Advertisement
ಶಾಸ್ತ್ರಗಳಲ್ಲಿ 64 ವಿದ್ಯೆಗಳನ್ನು ಪ್ರಸ್ತಾಪಿಸಲಾಗಿದ್ದು, ಅವುಗಳಲ್ಲಿ ಧನುರ್ವಿದ್ಯೆ ಕೂಡ ಒಂದು. ಧನುರ್ವಿದ್ಯೆ ಮಹತ್ವ ನಮಗೆ ಕೇವಲ ಪುರಾಣ, ಪುಣ್ಯಕತೆ, ರಾಮಾಯಣ ಹಾಗೂ ಮಹಾಭಾರತದಲ್ಲಿ ಮಾತ್ರ ಗೊತ್ತಾಗುತ್ತದೆ. ಆದರೆ ಧನುರ್ವಿದ್ಯೆಯನ್ನು ಪ್ರಸ್ತುತವಿಲ್ಲ ಎಂದೇ ಹೆಚ್ಚಿನ ಜನ ಭಾವಿಸಿದ್ದಾರೆ. ಇಂಥ ಸಂದರ್ಭದಲ್ಲಿ ತಂತ್ರಜ್ಞಾನದ ಯುಗದಲ್ಲೂ ಧನುರ್ವಿದ್ಯೆ ಪ್ರದರ್ಶನ ಮಾಡುವುದರೊಂದಿಗೆ ಕಲೆಯನ್ನು ಉಳಿಸಿ ಬೆಳೆಸಲು ನಿರಂತರ ಪ್ರಯತ್ನಿಸುತ್ತಿದ್ದಾರೆ ಸುಬ್ಬರಾವ್.
Related Articles
Advertisement
ಸುಬ್ಬರಾವ್ ಅವರ ಕಲಾಕೌಶಲ ಗುರುತಿಸಿದ ಸಂಘ-ಸಂಸ್ಥೆಗಳು ಅವರಿಗೆ “ಆಜ್ ಕಾ ಅರ್ಜುನ್’, “ಅಭಿನವ ಅಶ್ವತ್ಥಾಮ’ ಬಿರುದು ನೀಡಿ ಗೌರವಿಸಿವೆ. ಸುಬ್ಬರಾವ್‌ರ ತಂದೆ ವೆಂಕಟೇಶ್ವರರಾವ್ ತಮ್ಮ 80ನೇ ವಯಸ್ಸಿನಲ್ಲಿ ನೀಡಿದ ಪ್ರದರ್ಶನದಲ್ಲಿ ವ್ಯಕ್ತಿಯೊಬ್ಬರ ಕಣ್ಣುಗಳ ಮೇಲೆ 2 ನಾಣ್ಯಗಳನ್ನಿಟ್ಟು, ಒಂದೇ ಬಿಲ್ಲಿಗೆ ಎರಡು ಬಾಣಗಳನ್ನು ಹೂಡಿ ಕಣ್ಣಿಗೆ ತಾಕದೇ ನಾಣ್ಯಗಳಿಗೆ ಮಾತ್ರ ಬಾಣ ನಾಟುವಂತೆ ಮಾಡಿ ಭೇಷ್ ಎನಿಸಿಕೊಂಡಿದ್ದಾರೆ.
ಬಾಣದ ಮೂಲಕ ಧ್ವಜಾರೋಹಣ ನೆರವೇರಿಸಬೇಕೆಂಬುದು ಸುಬ್ಬರಾವ್ ಅವರ ಬಯಕೆ. ಅದರೊಂದಿಗೆ ಬಾಣಕ್ಕೆ ಹಾರವನ್ನು ಕಟ್ಟಿ, ಅದನ್ನು ಹೂಡಿ ವ್ಯಕ್ತಿಗೆ ಬಾಣದ ಮೂಲಕವೇ ಹಾರ ಹಾಕಬೇಕೆಂಬುದು ಇಚ್ಛೆ. ಈ ದಿಸೆಯಲ್ಲಿ ಪ್ರಯತ್ನಶೀಲರಾಗಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಬಿಲ್ವಿದ್ಯೆಗೆ ಅವಕಾಶ ನೀಡಲಾಗಿದೆ. ಆದರೆ ದೂರದಿಂದ ಗುರಿ ಇಡುವುದಷ್ಟೇ ಬಿಲ್ವಿದ್ಯೆಯಲ್ಲ. ಅದರಲ್ಲಿ ಹಲವು ಬಗೆಗಳಿವೆ. ಸಂಸ್ಕೃತಿಯ ಭಾಗವಾಗಿರುವ ಧನುರ್ವಿದ್ಯೆಯನ್ನು ಉಳಿಸಲೆತ್ನಿಸುವವರಿಗೆ ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಉತ್ತೇಜನ ನೀಡಬೇಕಿದೆ.
ಉಚಿತ ತರಬೇತಿ ನೀಡಲು ಸಿದ್ಧತೆ: ಬಿಲ್ವಿದ್ಯೆಯನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕೆಂಬುದು ನನ್ನ ಹೆಬ್ಬಯಕೆ. ಧನುರ್ವಿದ್ಯೆ ಕಲಿಯಲು ಆಸಕ್ತ ಮಕ್ಕಳಿಗೆ ಉಚಿತವಾಗಿ ತರಬೇತಿ ನೀಡುತ್ತೇನೆ. ನಾನು ಬಿಲ್ವಿದ್ಯೆಯಲ್ಲಿ ಪ್ರಾವೀಣ್ಯನಲ್ಲ. ಇನ್ನೂ ಸಾಧನೆ ಮಾಡಬೇಕಿದೆ. ನನ್ನ ತಂದೆ ತಮ್ಮ 80ನೇ ವಯಸ್ಸಿನಲ್ಲಿ ಬಿಲ್ವಿದ್ಯೆ ಪ್ರದರ್ಶನ ನೀಡಿದ್ದಾರೆ. ಅವರಂತೆ ನಾನು ಕೂಡ ಸಾಧನೆ ಮಾಡಬೇಕೆಂಬ ಬಯಕೆಯಿದೆ. ಮಹಾಭಾರತ ಯುದ್ಧದಲ್ಲಿ ಬಳಕೆಯಾದ ಅಗ್ನಿ ಹೊರಸೂಸುತ್ತ ಸಾಗುವ ಹಾಗೂ ಜಲ ಹೊರಸೂಸುವ ಬಾಣಗಳನ್ನು ತಯಾರಿಸುವ ಕುರಿತು ಸಂಶೋಧನೆ ಮಾಡುತ್ತಿದ್ದೇನೆ ಎನ್ನುತ್ತಾರೆ ಸುಬ್ಬರಾವ್.
ಬಾಣದ ಬಗೆಗಳುಸ್ತ್ರೀ ಬಾಣ: ದೂರದ ಲಕ್ಷ್ಯ ಭೇದಿಸಲು ಇದನ್ನು ಬಳಕೆ ಮಾಡಲಾಗುತ್ತದೆ. ಈ ಬಾಣದ ಮುಂಭಾಗದ ತೂಕ ಹೆಚ್ಚಾಗಿರುತ್ತದೆ. ಪುರುಷ ಬಾಣಕ್ಕೆ ಹಿಂಭಾಗದ ತೂಕ ಹೆಚ್ಚಾಗಿರುತ್ತದೆ. ಇದನ್ನು ಕಠಿಣ ವಸ್ತು ಭೇದಿಸಲು ಬಳಸಲಾಗುತ್ತದೆ. ನಿರಂತರ ಅಭ್ಯಾಸಕ್ಕಾಗಿ ಹಿಂದೆ ಹಾಗೂ ಮುಂದೆ ಸಮಭಾರ ಹೊಂದಿರುವ ನಪುಂಸಕ ಬಾಣವನ್ನು ಬಳಸಲಾಗುತ್ತದೆ. ಬಾಣಗಳ ಆಕೃತಿಯಲ್ಲಿ ಸೂಜಿ, ಈಟಿ, ಅರ್ಧ ಚಂದ್ರ, ನಾಗ ಮೊದಲಾದ ಬಗೆಗಳಿವೆ ಸಂದರ್ಭಕ್ಕನುಗುಣವಾಗಿ ವಿವಿಧ ಬಾಣಗಳನ್ನು ಬಳಸಲಾಗುತ್ತದೆ ಎಂದು ಸುಬ್ಬರಾವ್ ಹೇಳುತ್ತಾರೆ. * ವಿಶ್ವನಾಥ ಕೋಟಿ