Advertisement

Aamer Jamal: ಒಂದು ಕಾಲದಲ್ಲಿ ಟ್ಯಾಕ್ಸಿ ಡ್ರೈವರ್.. ಈಗ ಪಾಕಿಸ್ತಾನ ತಂಡದ ಪ್ರಮುಖ ಬೌಲರ್

06:33 PM Jan 04, 2024 | ಕೀರ್ತನ್ ಶೆಟ್ಟಿ ಬೋಳ |

ಆಸ್ಟ್ರೇಲಿಯಾ ವಿರುದ್ಧದ ಮೂರನೆ ಟೆಸ್ಟ್ ಪಂದ್ಯದಲ್ಲಿ 227 ರನ್ ಗಳಿಗೆ ಒಂಬತ್ತು ವಿಕೆಟ್ ಕಳೆದುಕೊಂಡಿದ್ದ ವೇಳೆ ದಿಟ್ಟವಾಗಿ ನಿಂತ ಒಂಬತ್ತನೇ ಕ್ರಮಾಂಕದ ಬ್ಯಾಟರ್ ಆಸೀಸ್ ಬೌಲರ್ ಗಳನ್ನು ಚೆಂಡಾಡಿದ್ದ. ಸ್ಟಾರ್ಕ್, ಕಮಿನ್ಸ್, ಲಯಾನ್ ದಾಳಿಯನ್ನು ಸಲೀಸಾಗಿ ಎದುರಿಸಿದ ಆತ ಕೊನೆಯ ವಿಕೆಟ್ ಗೆ 86 ರನ್ ಜೊತೆಯಾಟವಾಡಿದ್ದ. ಒಂಬತ್ತು ವಿಕೆಟ್ ಕಿತ್ತು ಸಂತಸದಲ್ಲಿದ್ದ ಆಸೀಸ್ ಆಟಗಾರರಿಗೆ ಕೊನೆಯಲ್ಲಿ ಅಡ್ಡಿಯಾಗಿ ನಿಂತಿದ್ದ ಅತ ಮೊದಲ ಟೆಸ್ಟ್ ಪಂದ್ಯದ ಇನ್ನಿಂಗ್ ಒಂದರಲ್ಲಿ ಆರು ವಿಕೆಟ್ ಕಿತ್ತಿದ್ದ. ಸಿಡ್ನಿಯಲ್ಲಿ ನಾಲ್ಕು ಸಿಕ್ಸರ್ ಸಹಾಯದಿಂದ 82 ರನ್ ಕಲೆ ಹಾಕಿದ್ದ ಆತನೇ ಪಾಕಿಸ್ತಾನ ಕ್ರಿಕೆಟ್ ತಂಡದ ಹೊಸ ಸೆನ್ಸೇಶನ್ ಆಮಿರ್ ಜಮಾಲ್.

Advertisement

27 ವರ್ಷದ ಬೌಲರ್ ಆಮಿರ್ ಜಮಾಲ್ ಜನಿಸಿದ್ದು ಮಿಯಾನ್ ವಲಿಯಲ್ಲಿ. ಐದು ವರ್ಷಗಳ ಹಿಂದೆ 22 ನೇ ವಯಸ್ಸಿನಲ್ಲಿ ಪ್ರಥಮ ದರ್ಜೆಗೆ ಪದಾರ್ಪಣೆ ಮಾಡಿದ ಜಮಾಲ್ ಪಾಕ್ ಪರ ಅಂತಾರಾಷ್ಟ್ರೀಯ ಪಂದ್ಯವಾಡಲು ಹಲವು ಸಂಕಷ್ಟಗಳನ್ನು ಎದುರಿಸಬೇಕಾಗಿತ್ತು.

2014 ರಲ್ಲಿ ಪಾಕಿಸ್ತಾನದ ಅಂಡರ್ 19 ತಂಡದಲ್ಲಿ ಆಡಿದ ನಂತರ, ಜಮಾಲ್ ಅವರು ತಮ್ಮ ಕುಟುಂಬವನ್ನು ಸಲಹಲು ಆಸ್ಟ್ರೇಲಿಯಾಕ್ಕೆ ತೆರಳವಾಗಬೇಕಾಯಿತು. ಟ್ಯಾಕ್ಸಿ ಡ್ರೈವರ್ ಆಗಿ ಕಾಂಗರೂ ನಾಡಿನಲ್ಲಿ ಕೆಲಸ ಆರಂಭಿಸಿದ ಕಾರಣ ವೃತ್ತಿಪರ ಕ್ರಿಕೆಟರ್ ಆಗಬೇಕೆಂಬ ತನ್ನ ಕನಸನ್ನು ತಡೆ ಹಿಡಿಯಬೇಕಾಯಿತು.

“ನಾನು ಐದರಿಂದ ಬೆಳಿಗ್ಗೆ ಹತ್ತು ಮೂವತ್ತರವರೆಗೆ ನನ್ನ ಮೊದಲ ಶಿಫ್ಟ್‌ ಗೆ ಹೋಗುತ್ತಿದ್ದೆ.ಈ ಹೋರಾಟವು ನನ್ನಲ್ಲಿ ಸಮಯ ಪ್ರಜ್ಞೆಯನ್ನು ಹುಟ್ಟುಹಾಕಿತು. ನಾನು ವಿಷಯಗಳನ್ನು ಗೌರವಿಸಲು ಪ್ರಾರಂಭಿಸಿದೆ” ಎಂದು ಜಮಾಲ್ ಪಿಸಿಬಿಯೊಂದಿಗಿನ ಯೂಟ್ಯೂಬ್ ಸಂದರ್ಶನದಲ್ಲಿ ಹೇಳಿದರು.

ನಾಲ್ಕು ವರ್ಷಗಳ ವೃತ್ತಿಪರ ಆಟದಿಂದ ದೂರವಿದ್ದರೂ, ಜಮಾಲ್ ಅವರ ಕ್ರಿಕೆಟ್ ಮೇಲಿನ ಪ್ರೀತಿ ಎಂದಿಗೂ ಕಡಿಮೆಯಾಗಿರಲಿಲ್ಲ. ಈ ಮಧ್ಯೆ ಅವರು ಆಸ್ಟ್ರೇಲಿಯಾದಲ್ಲಿ ಗ್ರೇಡ್ ಕ್ರಿಕೆಟ್ ಆಡಲು ಆರಂಭಿಸಿದರು, ಈ ಸಮಯದಲ್ಲಿ ಪಾಕಿಸ್ತಾನದ ಅಂಡರ್ 23 ಪ್ರವಾಸದ ಬಗ್ಗೆ ತಿಳಿದುಕೊಂಡ ಅವರು ಹುಟ್ಟಿದ ದೇಶಕ್ಕಾಗಿ ಆಡುವ ಬಯಕೆಯಿಂದ ಮತ್ತೆ ಪಾಕಿಸ್ತಾನಕ್ಕೆ ಮರಳಿದರು.

Advertisement

ಸ್ವದೇಶಕ್ಕೆ ಹಿಂದಿರುಗಿದ ನಂತರ, ಜಮಾಲ್ ಪಾಕಿಸ್ತಾನ ಟಿವಿಯೊಂದಿಗೆ ಪ್ರಥಮ ದರ್ಜೆ ಮತ್ತು ಲಿಸ್ಟ್-ಎ ಒಪ್ಪಂದವನ್ನು ಮಾಡಿಕೊಂಡರು, ಸೆಪ್ಟೆಂಬರ್ 2018 ರಲ್ಲಿ ಅವರು ಪ್ರಥಮ ದರ್ಜೆ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದರು. ಮುಲ್ತಾನ್ ವಿರುದ್ಧದ ಪಂದ್ಯದಲ್ಲಿ 19 ಓವರ್‌ ಗಳಲ್ಲಿ 28 ರನ್ ನೀಡಿ ನಾಲ್ಕು ವಿಕೆಟ್ ಕಿತ್ತರು. ಪಾಕಿಸ್ತಾನ ಟಿವಿ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದರು.

ಜಮಾಲ್ ಅವರಿಗೆ ಪೂರ್ಣಾವಧಿಯ ವೃತ್ತಿಪರ ಕ್ರಿಕೆಟ್‌ ಗೆ ಮರಳಲು ಸ್ಫೂರ್ತಿ ನೀಡಿದ ಅಂಡರ್ 23 ತಂಡವನ್ನು ಮಾಡಲು ಸಾಧ್ಯವಾಗದಿದ್ದರೂ, ಅವರು ಪಾಕಿಸ್ತಾನ ಟಿವಿಗಾಗಿ ಆಡುವುದನ್ನು ಮುಂದುವರೆಸಿದರು. ಅಂತಿಮವಾಗಿ 2020/21 ಋತುವಿನಲ್ಲಿ ಆಯ್ಕೆಯಾದರು.

ಟಿ20 ಚೊಚ್ಚಲ ಪಂದ್ಯದಲ್ಲಿ ಮತ್ತೊಂದು ಅದ್ಭುತ ಪ್ರದರ್ಶನ ನೀಡಿದ ಜಮಾಲ್ ದೊಡ್ಡ ಹೆಸರು ಮಾಡಿದರು. ಈ ಪಂದ್ಯದಲ್ಲಿ ಜಮಾಲ್ ಅಂತಾರಾಷ್ಟ್ರೀಯ ಆಟಗಾರರಾದ ಅಹ್ಮದ್ ಶೆಹಜಾದ್, ಶೋಯೆಬ್ ಮಲಿಕ್ ಮತ್ತು ಫಹೀಮ್ ಅಶ್ರಫ್ ಅವರನ್ನು ಔಟ್ ಮಾಡಿ ಮೆರೆದರು. ಅವರು ಪ್ರಬಲವಾದ ಸೆಂಟ್ರಲ್ ಪಂಜಾಬ್ ತಂಡದ ವಿರುದ್ಧ ನಾರ್ದರ್ನ್ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದರಿಂದ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.

ರಾಷ್ಟ್ರೀಯ ಟಿ20 ಕಪ್‌ ನಲ್ಲಿ ನಾರ್ದರ್ನ್‌ ನ ಪರವಾಗಿ ಯಶಸ್ಸು ಜಮಾಲ್ ಅವರನ್ನು ಕಳೆದ ವರ್ಷ ಸೆಪ್ಟೆಂಬರ್‌ ನಲ್ಲಿ ಇಂಗ್ಲೆಂಡ್ ವಿರುದ್ಧ ಅಂತಾರಾಷ್ಟ್ರೀಯ ಕರೆಗೆ ಕಾರಣವಾಯಿತು. ಚೊಚ್ಚಲ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಮಿಂಚಿದ ಅವರು ಅಂತಿಮ ಓವರ್‌ ನಲ್ಲಿ 15 ರನ್‌ ಗಳನ್ನು ರಕ್ಷಿಸಿದರು. ಮೊಯಿನ್ ಅಲಿ ಸ್ಟ್ರೈಕ್‌ ನಲ್ಲಿದ್ದರೂ ಜಮಾಲ್ ನಾಲ್ಕು ಎಸೆತಗಳನ್ನು ಡಾಟ್ ಮಾಡಿ ಆರು ರನ್‌ಗಳ ಗೆಲುವು ಸಾಧಿಸಲು ನೆರವಾದರು.

ಈ ವರ್ಷದ ಪಾಕಿಸ್ತಾನ್ ಸೂಪರ್ ಲೀಗ್‌ ನಲ್ಲಿ ಪೇಶಾವರ್ ಝಲ್ಮಿ ಪರ ಆರು ಪಂದ್ಯಗಳಲ್ಲಿ ಒಂಬತ್ತು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಜಮಾಲ್ ತಮ್ಮ ಆಟವನ್ನು ಮತ್ತಷ್ಟು ಹೆಚ್ಚಿಸಿಕೊಂಡರು. ನಂತರ ಅವರು ಜಿಂಬಾಬ್ವೆ ವಿರುದ್ಧ ಪಾಕಿಸ್ತಾನದ ಎ ತಂಡಕ್ಕಾಗಿ ತಮ್ಮ ಮೊದಲ ವೈಟ್‌ ಬಾಲ್‌ ಪಂದ್ಯದಲ್ಲಿ ಐದು ವಿಕೆಟ್‌ಗಳನ್ನು ಪಡೆದು ಮಿಂಚಿದರು.

ಬಲಗೈ ವೇಗಿ ಜಮಾಲ್ ನಿಯಮಿತವಾಗಿ 140 ಕಿ.ಮೀ ಪ್ರತಿ ಗಂಟೆಗೆ ಎಸೆಯುತ್ತಾರೆ. ಅಷ್ಟೇ ಅಲ್ಲದೆ ಬ್ಯಾಟ್‌ ನೊಂದಿಗೂ ಅವರು T20 ಮತ್ತು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 20 ಕ್ಕಿಂತ ಹೆಚ್ಚಿನ ಸರಾಸರಿಯನ್ನು ಹೊಂದಿದ್ದಾರೆ. ಈ ಎಲ್ಲಾ ಕಾರಣಗಳಿಂದ ಅವರು ಟೆಸ್ಟ್ ತಂಡಕ್ಕೆ ಸೇರಲು ಸಾಧ್ಯವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next