ಹೊಸದಿಲ್ಲಿ: ಇನ್ನು ಬ್ಯಾಂಕ್‌ನಲ್ಲಿ ಅಕೌಂಟ್ ಓಪನ್ ಮಾಡಬೇಕೆಂದರೆ ನಿಮ್ಮಲ್ಲಿ ಆಧಾರ್ ಇರಲೇಬೇಕು! ಹೌದು, ಇದು ಕೇಂದ್ರ ಸರಕಾರ ಶುಕ್ರವಾರ ಹೊರಡಿಸಿರುವ ಆದೇಶ. ಈ ನಿಯಮಗಳ ಪ್ರಕಾರ, ಬ್ಯಾಂಕ್ ಅಕೌಂಟ್ ತೆರೆಯುವಾಗ ಆಧಾರ್ ಸಂಖ್ಯೆ ನೀಡಲೇಬೇಕು. ಇದಷ್ಟೇ ಅಲ್ಲ, 50 ಸಾವಿರ ರೂ.ಗಳಿಗಿಂತ ಮೇಲ್ಪಟ್ಟು ಬ್ಯಾಂಕ್ ವಹಿವಾಟು ನಡೆಸಲೂ ಆಧಾರ್ ಬೇಕು ಎಂದು ಹೇಳಿದೆ. ಈಗಾಗಲೇ ಬ್ಯಾಂಕ್ ಅಕೌಂಟ್ ಹೊಂದಿರುವವರು ಕೂಡ ಇದೇ ವರ್ಷಾಂತ್ಯದ ವೇಳೆಗೆ ಆಧಾರ್ ಅನ್ನು ಜೋಡಿಸಲೇಬೇಕು, ಇಲ್ಲದಿದ್ದರೆ ಅಕೌಂಟ್ ಸ್ತಂಭನವಾಗುತ್ತದೆ ಎಂದೂ ಸೂಚನೆ ನೀಡಿದೆ.
ಆರಂಭದಲ್ಲಿ ಆಧಾರ್ ಕಡ್ಡಾಯವಲ್ಲ, ಬೇಕೆಂದರೆ ಮಾತ್ರ ಬಳಸಿಕೊಳ್ಳಬಹುದು ಎಂದು ಹೇಳಿದ್ದ ಕೇಂದ್ರ ಸರಕಾರ, ಈಗ ಒಂದೊಂದೇ ಸೌಲಭ್ಯ, ಯೋಜನೆಗಳಿಗೆ ಕಡ್ಡಾಯ ಮಾಡಿ ಆದೇಶ ಹೊರಡಿಸುತ್ತಿದೆ. ಈಗಾಗಲೇ ಸರಕಾರದ ಸಬ್ಸಿಡಿ ಪಡೆಯಬೇಕು ಎಂದರೆ ಆಧಾರ್ ಬೇಕೇಬೇಕು ಎಂಬ ಸ್ಥಿತಿ ನಿರ್ಮಾಣವಾಗಿದೆ. ಇತ್ತೀಚೆಗಷ್ಟೇ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವಾಗ ಪಾನ್ ಜತೆ ಆಧಾರ್ ಅನ್ನು ಕಡ್ಡಾಯವಾಗಿ ಜೋಡಿಸಲೇಬೇಕು ಎಂದು ಹೇಳಿದೆ. ಇದಕ್ಕೆ ಭಾಗಶಃ ತಡೆ ಕೊಟ್ಟಿರುವ ಸುಪ್ರೀಂಕೋರ್ಟ್, ಈಗಾಗಲೇ ಆಧಾರ್ ಕಾರ್ಡ್ ಮಾಡಿಸಿ ಕೊಂಡಿರುವವರು ಕಡ್ಡಾಯವಾಗಿ ಜೋಡಿಸಿ, ಮಾಡಿಸದೆ ಇರುವವರು ಸದ್ಯಕ್ಕೆ ನಿಶ್ಚಿಂತೆಯಿಂದ ಇರಿ ಎಂದು ಸೂಚಿಸಿದೆ. ಆದರೆ, ಆಧಾರ್ ಕಾರ್ಡ್ ಪಡೆಯದೆ ಇರುವುದಕ್ಕೆ ಸರಿಯಾದ ಕಾರಣ ಕೊಟ್ಟರೆ ಮಾತ್ರ ಬಚಾವ್, ಇಲ್ಲದಿದ್ದರೆ ಪಾನ್ ನಿಷೇಧವಾಗುವ ಭೀತಿಯೂ ಇದೆ.
ನಿಯಮಾವಳಿ ಏನು ಹೇಳುತ್ತೆ?: ಸಣ್ಣ ಖಾತೆಗಳ ಕುರಿತಾಗಿಯೂ ಸರ ಕಾರ ನಿಯಮಾವಳಿಗಳನ್ನು ಮತ್ತಷ್ಟು ಬಿಗುಗೊಳಿಸಿದೆ. ಸೂಕ್ತ ಕೆವೈಸಿ (ನೋ ಯುವರ್ ಕಸ್ಟಮರ್) ದಾಖಲೆಗಳು ಇಲ್ಲದೆ ಬ್ಯಾಂಕ್ ಖಾತೆಗಳನ್ನು ತೆರೆದಿದ್ದರೂ 50 ಸಾವಿರ ರೂ.ವರೆಗೆ ಮಾತ್ರ ವಹಿವಾಟು ಮಾಡಲು ಸಾಧ್ಯವಿದೆ. ಅಲ್ಲದೆ, ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಇರುವ ಬ್ಯಾಂಕ್‌ಗಳಲ್ಲಿ ಮಾತ್ರ ಖಾತೆಗಳನ್ನು ತೆರೆಯಲು ಅವಕಾಶವಿದೆ. ವಿದೇಶದಿಂದ ಖಾತೆಗೆ ಹಣ ಜಮೆಯಾದದ್ದನ್ನು ನೋಡಲು ಸಾಧ್ಯವಿರುವ, ಮಾಸಿಕ, ವಾರ್ಷಿಕ ಮಿತಿಗಳನ್ನು ಉಲ್ಲಂಘಿಸಿಲ್ಲ ಎಂದು ಮನದಟ್ಟಾಗುವ ವ್ಯವಸ್ಥೆಯಿರುವ ಬ್ಯಾಂಕ್‌ಗಳಲ್ಲಿ ಮಾತ್ರ ಖಾತೆ ತೆರೆಯಲು ಅವಕಾಶವಿದೆ. ಇಂತಹ ಸಣ್ಣ ಖಾತೆ ಗಳನ್ನು 12 ತಿಂಗಳು ಚಾಲನೆ ಸ್ಥಿತಿ ಯಲ್ಲಿ ಇಡಬಹುದಾಗಿದ್ದು, ಬಳಿಕ 12 ತಿಂಗಳ ಒಳಗೆ ಖಾತೆದಾರರು ಆಧಾರ್ ಸಹಿತ ಸೂಕ್ತ ದಾಖಲೆಗಳನ್ನು ನೀಡಬೇಕಾಗುತ್ತದೆ.
ಜು. 1ರಿಂದ ವ್ಯಕ್ತಿಗಳು, ಕಂಪೆನಿಗಳು, ಪಾಲುದಾರಿಕೆ ಸಂಸ್ಥೆಗಳು 50 ಸಾವಿರ ರೂ. ಮೇಲ್ಪಟ್ಟ ಹಣಕಾಸು ವ್ಯವಹಾರಗಳ ವೇಳೆ ಪಾನ್ ಅಥವಾ ಫಾರಂ ನಂ. 60 ಜತೆಗೆ ಆಧಾರ್ ಸಂಖ್ಯೆಯನ್ನು ನೀಡುವುದು ಕಡ್ಡಾಯವಾಗಿದೆ. ಒಂದು ವೇಳೆ ಜು.1ರ ಬಳಿಕ ವ್ಯಕ್ತಿಯೊಬ್ಬನ ಬಳಿ ಆಧಾರ್ ಇಲ್ಲವೆಂದಾದರೆ, ಆತ ಖಾತೆ ತೆರೆಯುವ ವೇಳೆ ಆಧಾರ್ ಅಪ್ಲಿಕೇಶನ್ ಸಂಖ್ಯೆಯನ್ನು ನೀಡಬೇಕಾಗುತ್ತದೆ. ಅಲ್ಲದೇ ಬಳಿಕ ಆರು ತಿಂಗಳ ಒಳಗಾಗಿ ಆಧಾರ್ ಸಂಖ್ಯೆಯನ್ನು ಹಾಜರುಪಡಿಸಬೇಕಾಗುತ್ತದೆ. ಒಂದು ವೇಳೆ ಖಾತೆದಾರ ಆರು ತಿಂಗಳ ಬಳಿಕವೂ ಆಧಾರ್ ಹಾಜರುಪಡಿಸದೇ ಇದ್ದಲ್ಲಿ, ಮುಂದಿನ ಹಣಕಾಸು ವ್ಯವಹಾರದ ಆರು ತಿಂಗಳ ಒಳಗಾಗಿ ಆಧಾರ್ ಸಂಖ್ಯೆಯನ್ನು ನೀಡಬೇಕಾಗುತ್ತದೆ.
– ಇನ್ನು ಕಂಪೆನಿಗಳಿಗೆ ಸಂಬಂಧಿಸಿದಂತೆ ಅದರ ಮ್ಯಾನೇಜರ್‌ಗಳು, ಸಿಬಂದಿ ಮತ್ತಿತರರು ಹಣಕಾಸು ವ್ಯವಹಾರ ಸಂದರ್ಭ ಆಧಾರ್ ಸಂಖ್ಯೆ ನೀಡಬೇಕಿರುತ್ತದೆ.