆಯಲ್ಲಿ ಟಾಪ್ 3 ಸ್ಥಾನ ಗಳಿಸುವ ಹಳ್ಳಿಗಳಿಗೆ ಕ್ರಮವಾಗಿ, 75 ಲಕ್ಷ ರೂ, 50 ಲಕ್ಷ ರೂ. ಮತ್ತು 40 ಲಕ್ಷ ರೂ. ಬಹುಮಾನ ನೀಡಲಾಗುತ್ತದೆ.