Advertisement

ಪಿಯುಸಿ ದಾಖಲಾತಿಗೆ ಆಧಾರ್‌ ಕಡ್ಡಾಯವಲ್ಲ 

06:00 AM Jun 13, 2018 | Team Udayavani |

ಬೆಂಗಳೂರು: ಪ್ರಥಮ ಪಿಯುಸಿಗೆ ಸೇರುವ ವಿದ್ಯಾರ್ಥಿಗಳು ದಾಖಲಾತಿಯ ಸಂದರ್ಭದಲ್ಲಿ ಆಧಾರ್‌ ಕಾರ್ಡ್‌ ಹಾಗೂ ಬ್ಯಾಂಕ್‌ ಪಾಸ್‌ಬುಕ್‌ನ ನಕಲು ಪ್ರತಿ ಪಡೆಯುವುದು ಕಡ್ಡಾಯವಲ್ಲ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.

Advertisement

ಪ್ರಥಮ ಪಿಯುಸಿಗೆ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳುವ ಸಂದರ್ಭದಲ್ಲಿ ಆಧಾರ್‌ ಕಾರ್ಡ್‌ ಹಾಗೂ ಬ್ಯಾಂಕ್‌ ಪಾಸ್‌ಬುಕ್‌ನ ನಕಲು ಪ್ರತಿಯನ್ನು ಕಡ್ಡಾಯವಾಗಿ ಪಡೆಯುವಂತೆ ಇಲಾಖೆ ಈ ಹಿಂದೆಯೇ ಸುತ್ತೋಲೆ ಹೊರಡಿಸಿತ್ತು. ಈಗ ಅದನ್ನು ಮಾರ್ಪಾಡು ಮಾಡಿದೆ. 2018-19ನೇ ಸಾಲಿಗೆ ಪಿಯು ಕಾಲೇಜಿಗೆ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲು ಆಧಾರ್‌ ಮತ್ತು ಬ್ಯಾಂಕ್‌ ಪಾಸ್‌ಬುಕ್‌ ಪ್ರತಿ ಕಡ್ಡಾಯವಲ್ಲ ಎಂದು ಸ್ಪಷ್ಟಪಡಿಸಿದೆ.

ಯಾವುದೇ ದಂಡ ಶುಲ್ಕ ಇಲ್ಲದೇ ವಿದ್ಯಾರ್ಥಿಗಳನ್ನು ಜೂ.20ರವರೆಗೂ ದಾಖಲಾತಿ ಮಾಡಿಕೊಳ್ಳಲು, ವಿಳಂಬ ದಾಖಲಾತಿಗೆ 670 ರೂ. ದಂಡ ಶುಲ್ಕ ಪಾವತಿಸಿ ಜೂನ್‌ 25ರವರೆಗೂ ಮತ್ತು ವಿಶೇಷ ದಂಡ ಶುಲ್ಕ 2,890 ರೂ. ಪಾವತಿಸಿ ಜೂನ್‌ 30ರೊಳಗೆ ಕಾಲೇಜು ಸೇರಿಕೊಳ್ಳಬಹುದು ಎಂದು ವಿದ್ಯಾರ್ಥಿಗಳಿಗೆ ಇಲಾಖೆ ತಿಳಿಸಿದೆ.

ಪ್ರಸಕ್ತ ಸಾಲಿನಲ್ಲಿ ಹೊಸ ಖಾಸಗಿ ಪಿಯು ಕಾಲೇಜು ಆರಂಭಿಸಲು 204 ಅರ್ಜಿ ಬಂದಿದೆ. ಚುನಾವಣಾ ನೀತಿ ಸಂಹಿತೆ ಇರುವುದರಿಂದ ಯಾವುದೇ ಕಾಲೇಜುಗೂ ಅನುಮತಿ ನೀಡಿಲ್ಲ. ಹೊಸ ಕಾಲೇಜು ತೆರೆಯುವ ಸಂಬಂಧ ಆಡಳಿತ ಮಂಡಳಿ ಅನುಸರಿಸಬೇಕಾದ ನಿಯಮಗಳ ಬಗ್ಗೆ ಸರಕಾರ ಸ್ಪಷ್ಟ ನಿಲುವು ಹೊಂದಿದೆ. ಹೊಸ ಕಾಲೇಜು ಆರಂಭಿಸುವ ಸಂಘ ಸಂಸ್ಥೆಗಳು, ಸರಕಾರದ ಈ ಎಲ್ಲ ನಿಯಮವನ್ನು ಪಾಲಿಸುವುದು ಕಡ್ಡಾಯವಾಗಿದೆ.
-ಸಿ.ಶಿಖಾ, ನಿರ್ದೇಶಕಿ, ಪಿಯು ಇಲಾಖೆ

ದ್ವಿ. ಪಿಯುಸಿ ಅರ್ಥಶಾಸ್ತ್ರಕ್ಕೂ ಎನ್‌ಸಿಇಆರ್‌ಟಿ ಪಠ್ಯಕ್ರಮ 
ಬೆಂಗಳೂರು: ರಾಜ್ಯ ಪದವಿ ಪೂರ್ವ ಶಿಕ್ಷಣ ಇಲಾಖೆ ಈಗಾಗಲೇ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ವಿಷಯಗಳಿಗೆ ಎನ್‌ಸಿಇಆರ್‌ಟಿ ಪಠ್ಯಕ್ರಮ ಅಳವಡಿಸಿಕೊಂಡಿದೆ. 2018-19ನೇ ಸಾಲಿನಿಂದ ಅರ್ಥಶಾಸ್ತ್ರ ವಿಷಯಕ್ಕೂ ಎನ್‌ಸಿಇಆರ್‌ಟಿ ಪಠ್ಯವನ್ನೇ ಅನುಸರಿಸುವಂತೆ ವಿದ್ಯಾರ್ಥಿಗಳಿಗೆ ಮತ್ತು  ಉಪನ್ಯಾಸಕರಿಗೆ ಸೂಚನೆ ನೀಡಿದೆ.

Advertisement

2018-19ನೇ ಸಾಲಿಗೆ ದ್ವಿತೀಯ ಪಿಯುಸಿ ಅರ್ಥಶಾಸ್ತ್ರ ವಿಷಯಕ್ಕೆ ಸಂಬಂಧಿಸಿದಂತೆ ಎನ್‌ಸಿಇಆರ್‌ಟಿ ಪ್ರಕಟಿಸಿರುವ 2018ರ ಆವೃತ್ತಿಯನ್ನು ಅನುಸರಿಸಲು ನಿರ್ದೇಶಿಸಿದೆ. ಅರ್ಥಶಾಸ್ತ್ರ ವಿಷಯದ ಪಠ್ಯವನ್ನು ಕನ್ನಡಕ್ಕೆ ಅನುವಾದಿಸಿ ಮುದ್ರಿಸುವ ಕಾರ್ಯ ನಡೆಯುತ್ತಿದೆ. ಅತಿ ಶೀಘ್ರದಲ್ಲಿಯೇ ಪಿಯು ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ ಎಂದು ಇಲಾಖೆ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next