ಕಲಬುರಗಿ: ತೈಲೋತ್ಪನ್ನಗಳಾದ ಪೆಟ್ರೋಲ್, ಡಿಸೆಲ್ ಹಾಗೂ ಎಲ್‌ಪಿಜಿ ಗ್ಯಾಸ್‌ದ ದರ ಹೆಚ್ಚಳ ಆಗಿರುವುದನ್ನು ಖಂಡಿಸಿ, ಬೆಲೆ ಇಳಿಕೆಗೆ ಆಗ್ರಹಿಸಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ನಗರದಲ್ಲಿ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾದರೂ ದೇಶದಲ್ಲಿ ಮಾತ್ರ ತೈಲ ಬೆಲೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗುತ್ತಿವೆ. ಇದನ್ನು ನೋಡಿದರೆ ಕೇಂದ್ರದ ಬಿಜೆಪಿ ಸರ್ಕಾರ ಜನಸಾಮಾನ್ಯರನ್ನು ಲೂಟಿ ಮಾಡುತ್ತಿದೆ ಎಂದೆನಿಸುತ್ತಿದೆ ಎಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರದ ಬಿಜೆಪಿಯ ಜನವಿರೋಧಿ ನೀತಿಗೆ ಪ್ರತಿ ಕಾಂಗ್ರೆಸ್ ವಿರೋಧಿಸದೇ ಮೌನವಾಗಿರುವುದನ್ನು ಗಮನಿಸಿದರೆ ಬೆಲೆ ಹೆಚ್ಚಳವನ್ನು ಅದು ಬೆಂಬಲಿಸುತ್ತಿದೆ ಎನ್ನುವುದು ತಿಳಿಯುತ್ತದೆ. ಹಿಂದಿನ ಕಾಂಗ್ರೆಸ್ ಸರ್ಕಾರದ ಬೆಲೆ ಹೆಚ್ಚಳವನ್ನು ಕೇಂದ್ರದ ಬಿಜೆಪಿ ಸರ್ಕಾರ ಮುಂದುವರಿಸುತ್ತಿದೆ ಎಂದು ಟೀಕಿಸಿದರು. ಯುಪಿಎ ಸರ್ಕಾರದ ಸಂದರ್ಭದಲ್ಲಿ ಗುಜರಾತ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ, ರಾಜನಾಥಸಿಂಗ್‌ರು ತೈಲ ಬೆಲೆ ಹೆಚ್ಚಳ ಖಂಡಿಸಿ, ಅಧಿಕಾರಕ್ಕೆ ಬಂದರೆ ದರ ಇಳಿಸುವ ಭರವಸೆ ನೀಡಿದ್ದರು. ಆ ಭರವಸೆ ಈಡೇರಿಸುವಲ್ಲಿ ವಿಫಲರಾಗಿದ್ದಾರೆ ಎಂದರು.
ಪ್ರಧಾನಿ ಮೋದಿ ಚುನಾವಣೆ ಸಂದರ್ಭದಲ್ಲಿ ಭ್ರಷ್ಟಾಚಾರ ಮುಕ್ತ ಭಾರತ, ಡಿಜಿಟಲ್ ಇಂಡಿಯಾ, ಅಗತ್ಯ ವಸ್ತುಗಳ
ಬೆಲೆ ಇಳಿಕೆ, ಪಾಕಿಸ್ತಾನಕ್ಕೆ ತಕ್ಕ ಉತ್ತರ, ವಿದೇಶದಲ್ಲಿನ ಕಪ್ಪು ಹಣ ದೇಶಕ್ಕೆ ತರುವುದು ಸೇರಿದಂತೆ ಅನೇಕ ಆಶ್ವಾಸನೆಗಳನ್ನು ನೀಡಿದ್ದರೂ, ಆ ಆಶ್ವಾಸನೆಗಳೆಲ್ಲ ಹುಸಿಯಾಗಿವೆ. ಸುಳ್ಳು ಆಶ್ವಾಸನೆ ನೀಡುವುದಲ್ಲದೆ ಸಮಾಜ ಒಡೆಯುವ ಕೆಲಸವನ್ನು ಈಗ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಈಗಲಾದರೂ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡು ತೈಲ ಹಾಗೂ ಗ್ಯಾಸ್ ಸಿಲೆಂಡರ್ ಬೆಲೆ ಕಡಿಮೆ ಮಾಡಬೇಕು. ಇಲ್ಲವಾದರೆ ಮುಂದಿನ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಪಕ್ಷದ ಜಿಲ್ಲಾ ಕೋರ್ ಸಮಿತಿ ಸದಸ್ಯ ಜಗದೀಶ ಬಳ್ಳಾರಿ, ಸೈಯ್ಯದ್ ಖಲೀಲುದ್ದಿನ್, ಈರಣ್ಣಗೌಡ ಪಾಟೀಲ, ಶೇಖರಸಿಂಗ್, ವಿಶಾಲ ಗುತ್ತೇದಾರ, ಕಿರಣ ರಾಠೊಡ, ಮೀರ್ ಮೊಹಸೀನ್, ವಿಶಾಲ ಬದೋಲೆ, ಗಜೇಂದ್ರ ಪಾಟೀಲ, ಶರಣು ಬಿರಾದಾರ, ಶಿವಕುಮಾರ ಕಾಂಬಳೆ ಹಾಗೂ ಇತರರಿದ್ದರು.