ನವದೆಹಲಿ : ಅಫ್ತಾಬ್ ಪೂನಾವಾಲಾ ಶ್ರದ್ಧಾ ವಾಲ್ಕರ್‌ಳ ಪ್ರಕರಣದದ ನಂತರ ಡೇಟಿಂಗ್ ಮಾಡಿದ ಇನ್ನೊಬ್ಬ ಯುವತಿ ಅವನ ಭಯಾನಕ ಕೃತ್ಯದ ಬಗ್ಗೆ ತಿಳಿದು ಆಘಾತಕ್ಕೊಳಗಾಗಿದ್ದಾಳೆ. ಪ್ರಕರಣದ ನಂತರ ಎರಡು ಬಾರಿ ಅಲ್ಲಿಗೆ ಭೇಟಿ ನೀಡಿದಾಗ ಫ್ಲಾಟ್‌ನಲ್ಲಿ ಏನಾಗಿತ್ತು ಎಂಬ ಸುಳಿವು ತನಗೆ ಇರಲಿಲ್ಲ ಎಂದು ಹೇಳಿಕೊಂಡಿರುವುದಾಗಿ ತಿಳಿದು ಬಂದಿದೆ.
ವರದಿಗಳ ಪ್ರಕಾರ, ಅಫ್ತಾಬ್ ಅಕ್ಟೋಬರ್ 12 ರಂದು ತನಗೆ ಅಲಂಕಾರಿಕ ಉಂಗುರವನ್ನು ಉಡುಗೊರೆಯಾಗಿ ನೀಡಿರುವುದಾಗಿ ತಿಳಿಸಿದ್ದಾಳೆ. ಮೂಲಗಳ ಪ್ರಕಾರ ಈ ಉಂಗುರವು ಶ್ರದ್ಧಾಗೆ ಸೇರಿದ್ದಾಗಿದೆ. ಇದನ್ನು ವೃತ್ತಿಯಲ್ಲಿ ಮನೋವೈದ್ಯೆಯಾಗಿರುವ ಅಫ್ತಾಬ್‌ನ ಹೊಸ ಗೆಳತಿಯಿಂದ ವಶಪಡಿಸಿಕೊಳ್ಳಲಾಗಿದೆ ಮತ್ತು ಆಕೆಯ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.
ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ, ತಾನು ಅಕ್ಟೋಬರ್‌ನಲ್ಲಿ ಎರಡು ಬಾರಿ ಅಫ್ತಾಬ್‌ನ ಫ್ಲಾಟ್‌ಗೆ ಭೇಟಿ ನೀಡಿದ್ದೇನೆ. ಆದರೆ ಘಟನೆಯ ಬಗ್ಗೆ ಅಥವಾ ಮನೆಯಲ್ಲಿ ದೇಹದ ಭಾಗಗಳಿರುವ ಬಗ್ಗೆ ತನಗೆ ಯಾವುದೇ ಸುಳಿವು ಇರಲಿಲ್ಲ. ಅಫ್ತಾಬ್ ಎಂದಿಗೂ ಭಯಭೀತನಾಗಿ ಕಾಣಲಿಲ್ಲ ಮತ್ತು ಆಗಾಗ್ಗೆ ತನ್ನ ಮುಂಬೈನ ಮನೆಯ ಬಗ್ಗೆ ಹೇಳುತ್ತಿದ್ದ ಎಂದು ಅವರು ಹೇಳಿಕೊಂಡಿದ್ದಾರೆ. ಮನೋವೈದ್ಯೆ ಅಫ್ತಾಬ್ ನನ್ನು ಡೇಟಿಂಗ್ ಆಪ್ ನಲ್ಲಿ ಭೇಟಿಯಾಗಿದ್ದರು.
‘ಅವನ ನಡವಳಿಕೆಯು ಸಾಮಾನ್ಯವಾಗಿತ್ತು, ಕಾಳಜಿಯುಳ್ಳದ್ದಾಗಿತ್ತು, ಅವನ ಮಾನಸಿಕ ಸ್ಥಿತಿ ಸರಿಯಿಲ್ಲ ಎಂದು ಎಂದಿಗೂ ಭಾವಿಸಲಿಲ್ಲ. ಸುಗಂಧ ದ್ರವ್ಯಗಳ ಸಂಗ್ರಹವಿತ್ತು ಮತ್ತು ಆತ ಆಗಾಗ್ಗೆ ಸುಗಂಧ ದ್ರವ್ಯಗಳನ್ನು ಉಡುಗೊರೆಯಾಗಿ ನೀಡುತ್ತಿದ್ದ’ ಎಂದು ಮನೋವೈದ್ಯೆ ಹೇಳಿಕೊಂಡಿದ್ದಾರೆ.
Related Articles
‘ಅಫ್ತಾಬ್ ತುಂಬಾ ಧೂಮಪಾನ ಮಾಡುತ್ತಿದ್ದ ಆದರೆ ಆಗಾಗ್ಗೆ ಧೂಮಪಾನವನ್ನು ತ್ಯಜಿಸುವ ಬಗ್ಗೆ ಮಾತನಾಡುತ್ತಿದ್ದ’ ಎಂದು ಹೇಳಿರುವುದಾಗಿ ತಿಳಿದು ಬಂದಿದೆ.
‘ಆತ ವಿವಿಧ ರೀತಿಯ ಆಹಾರಗಳನ್ನು ತುಂಬಾ ಇಷ್ಟಪಡುತ್ತಿದ್ದ ಮತ್ತು ಮನೆಯಲ್ಲಿ ವಿವಿಧ ರೆಸ್ಟೋರೆಂಟ್‌ಗಳಿಂದ ಮಾಂಸಾಹಾರಗಳನ್ನು ಆರ್ಡರ್ ಮಾಡುತ್ತಿದ್ದ’ ಎಂದು ಅವರು ಹೇಳಿದ್ದಾರೆ.
ಜಗತ್ತೇ ಬೆಚ್ಚಿ ಬಿದ್ದ ಪ್ರಕರಣದ ವಿವರಗಳು ಹೊರಬಿದ್ದ ನಂತರ ಆಘಾತಕ್ಕೊಳಗಾಗಿರುವ ಆಕೆಗೆ ಈಗ ಕೌನ್ಸೆಲಿಂಗ್ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅಫ್ತಾಬ್ ವಿವಿಧ ಡೇಟಿಂಗ್ ಸೈಟ್‌ಗಳ ಮೂಲಕ ಸುಮಾರು 15 ರಿಂದ 20 ಯುವತಿಯರೊಂದಿಗೆ ಸಂಪರ್ಕ ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆಯ ಸಂದರ್ಭದಲ್ಲಿ, ಪೊಲೀಸರು ಆತನ ಬಂಬಲ್ ಆ್ಯಪ್ ದಾಖಲೆಯನ್ನು ಪರಿಶೀಲಿಸಿದರು ಮತ್ತು ಘಟನೆಯ ಸುಮಾರು 12 ದಿನಗಳ ನಂತರ ಮೇ 30 ರಂದು ಅವನು ಸಂಪರ್ಕಕ್ಕೆ ಬಂದ ಯುವತಿಯನ್ನು ಕಂಡುಕೊಂಡರು.