Advertisement

ಕೋಟೆ ತಾಲೂಕು ಕೇಂದ್ರದಲ್ಲೇ ಆಧಾರ್‌ ನೊಂದಣಿಗೆ ಪರದಾಟ

01:17 PM Jan 03, 2018 | Team Udayavani |

ಎಚ್‌.ಡಿ.ಕೋಟೆ: ಇಲ್ಲಿನ ತಾಲೂಕು ಕೇಂದ್ರದಲ್ಲೇ ಆಧಾರ್‌ ನೋಂದಣಿಗೆ ನೂರೆಂಟು ಸಮಸ್ಯೆ, ಪರಿಣಾಮ ದಿನವಿಡೀ ಸಾರ್ವಜನಿಕರು ಆಧಾರ್‌ ನೋಂದಣಿಗೆ ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ಇದ್ದರೂ ಅಧಿಕಾರಿಗಳು ಇನ್ನೂ ಗಮನ ಹರಿಸಿಲ್ಲ.

Advertisement

ಪ್ರತಿಯೊಬ್ಬ ಪ್ರಜೆಯೂ ಸರ್ಕಾರದ ಯಾವುದೇ ಸೌಲಭ್ಯ ಪಡೆಯ ಬೇಕಾದರೆ ಆಧಾರ್‌ ಕಾರ್ಡ್‌ ಅವಶ್ಯಕವಾಗಿದೆ. ಆದರೆ, ಪಟ್ಟಣದ ಹಳೇ ತಾಲೂಕು ಕಚೇರಿ ಮತ್ತು ಅಂಚೆ ಕಚೇರಿಯಲ್ಲಿ ನಡೆಯುತ್ತಿರುವ ಆಧಾರ್‌ ನೋಂದಣಿ ಕೇಂದ್ರದಲ್ಲಿ ನೂರೆಂಟು ಸಮಸ್ಯೆಯಿಂದ ಜನರು ಪರದಾಡುವಂತ್ತಾಗಿದೆ.

ಮಿನಿ ವಿಧಾನಸೌಧ,ನಾಡ ಕಚೇರಿಯಲ್ಲಿ ನೋದಣಿ ಇಲ್ಲ: ಈ ಹಿಂದೆ ತಾಲೂಕು ಕೇಂದ್ರವಾದ ಎಚ್‌.ಡಿ.ಕೋಟೆಯ ಮಿನಿ ವಿಧಾನ ಸೌಧ ಹಾಗೂ ಹೋಬಳಿ ಕೇಂದ್ರಗಳಾದ ತಾಲೂಕಿನ ಅಂತರಸಂತೆ ಸರಗೂರು ಹಂಪಾಪುರ ನಾಡ ಕಚೇರಿಗಳಲ್ಲಿ ಆಧಾರ್‌ ನೋಂದಣಿ ಕಾರ್ಯ ನಡೆಯುತ್ತಿತ್ತು.

ದಿನ ಕಳೆದಂತೆ ಹೋಬಳಿ ಕೇಂದ್ರಗಳಲ್ಲಿ ಸಿಬ್ಬಂದಿ ಕೊರತೆ ಹಾಗೂ ಕರೆಂಟ್‌ ಸಮಸ್ಯೆಯಿಂದ ಆಧಾರ್‌ ನೋಂದಣಿ ಕಾರ್ಯ ಅಷ್ಟಾಗಿ ನಡೆಯದ ಕಾರಣ ಜನರು ಪಟ್ಟಣದ ಮಿನಿವಿಧಾನ ಸೌಧದ ನೆಮ್ಮದಿ ಕೇಂದ್ರಕ್ಕೆ ಬರುತ್ತಿದ್ದರು. ಈಗ ಇಲ್ಲೂ ಕೂಡ ಆಧಾರ್‌ ನೋಂದಣಿ ನಡೆಯುವುದು ನಿಂತು ತಿಂಗಳುಗಳೇ ಕಳೆದಿದೆ.

ದಿನಕ್ಕೆ 25 ಜನರಿಗಷ್ಟೇ ನೋಂದಣಿ: ಆಧಾರ್‌ ಕಾರ್ಡ್‌ ಪಡೆಯಲು ತಮ್ಮ ಕೆಲಸ ಕಾರ್ಯ ಬಿಟ್ಟು ನೋಂದಣಿ ಕೇಂದ್ರ ಎದುರು ದಿನನಿತ್ಯ ನೂರಾರು ಜನರು ಬಂದು ಸರದಿ ಸಾಲಿನಲ್ಲಿ ಕಾದು ನಿಂತರೂ ಒಂದು ಕೇಂದ್ರದಲ್ಲಿ 25 ಜನರಿಗೆ ಮಾತ್ರ ನೋಂದಣಿ ನಡೆಯುತ್ತಿದ್ದು, ಎರಡು ನೋಂದಣಿ ಕೇಂದ್ರಗಳಿಂದ 50 ಜನರ ನೋಂದಣಿ ಮಾತ್ರ ಸಾಧ್ಯವಾಗಿದೆ.

Advertisement

ಹಾಗಾಗಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ ಕೊರೆಯುವ ಚಳಿಯನ್ನು ಲೆಕ್ಕಿಸದೇ ಬೆಳ್ಳಂ ಬೆಳಿಗ್ಗೆಯೇ ಆಧಾರ್‌ ನೋಂದಣಿ ಕೇಂದ್ರದ ಬಳಿ ವೃದ್ಧರು ಸೇರಿದಂತೆ ಮಹಿಳೆಯರು ಹಾಗೂ ಮಕ್ಕಳು ದಿನಗಟ್ಟಲೇ ನಿಂತರೂ ಸರ್ವರ್‌ ತೊಂದರೆ ಮತ್ತು ಇನ್ನಿತರ ಕಾರಣಗಳಿಂದಾಗಿ ಆಧಾರ್‌ ಕಾರ್ಡ್‌ ನೋಂದಣಿ ಆಗದೆ ಪರಿತಪಿಸುತ್ತಿದ್ದಾರೆ.

ಇನ್ನಾದರೂ ಸಂಸದರು, ಜಿಲ್ಲಾ ಉಸ್ತುವರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಇತ್ತ ಗಮನಹರಿಸಿ ಇಲ್ಲಿಯ ಆಧಾರ್‌ ನೋಂದಣಿ ಕೇಂದ್ರದ ಸಮಸ್ಯೆ ನಿವಾರಿಸಬೇಕೆನ್ನುವುದು ಸಾರ್ವಜನಿಕರ ಮನವಿ.

ಅಧಿಕಾರಿಗಳ ಇಚ್ಚಾಶಕ್ತಿ ಕೊರತೆಯಿಂದ ಜನರಿಗೆ ಸಂಕಷ್ಟ, ಆಧಾರ್‌ ಕಾರ್ಡ್‌ ಪ್ರತಿಯೊಬ್ಬರಿಗೂ ಅತ್ಯವಶ್ಯ, ಅಧಿಕಾರಿಗಳ ಇಚ್ಚಾಶಕ್ತಿ ಕೊರತೆಯಿಂದಾಗಿ ಜನರು ಆಧಾರ್‌ ನೋಂದಣಿಗೆ ಪರದಾಡುವಂತ್ತಾಗಿದೆ. ಸಂಬಂಧಪಟ್ಟವರು ಹೆಚ್ಚು ಕಡೆ ಆಧಾರ್‌ ನೋಂದಣಿ ಕೇಂದ್ರ ಆರಂಭಿಸಿ, ಸಿಬ್ಬಂದಿ ನೇಮಕ ಮಾಡಿ ಜನರಿಗೆ ಅನುಕೂಲ ಮಾಡಿಕೊಡಬೇಕು.
-ಲೋಕೇಶ್‌ ಆರಾಧ್ಯ, ಎಚ್‌.ಡಿ.ಕೋಟೆ.

* ಬಿ.ನಿಂಗಣ್ಣಕೋಟೆ

Advertisement

Udayavani is now on Telegram. Click here to join our channel and stay updated with the latest news.

Next