Advertisement

ಪಿಂಚಣಿ ಪಡೆಯಲೂ ಇನ್ನು ಆಧಾರ್‌ ಕಡ್ಡಾಯ

12:20 PM Jun 03, 2017 | |

ಶಿವಮೊಗ್ಗ: ಸಾಮಾಜಿಕ ಭದ್ರತಾ ಯೋಜನೆಯಡಿ ನೀಡಲಾಗುವ ವಿವಿಧ ಪಿಂಚಣಿಗಳ ದುರ್ಬಳಕೆ ತಡೆಯಲು ಕೇಂದ್ರ ಸರ್ಕಾರ ಈಗ ಆಧಾರ್‌ ಮೊರೆ ಹೋಗಿದೆ.

Advertisement

ಫ‌ಲಾನುಭವಿಗಳು ಖಾತೆ ತೆರೆಯುವುದು ಮತ್ತು ಆಧಾರ್‌ ಲಿಂಕ್‌ ಮಾಡುವುದನ್ನು ಕಡ್ಡಾಯಗೊಳಿಸಿದೆ. ಈ ಮೂಲಕ ಅಕ್ರಮ
ತಡೆಗಟ್ಟಲು ನಿರ್ಧರಿಸಲಾಗಿದೆ.

ಯಾವುದೇ ಪಿಂಚಣಿ ಪಡೆಯುವ ಫಲಾನುಭವಿ ವಿಧಿಸಲಾದ ಗಡುವಿನೊಳಗೆ ಬ್ಯಾಂಕ್‌ ಅಥವಾ ಅಂಚೆ ಕಚೇರಿಯಲ್ಲಿ
ಉಳಿತಾಯ ಖಾತೆ ತೆರೆಯಬೇಕು. ಅದಕ್ಕೆ ಆಧಾರ್‌ ಅನ್ನು ಕಡ್ಡಾಯವಾಗಿ ಲಿಂಕ್‌ ಮಾಡಬೇಕು. ಇಲ್ಲದಿದ್ದರೆ ಅಂತಹ ಫಲಾನುಭವಿಯ ಹೆಸರನ್ನು ಪಟ್ಟಿಯಿಂದ ಕೈಬಿಡಲು ನಿರ್ಧರಿಸಲಾಗಿದೆ. ಈ ಮೂಲಕ ನಕಲಿ ಖಾತೆ ಮೂಲಕ ಲಾಭ ಪಡೆಯುತ್ತಿರುವ ಫಲಾನುಭವಿಗಳನ್ನು ಗುರುತಿಸಲಾಗುವುದು. ಅಂದಾಜಿನ ಪ್ರಕಾರ ಕರ್ನಾಟಕ ಒಂದರಲ್ಲಿಯೇ ಪ್ರತಿ ತಿಂಗಳು 5 ಕೋಟಿ ರೂ. ಉಳಿಯಲಿದೆ .

ವಿಧವಾ, ಅಂಗವಿಕಲ, ವೃದ್ಧಾಪ್ಯ ವೇತನ ಸೇರಿ ರಾಜ್ಯದಲ್ಲಿ ಸುಮಾರು 44 ಲಕ್ಷ ಫಲಾನುಭವಿಗಳಿದ್ದಾರೆ. ಈವರೆಗೆ 28 ಲಕ್ಷ ಜನ ಮಾತ್ರ ತಮ್ಮ ಖಾತೆಗೆ ಆಧಾರ್‌ ಜೋಡಿಸಿದ್ದಾರೆ. ಈಗಾಗಲೇ ಕೇಂದ್ರ ಸರ್ಕಾರ ರಾಜ್ಯಗಳಿಗೆ ಈ ಕುರಿತು ಸುತ್ತೋಲೆ
ಕಳುಹಿಸಿದೆ. ಈ ಹಿಂದೆ ಮಾರ್ಚ್‌ ತಿಂಗಳಿಗೆ ಆಧಾರ್‌ ಲಿಂಕ್‌ ಮತ್ತು ಖಾತೆ ತೆರೆಯಲು ಸಮಯ ನಿಗದಿಪಡಿಸಲಾಗಿತ್ತು.

ಆದರೆ, ವಿವಿಧ ಕಾರಣಗಳಿಗಾಗಿ ಜೂನ್‌ ತಿಂಗಳವರೆಗೆ ಮುಂದೂಡಲ್ಪಟ್ಟಿತ್ತು. ಈಗ ಜೂನ್‌ ಅಂತ್ಯದೊಳಗೆ ಕಡ್ಡಾಯವಾಗಿ ಜಾರಿಯಾಗಲಿದೆ ಎಂದು ಮೂಲಗಳು ತಿಳಿಸಿವೆ.

Advertisement

ದುರ್ಬಳಕೆ: ಆಧಾರ್‌ ಜೋಡಣೆ ಮೂಲಕ ನಕಲಿ ಖಾತೆಗಳನ್ನು ಪತ್ತೆ ಹಚ್ಚುವುದು ಮುಖ್ಯ ಉದ್ದೇಶ. ಇಂದಿರಾ ಗಾಂಧಿಯವರು
ಪ್ರಧಾನಿಯಾಗಿದ್ದಾಗ ತಂದ ಪಿಂಚಣಿ ಯೋಜನೆ ಈಗಲೂ ಇದೆ. ಆಗಿನಿಂದ ಈಗಿನವರೆಗೆ ಮೃತರ ಪಟ್ಟಿಯನ್ನು ಸರಿಯಾಗಿ
ಅಪ್‌ಡೇಟ್‌ ಮಾಡಿಲ್ಲ ಎನ್ನುತ್ತಾರೆ ಹಿರಿಯ ಅಧಿಕಾರಿಗಳು. ಈ ಎಲ್ಲ ಕಾರಣಗಳಿಂದ ಆಧಾರ್‌ ಲಿಂಕ್‌ ಕಡ್ಡಾಯ ಜಾರಿಗೊಳಿಸಲಾಗುತ್ತಿದೆ.

ಆನ್‌ಲೈನ್‌ ಪಾವತಿ: ಜೂನ್‌ ಒಂದರಿಂದ ಎಲ್ಲ ಹಳೆಯ ಖಾತೆಗಳಿಗೆ ಆಧಾರ್‌ ಲಿಂಕ್‌ ಮಾಡಬೇಕು ಮತ್ತು ಬ್ಯಾಂಕ್‌
ಅಥವಾ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ತೆರೆಯಬೇಕು. ಇದಕ್ಕೆ ಆನ್‌ಲೈನ್‌ ಮೂಲಕವೇ ಹಣ ಪಾವತಿಯಾಗುವಂತೆ
ನೋಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

ಫಲಾನುಭವಿಯ ಹೆಸರು ಮತ್ತು ಆಧಾರ್‌ ಕಾರ್ಡ್‌ನಲ್ಲಿನ ಹೆಸರಿನಲ್ಲಿ ಹೊಂದಾಣಿಕೆಯ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿತ್ತು.

ಇದನ್ನು ಸರಿಪಡಿಸಲು ಆದ್ಯತೆ ನೀಡಲಾಗಿದೆ. ಇಲಾಖೆಯು ಕಂದಾಯ ಅಧಿಕಾರಿಗಳ ಮೂಲಕ ಹಾಗೂ ಬ್ಯಾಂಕ್‌ ಹೊರಗುತ್ತಿಗೆ ಮೂಲಕ ನೇಮಿಸಿಕೊಂಡ ಏಜೆನ್ಸಿಯ ಮೂಲಕ ಮತ್ತು ಅಂಚೆ ಇಲಾಖೆ ತನ್ನದೇ ರೀತಿಯಲ್ಲಿ ಹೆಸರು ದೃಢಪಡಿಸಿಕೊಳ್ಳುವ ಕೆಲಸ ಮಾಡುತ್ತಿವೆ.

ಹೆಸರೇ ರದ್ದು: ಪಿಂಚಣಿ ಇಲಾಖೆಯು ಕೆ-2 ಸಾಫ್ಟ್‌ವೇರ್‌ ಮೂಲಕ ಪ್ರತಿ ತಿಂಗಳೂ ಫಲಾನುಭವಿಗಳಿಗೆ ಹಣ ಪಾವತಿಸುತ್ತಿದೆ.ಜುಲೈ ನಂತರ ತನ್ನ ಸಾಫ್ಟ್‌ವೇರ್‌ನಿಂದ ಆಧಾರ್‌ ಲಿಂಕ್‌ ಮಾಡದ ಫಲಾನುಭವಿಗಳ ಹೆಸರನ್ನು ಅಳಿಸಿ ಹಾಕಲು ನಿರ್ಧರಿಸಿದೆ.

ಜಾರಿಗೊಳಿಸಲು
ರಾಜ್ಯ ಹಿಂದೇಟು?

ಕೇಂದ್ರದ ಈ ನಿರ್ಧಾರವನ್ನು ಕಟ್ಟು ನಿಟ್ಟಾಗಿ ಜಾರಿಗೆ ತರಲು ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿದೆ. ಚುನಾವಣೆ ಎದುರಾಗುತ್ತಿರುವ ಕಾರಣ ಕಟ್ಟುನಿಟ್ಟುಗೊಳಿಸಲು ಮೀನಾಮೇಷ ಎಣಿಸುತ್ತಿದೆ ಎನ್ನಲಾಗಿದೆ. ಆದರೆ ಇನ್ನು ಮುಂದೆ ಯಾವುದೇ ಕಾರಣ ನೀಡಿ ಜಾರಿ ಮುಂದೂಡಲು ಸಾಧ್ಯವಿಲ್ಲ. ಹೀಗಾಗಿ ಜುಲೈ ತಿಂಗಳಿಂದ ಇದು ಕಟ್ಟುನಿಟ್ಟಾಗಿ ಜಾರಿಗೆ ಬರುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ.

– „ ಗೋಪಾಲ್‌ ಯಡಗೆರೆ

Advertisement

Udayavani is now on Telegram. Click here to join our channel and stay updated with the latest news.

Next