ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆಯು ಆಕಾಶವಾಣಿ ಮೂಲಕ ಜ.11ರಿಂದ “ಕಲಿಯುತ್ತಾ ನಲಿಯೋಣ’ ಎಂಬ ಹೊಸ ಕಾರ್ಯಕ್ರಮವನ್ನು ಪ್ರಾರಂಭಿಸುತ್ತಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಹೇಳಿದರು.
1ರಿಂದ 4ನೇ ತರಗತಿ ವರೆಗೆ ಮಕ್ಕಳಿಗಾಗಿ ಇರುವ “ನಲಿ-ಕಲಿ’ ಮತ್ತು “ಕಲಿ-ನಲಿ’ ಕಾರ್ಯಕ್ರಮ ಗಳನ್ನು ಜ.11ರಿಂದ ಎ.5ರ ವರೆಗೆ ಆಕಾಶವಾಣಿ ಪ್ರಸಾರ ಮಾಡಲಿದೆ ಎಂದು ತಿಳಿಸಿದ್ದಾರೆ.
ಸೋಮವಾರದಿಂದ ಶುಕ್ರವಾರ ದವರೆಗೆ ನಿತ್ಯ ಬೆಳಗ್ಗೆ 10ರಿಂದ 10.15ರ ವರೆಗೆ ಒಂದು ಮತ್ತು ಎರಡನೇ ತರಗತಿಗಳಿಗಾಗಿ ಹಾಗೂ 10:15ರಿಂದ 10.30ರ ವರೆಗೆ 3 ಮತ್ತು 4ನೇ ತರಗತಿಗೆ ಹಾಡು, ಕಥೆ, ನಾಟಕ, ಸಂಭಾ ಷಣೆ, ಒಗಟು ಮತ್ತು ವಿವಿಧ ಆಸಕ್ತಿದಾಯಕ ಕಾರ್ಯಕ್ರಮಗಳ ಮೂಲಕ ಆಯಾ ತರಗತಿಗಳ ಕಲಿಕೆ ಮುಂದುವರಿಯುವಂತೆ ಮಾಡಲು ಶಿಕ್ಷಣ ಇಲಾಖೆ ಮುಂದಾಗಿದೆ. 1ರಿಂದ 4ನೇ ತರಗತಿ ವರೆಗೆ ಓದುತ್ತಿರುವ ಮಕ್ಕಳ ಎಲ್ಲ ಪೋಷಕರು ಈ ಕಾರ್ಯಕ್ರಮವನ್ನು ಮಕ್ಕಳೊಂದಿಗೆ ಆಲಿಸಬೇಕು ಎಂದು ಸಚಿವರು ಮನವಿ ಮಾಡಿದ್ದಾರೆ.
ಮಕ್ಕಳ ಪ್ರತಿಭೆಗೂ ಅವಕಾಶ :
ಮಕ್ಕಳು ಕತೆ, ಹಾಡು, ಒಗಟು ಹೇಳುವುದಾದರೆ, ಅದನ್ನು ವಾಟ್ಸ್‌ಆ್ಯಪ್ ನಂಬರ್ 9449417612ಕ್ಕೆ ಕಳಿಸಿದರೆ ಪ್ರಸಾರ ಮಾಡಲಾಗು ವುದು. ಈ ಕಾರ್ಯಕ್ರಮ ರಾಜ್ಯದ 13 ಆಕಾಶವಾಣಿ ಕೇಂದ್ರಗಳಿಂದ ಪ್ರಸಾರವಾಗಿ, ಬಳಿಕ ಯೂಟ್ಯೂಬ್‌ನಲ್ಲಿ ಲಭ್ಯವಿರುತ್ತವೆ ಎಂದು ಸಚಿವರು ತಿಳಿಸಿದ್ದಾರೆ.