ಹೊಸದಿಲ್ಲಿ : ಆಧಾರ್ ಕುರಿತ ಎಲ್ಲ ವಿವಾದಿತ ವಿಷಯಗಳನ್ನು ತನ್ನ ಸಾಂವಿಧಾನಿಕ ಪೀಠವು ಅಂತಿಮವಾಗಿ ನಿರ್ಧರಿಸಲಿದೆ ಎಂದು ಸುಪ್ರೀಂ ಕೋರ್ಟ್ ಇಂದು ಶುಕ್ರವಾರ ಹೇಳಿದೆ.
ಆಧಾರ್ ಕುರಿತ ಎಲ್ಲ ಪ್ರಶ್ನೆಗಳನ್ನು ತೀರ್ಮಾನಿಸುವ ದಿಶೆಯಲ್ಲಿ ಸಾಂವಿಧಾನಿಕ ಪೀಠವನ್ನು ರಚಿಸುವಂತೆ ಕಕ್ಷಿದಾರರು ಸುಪ್ರೀಂ ಕೋರ್ಟಿನ ವರಿಷ್ಠ ನ್ಯಾಯಮೂರ್ತಿಗಳನ್ನು ಒತ್ತಾಯಿಸಬೇಕು ಎಂದು ಜಸ್ಟಿಸ್ ಚಲಮೇಶ್ವರ್ ನೇತೃತ್ವದ ಮೂವರು ಸದಸ್ಯರನ್ನು ಒಳಗೊಂಡ ಪೀಠವು ಹೇಳಿತು.
“ಕಕ್ಷಿದಾರರಾಗಿರುವ ನೀವು (ಅರ್ಜಿದಾರರು ಮತ್ತು ಕೇಂದ್ರ ಸರಕಾರ) ಆಧಾರ್ ಕುರಿತ ಎಲ್ಲ ವಿವಾದಿತ ವಿಷಯಗಳನ್ನು ಅಂತಿಮವಾಗಿ ತೀರ್ಮಾನಿಸುವ ಸಲುವಾಗಿ ಸಾಂವಿಧಾನಿಕ ಪೀಠ ರಚಿಸಬೇಕೆಂದು ಸುಪ್ರೀಂ ಕೋರ್ಟಿನ ವರಿಷ್ಠ ನ್ಯಾಯಮೂರ್ತಿಯನ್ನು ಒತ್ತಾಯಿಸಬೇಕೆಂದು ನಾವು ಸಲಹೆ ಮಾಡುತ್ತೇವೆ’ ಎಂಬುದಾಗಿ ಜಸ್ಟಿಸ್ ಎ ಎ ಖಾನ್‌ವಿಲ್ಕರ್ ಮತ್ತು ಜಸ್ಟಿಸ್ ನವೀನ್ ಸಿನ್ಹಾ ಅವರನ್ನು ಒಳಗೊಂಡ ಪೀಠವು ಹೇಳಿತು.
ಪೀಠದ ಸಲಹೆಯ ಪ್ರಕಾರ ತಾವು ವರಿಷ್ಠ ನ್ಯಾಯಮೂರ್ತಿಯವರನ್ನು ಕೋರುವುದಾಗಿ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಮತ್ತು ಹಿರಿಯ ನ್ಯಾಯವಾದಿ ಶ್ಯಾಮ್ ದಿವಾನ್ ಅವರು ಹೇಳಿದರು.
ಸಮಾಜ ಕಲ್ಯಾಣ ಕಾರ್ಯಕ್ರಮಗಳ ಲಾಭವನ್ನು ಪಡೆಯುವುದಕ್ಕೆ ಆಧಾರ್ ನಂಬರ್ ಕಡ್ಡಾಯಗೊಳಿಸುವ ಕೇಂದ್ರದ ಅಧಿಸೂಚನೆಗೆ ಮಧ್ಯಾವಧಿ ನೀಡಲು ರಜಾ ಪೀಠದ ಸುಪ್ರೀಂ ಪೀಠವು ಕಳೆದ ಜೂನ್ 27ರಂದು ನಿರಾಕರಿಸಿತ್ತು. ಆದರೆ ಸರಕಾರ ಆಧಾರ್ ಇಲ್ಲದವರು ಅಂತಹ ಯೋಜನೆಗಳ ಲಾಭದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿತ್ತು.