ಬ್ಯಾಡಗಿ: ಆಧಾರ್ ನೋಂದಣಿಗಾಗಿ ಮಳೆಯನ್ನೂ ಲೆಕ್ಕಿಸದೇ ಸರತಿ ಇಡೀ ದಿನ ನಿಲ್ಲುವ ಶಿಕ್ಷೆ ಮುಂದುವರಿದಿದ್ದು, ಈ ಸಮಸ್ಯೆಯಿಂದ ತಾಲೂಕಿನ ಜನತೆಗೆ ಮುಕ್ತಿ ಸಿಗುವ ಲಕ್ಷಣಗಳೇ ಕಾಣುತ್ತಿಲ್ಲ.
ರವಿವಾರ ಅಂಚೆ ಕಚೇರಿಯಲ್ಲಿ ವಿಶೇಷ ನೋಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ರಜೆ ದಿನವಾಗಿದ್ದರಿಂದ ಹೆಚ್ಚಿನ ಜನ ಸರತಿಯಲ್ಲಿ ನಿಂತಿದ್ದ ಪರಿಣಾಮ ನುಗ್ಗಲು ಏರ್ಪಟ್ಟಿತ್ತು. ಇದು ವಗ್ವಾದಕ್ಕೂ ಕಾರಣವಾಯಿತು.
ಎಸ್‌ಎಸ್‌ಪಿ ಯೋಜನೆಯಡಿ ಶಿಷ್ಯವೇತನಕ್ಕಾಗಿ ಅರ್ಜಿ ಸಲ್ಲಿಸಿದ್ದ ವಿದ್ಯಾರ್ಥಿಗಳ ಅಧಾರ್ ಹೊಂದಾಣಿಕೆ ಆಗಿರಲಿಲ್ಲ. ಹೀಗಾಗಿ ಈ ಯೋಜನೆಯಡಿ ಶಿಷ್ಯವೇತನ ವಂಚಿತರು ಇನ್ನೆರಡು ದಿನಗಳಲ್ಲಿ ಆಧಾರ್ ಮಾಹಿತಿ ಸರಿಪಡಿಸಿಕೊಂಡು ಲಿಂಕ್ ಮಾಡಲು ಇತ್ತಿಚೆಗೆ ನಡೆದ ಜಿಪಂ ಸಾಮಾನ್ಯ ಸಭೆಯಲ್ಲಿ ಜಿಪಂ ಕಾರ್ಯನಿರ್ವಾಹಕಾಧಿಕಾರಿ (ಸಿಎಸ್) ಮೌಖೀಕ ಅದೇಶ ನೀಡಿದ್ದರು. ಆದರೆ, ಆಧಾರ್ ಕೇಂದ್ರದಲ್ಲಿನ ಸಮಸ್ಯೆಯಿಂದಾಗಿ ವಿದ್ಯಾರ್ಥಿಗಳು ಯೋಜನೆಯಿಂದ ವಂಚಿತವಾಗಲಿದ್ದಾರೆ ಎನ್ನುವ ಆತಂಕ ಪಾಲಕರನ್ನು ಕಾಡುತ್ತಿದೆ.
ತಾಲೂಕಿನ ಎಲ್ಲ ಮುಖ್ಯ ಶಿಕ್ಷಕರಿಗೆ ಆಧಾರ ಲಿಂಕ್ ಮಾಡಿಸುವುದೂ ಸೇರಿದಂತೆ 10 ವರ್ಷದೊಳಗಿನ ಮತ್ತು ಅದಕ್ಕೂ ಮೆಲ್ಪಟ್ಟ ಮಕ್ಕಳಿಗೆ ಸ್ಥಳೀಯ ಅಂಚೆ ಕಚೇರಿಯಲ್ಲಿ ಜೂ.30 ಭಾನುವಾರು ವಿಶೇಷ ನೋಂದಣಿ ಅಭಿಯಾನ ಆಯೋಜನೆ ಮಾಡಿತ್ತು.
ಎರಡು ದಿನಗಳಲ್ಲಿ ಆಧಾರ್ ಲಿಂಕ್ ಮಾಡಿಸಬೇಕು ಎಂಬ ಸುದ್ದಿ ತಿಳಿದು ಶಿಕ್ಷಕರು ಮತ್ತು ಪಾಲಕರು ಬೆಳಗಿನಿಂದಲೇ ಸ್ಥಳೀಯ ಅಂಚೆ ಕಚೇರಿ ಏದುರು ಜಮಾಯಿಸಿದರು. ಆದರೆ, ಸಣ್ಣಗೆ ಸುರಿಯಲಾರಂಭಿಸಿದ ಮಳೆ ಪರಿಣಾಮ ಸರತಿಯಲ್ಲಿ ನಿಲ್ಲುವುದು ಕಷ್ಟವಾಗಿತ್ತು. ಅನಿವಾರ್ಯವಾಗಿ ಮಳೆಯನ್ನೂ ಲೆಕ್ಕಿಸದೆ ಆಧಾರ್ ಲಿಂಕ್ ಮಾಡಿಸಲು ಮತ್ತು ಬ್ಯಾಂಕ್ ಖಾತೆ ತೆರೆಯಲು ಮಕ್ಕಳೊಂದಿಗೆ ಆಗಮಿಸಿದ್ದ ಪಾಲಕರು ಮಾತ್ರ ಅಂಚೆ ಕಚೇರಿ ಆವರಣ ಬಿಟ್ಟು ಕದಲಲಿಲ್ಲ.
ಇವೆಲ್ಲದರ ಮಧ್ಯೆ ಅಂಚೆ ಕಚೇರಿಯಲ್ಲಿ ಸರ್ವರ್ ಕೈಕೊಟ್ಟ ಹಿನ್ನೆಲೆಯಲ್ಲಿ ಪಾಲಕರು ಮತ್ತು ಮಕ್ಕಳನ್ನು ಕೆಲಕಾಲ ಸಂಕಷ್ಟಕ್ಕೀಡು ಮಾಡಿತು. ಸರ್ವರ್ ನಡೆಸಿದ ಕಣ್ಣಾಮುಚ್ಚಾಲೆ ಆಟದಿಂದ ಬೇಸರಗೊಂಡ ಕೆಲ ಪಾಲಕರು ಬಂದ ದಾರಿಗೆ ಸುಂಕವಿಲ್ಲ ಎಂದು ಶಪಿಸುತ್ತ ಮನೆಗೆ ತೆರಳಿದರು.
ಭಾರತದ ಪ್ರತಿ ಪ್ರಜೆಯೂ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಆಧಾರ್ ನೋಂದಣಿ ಕಡ್ಡಾಯ ಮಾಡಿರುವ ಕ್ರಮ ಸ್ವಾಗತಾರ್ಹ. ಹೊಸದಾಗಿ ನೋಂದಣಿ ಸೇರಿದಂತೆ ಹೆಸರು, ಜನ್ಮ ದಿನಾಂಕ, ವಿಳಾಸ, ಮೊಬೈಲ್ ಸಂಖ್ಯೆ ಇನ್ನಿತರ ತಿದ್ದುಪಡಿಗಳಿಗಾಗಿ ಜನರು ಆಧಾರ್ ಮಾಡಿಸಬೇಕಾಗಿದೆ. ಆದರೆ, ತಾಲೂಕಿನ ವಿದ್ಯಾರ್ಥಿಗಳು ಹಾಗೂ ಜನರು ಅನುಭವಿಸುತ್ತಿರುವ ಗೋಳಂತೂ ಜಿಲ್ಲಾಡಳಿತ ಕೇಳುವ ಸ್ಥಿತಿಯಲ್ಲಿಲ್ಲ. ಆಧಾರ್‌ಗಾಗಿ ಜನರು ಪರದಾಡುವಂತಹ ಸ್ಥಿತಿ ಕಂಡೂ ಕಾಣದಂತೆ ತಾಲೂಕಾಡಳಿತ ವರ್ತಿಸುತ್ತಿರುವುದು ಬ್ಯಾಡಗಿ ಜನತೆಯ ದುರ್ದೈವವೇ ಸರಿ.