Advertisement

ಆಧಾರ್‌ ನೋಂದಣಿಗೆ ತಪ್ಪದ ನಿತ್ಯ ಪರದಾಟ

10:27 AM Jun 26, 2019 | Team Udayavani |

ಗದಗ: ಮಕ್ಕಳ ಶಾಲಾ ದಾಖಲಾತಿ ಸೇರಿದಂತೆ ಸರಕಾರದ ಪ್ರತಿ ಯೋಜನೆಗಳಿಗೂ ಆಧಾರ್‌ ಕಾರ್ಡ್‌ ಸಲ್ಲಿಕೆ ಕಡ್ಡಾಯ. ಆದರೆ, ಸರ್ವರ್‌ ಸಮಸ್ಯೆ, ಬ್ಯಾಂಕುಗಳ ನಿರಾಸಕ್ತಿಯಿಂದ ಸಾರ್ವಜನಿಕರು ನಿತ್ಯ ಪರದಾಡುವಂತಾಗಿದೆ.ಆಧಾರ್‌ ಕಾರ್ಡ್‌ ನೋಂದಣಿಗಾಗಿ ಜನರು ರಾತ್ರಿಯಿಡೀ ಜಾಗರಣೆ ಮಾಡುವಂತಾಗಿರುವುದು ಶೋಚನೀಯ.

Advertisement

ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪಡಿತರ ಚೀಟಿದಾರರ ಕುಟುಂಬ ಸದಸ್ಯರು ಇ-ಕೆವೈಸಿ ಮಾಡಿಸಬೇಕೆಂದು ಆದೇಶಿಸಿತ್ತು. ಆನಂತರ ಈ ಆದೇಶವನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದರೂ ಜನರು ಮಾತ್ರ ಆಧಾರ್‌ಗೆ ಅರ್ಜಿ ಸಲ್ಲಿಸಲು ಮುಗಿ ಬಿದ್ದಿದ್ದಾರೆ.

ಮಕ್ಕಳ ಶಿಷ್ಯವೇತನ, ಶಾಲಾ ದಾಖಲಾತಿ, ಕೃಷಿ ಯೋಜನೆಗಳಿಗೆ ಅರ್ಜಿ ಸಲ್ಲಿಕೆ ಮತ್ತಿತರೆ ಕಾರಣಗಳಿಂದ ಹೊಸದಾಗಿ ಆಧಾರ್‌ಗೆ ಅರ್ಜಿ ಸಲ್ಲಿಕೆ, ತಿದ್ದುಪಡಿ ಮಾಡಿಸುವವರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಅಲ್ಲದೇ ಆಧಾರ್‌ ನೋಂದಾಯಿಸುವ ಖಾಸಗಿ ಫ್ರಾಂಚೈಸಿಗಳಿಗೆ ನೀಡಿದ್ದ ಅನುಮತಿಯನ್ನು ಸರಕಾರ ಹಿಂಪಡೆದಿರುವುದು ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸಿದೆ.

ಕೆಲ ಕಡೆ ಸರ್ವರ್‌ ಸಮಸ್ಯೆ: ಜಿಲ್ಲಾಡಳಿತ ಭವನದಲ್ಲಿರುವ ಆಧಾರ್‌ ಕೇಂದ್ರ, ಗದಗ ಓನ್‌ ಐಸಿಐಸಿಐ ಹಾಗೂ ಇತರೆ ಒಂದೆರಡು ಬ್ಯಾಂಕ್‌ಗಳಲ್ಲಿ ಮಾತ್ರ ಆಧಾರ್‌ ನೋಂದಾಯಿಸಲಾಗುತ್ತದೆ. ಆ ಪೈಕಿ ಇಲ್ಲಿನ ಗಾಂಧಿ ವೃತ್ತದಲ್ಲಿರುವ ಕೆನರಾ ಬ್ಯಾಂಕ್‌ನಲ್ಲಿ ಸರ್ವಸ್‌ ಸಮಸ್ಯೆಯಿಂದ ಕಳೆದ 15 ದಿನಗಳಿಂದ ಆಧಾರ್‌ ನೋಂದಣಿ ಮಾಡುತ್ತಿಲ್ಲ ಎನ್ನುತ್ತಾರೆ ಬ್ಯಾಂಕ್‌ನ ಸಿಬ್ಬಂದಿ.

ಸಣ್ಣ ಮಕ್ಕಳಿಗೆ ಆಧಾರ್‌ ನೋಂದಾಯಿಸಲ್ಲ: ಗದಗ ತಹಶೀಲ್ದಾರ್‌ ಕಚೇರಿಯಲ್ಲಿರುವ ನೆಮ್ಮದಿ ಕೇಂದ್ರದಲ್ಲಿ ಆಧಾರ್‌ ಕಾರ್ಡ್‌ ನೋಂದಣಿಗೆ ಅಗತ್ಯವಿರುವ ರೆಟಿನಾ ಸ್ಕ್ತ್ರ್ಯಾನರ್‌(ಕಣ್ಣಿನ ಸ್ಕ್ತ್ರ್ಯಾನರ್‌) ಕೊರತೆಯಿಂದ ತಿದ್ದುಪಡಿ ಮಾತ್ರ ಮಾಡಲಾಗುತ್ತದೆ. ಹೀಗಾಗಿ ಹೊಸದಾಗಿ ಹಾಗೂ 20 ವರ್ಷದೊಳಗಿನ ಸಣ್ಣ ಮಕ್ಕಳಿಗೆ ಆಧಾರ್‌ ನೋಂದಾಯಿಸುವುದಿಲ್ಲವೆಂದು ಅಧಿಕೃತವಾಗಿ ಕರಪತ್ರ ಅಂಟಿಸಿದೆ.

Advertisement

ಮಾರುದ್ಧ ಸರದಿ: ಇನ್ನುಳಿದಂತೆ ಜಿಲ್ಲಾಡಳಿತ ಭವನದ ಆಧಾರ್‌ ಕೇಂದ್ರ, ಗದಗ ಓನ್‌ ಹಾಗೂ ಐಸಿಐಸಿಐ ಬ್ಯಾಂಕುಗಳಿಗೆ ಮುಗಿ ಬಿದ್ದಿದ್ದಾರೆ. ಐಸಿಐಸಿಐ ಬ್ಯಾಂಕ್‌ನಲ್ಲಿ ದಿನಕ್ಕೆ 15 ಜನರಿಗೆ ಮಾತ್ರ ಟೋಕನ್‌ ನೀಡಲಾಗುತ್ತಿದೆ. ಬೆಳಗಿನ ಜಾವ 5 ಗಂಟೆ ವೇಳೆಗೆ ಮಾರುದ್ಧ ಸರದಿ ಬೆಳೆದಿರುತ್ತದೆ. ಜಿಲ್ಲಾಡಳಿತ ಭವನ, ಗದಗ ಒನ್‌ ನಲ್ಲಿ ತಲಾ 30 ಜನರಿಗೆ ಅರ್ಜಿ ವಿತರಿಸಲಾಗುತ್ತಿದೆ. ದಿನಕ್ಕೆ ನೂರಾರು ಜನರು ಸರದಿಯಲ್ಲಿ ನಿಲ್ಲುತ್ತಿದ್ದರೂ, ಅನೇಕರಿಗೆ ಅರ್ಜಿ ದೊರೆಯದೇ ವಾಪಾಸ್ಸಾಗುತ್ತಿದ್ದಾರೆ. ಆಧಾರ್‌ ನೋಂದಣಿಗೆ ಕನಿಷ್ಠ ಎರಡ್ಮೂರು ದಿನ ಅಲೆಯಬೇಕು. ಇಲ್ಲವೇ ಒಂದು ದಿನ ಮುನ್ನ ರಾತ್ರಿ ಏಳೆಂಟು ಗಂಟೆಗೆಲ್ಲಾ ಬಂದು ಸರದಿಯಲ್ಲಿ ಕೂರುವಂತಾಗಿದೆ. ಹೀಗಾಗಿ ಕಳೆದ ನಾಲ್ಕೈದು ದಿನಗಳಿಂದ ಮಳೆ, ಗಾಳಿ ಎನ್ನದೇ, ಮಕ್ಕಳೊಂದಿಗೆ ಬರುವ ನಗರ ಹಾಗೂ ಗ್ರಾಮೀಣ ಜನರು ರಾತ್ರಿಯಿಡೀ ಇಲ್ಲೇ ಸೊಳ್ಳೆ ಪರದೆ ಕಟ್ಟಿಕೊಂಡು ಮಲಗುತ್ತಿರುವುದು ಶೋಚನೀಯ.

ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಈ ಕುರಿತು ಕಿಂಚಿತ್ತು ಗಮನ ಹರಿಸುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪ.

ಎಲ್ಲ ಬ್ಯಾಂಕುಗಳಲ್ಲಿ ಆಧಾರ್‌ ಸೆಲ್ ಆರಂಭಿಸಬೇಕೆಂಬ ನಿಮಯಕ್ಕೆ ಬ್ಯಾಂಕ್‌ ಅಧಿಕಾರಿಗಳು ಕಿಮ್ಮತ್ತು ನೀಡುತ್ತಿಲ್ಲ. ಸರಕಾರಿ ಸಂಸ್ಥೆಗಳೊಂದಿಗೆ ಬ್ಯಾಂಕ್‌ ಅಧಿಕಾರಿಗಳು ಕೈ ಜೋಡಿಸಿದರೆ, ಆಧಾರ್‌ ಕಾರ್ಡ್‌ ಸಮಸ್ಯೆ ಕೆಲವೇ ದಿನಗಳಲ್ಲಿ ದೂರವಾಗುತ್ತದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು.•ಚನ್ನಾರೆಡ್ಡಿ ಗೂಳರೆಡ್ಡಿ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರು

ಆಧಾರ್‌ ಕಾರ್ಡ್‌ ಅರ್ಜಿಗಾಗಿ ಎರಡು ದಿನಗಳಿಂದ ಬೆಳಗಿನ ಜಾವವೇ ಬಂದು ಸರದಿಯಲ್ಲಿ ನಿಂತಿದ್ದರೂ ಅರ್ಜಿ ಸಿಕ್ಕಿಲ್ಲ. ಹೀಗಾಗಿ ಕಳೆದ ರಾತ್ರಿಯೇ ಬಂದು ಇಲ್ಲಿ ಮಲಗಿದ್ದೇನೆ. ಇವತ್ತಾದರೂ, ಸಿಗುತ್ತೋ ಇಲ್ಲವೋ ಗೊತ್ತಿಲ್ಲ.•ನಾಗರಾಜ ಹೆಳವಿ,ಬೆಟಗೇರಿ ನಿವಾಸಿ.

ಆಧಾರ್‌ ಕಾರ್ಡ್‌ ನೋಂದಣಿ ರಾಜ್ಯಾದ್ಯಂತ ಸಮಸ್ಯೆಯಿದೆ. ಸದ್ಯ ಜಿಲ್ಲಾ ಕೇಂದ್ರದಲ್ಲಿ ಮೂರು, ತಾಲೂಕಿನಲ್ಲಿ ತಲಾ ಒಂದು ಆಧಾರ್‌ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಮುಂದಿನ 15 ದಿನಗಳಲ್ಲಿ ಇನ್ನೂ ಮೂರು ಲಾಗಿನ್‌ ಬರಲಿದ್ದು, ಸಮಸ್ಯೆ ಬಗೆಹರಿಯಲಿದೆ. ಅದರೊಂದಿಗೆ ಬ್ಯಾಂಕುಗಳಲ್ಲಿ ಆಧಾರ್‌ ಸೆಲ್ ಆರಂಭಿಸಲು ಸಂಬಂಧಿಸಿದವರಿಗೆ ಸೂಚಿಸುತ್ತೇನೆ.

 

•ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next