Advertisement

ವಸತಿ ಯೋಜನೆ ಮನೆಗಳಿಗೆ ಆಧಾರ್‌ ಸಿಕ್ಕಿಲ್ಲ

08:45 AM Aug 07, 2017 | Harsha Rao |

ಬೆಳ್ತಂಗಡಿ: ಸರಕಾರದಿಂದ ಪಡೆದ ವಿವಿಧ ವಸತಿ ಯೋಜನೆಗಳ ಫಲಾನುಭವಿಗಳು ಆಧಾರ್‌ ಲಿಂಕ್‌ ಮಾಡಲು ಆ. 5 ಕೊನೆಯ ದಿನವಾಗಿದ್ದು ಶೇ. 50ರಷ್ಟು ಕೂಡ ಜೋಡಣೆ ಕಾರ್ಯ ನಡೆದಿಲ್ಲ. ಜು. 31 ಕೊನೆಯ ದಿನವಾಗಿತ್ತು. ಅನಂತರ 5 ದಿನಗಳ ಹೆಚ್ಚುವರಿ ಕಾಲಾವಕಾಶ ನೀಡಲಾಗಿತ್ತು. ಆದರೆ ಆಧಾರ್‌ ಜೋಡಣೆ ಮಾತ್ರ ನಿರೀಕ್ಷಿತ ಪ್ರಮಾಣದಲ್ಲಿ ನಡೆದಿಲ್ಲ. ಈ ಮಧ್ಯೆಯೇ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನು ಎತ್ತಂಗಡಿ ಮಾಡಲಾಗಿದೆ.

Advertisement

ರಾಜೀವ್‌ ಗಾಂಧಿ ವಸತಿ ನಿಗಮದಿಂದ ಮನೆ ಪಡೆದ ಫಲಾನುಭವಿಗಳ ಆಧಾರ್‌ ಸಂಖ್ಯೆಯನ್ನು ತತ್‌ಕ್ಷಣದಿಂದ ಜೋಡಣೆ ಮಾಡುವಂತೆ ರಾಜೀವ್‌ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರು ಆದೇಶ ನೀಡಿದ್ದರು. ವಸತಿ ನಿಗಮದ ಮನೆಗಳು 3 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ನಕಲಿ ಫಲಾನುಭವಿಗಳ ಹೆಸರಿನಲ್ಲಿ ವಿತರಣೆಯಾಗಿರುವುದು ಗೊತ್ತಾಗಿದೆ. ಆದ್ದರಿಂದ ಪ್ರತೀ ಗ್ರಾ.ಪಂ.ಗಳು 2005ರಿಂದ ನಿಗಮದ ವಿವಿಧ ವಸತಿ ಯೋಜನೆಗಳ ಮೂಲಕ ವಸತಿ ಸೌಲಭ್ಯ ಪಡೆದವರ ಆಧಾರ್‌ ಸಂಖ್ಯೆಯನ್ನು ನಿಗಮದ ವೆಬ್‌ಸೈಟಿಗೆ ತುಂಬಿಸಬೇಕು.

ಜು. 21ರಿಂದ ಈ ಅಭಿಯಾನ ಆರಂಭಿಸಿ ಜು. 31ರ ಒಳಗೆ ಪೂರ್ಣಗೊಳಿಸಬೇಕು. ಒಬ್ಬನೇ ವ್ಯಕ್ತಿಗೆ ಎರಡು ಅಥವಾ ಅದಕ್ಕಿಂತಲೂ ಹೆಚ್ಚು ಮನೆಗಳು ಮಂಜೂರಾಗಿದ್ದರೆ ಅಂತಹ ವ್ಯಕ್ತಿಯ ಮೇಲೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು ಎಂದು ಸೂಚಿಸಲಾಗಿತ್ತು.

ಜು. 31ರಂದು ನಿರೀಕ್ಷಿತ ಪ್ರಮಾಣದ ಅಂಕಿ-ಅಂಶ ದೊರೆತು ಆದೇಶ ಫಲಪ್ರದ ಅನುಷ್ಠಾನವಾಗದ ಕಾರಣ ಹೆಚ್ಚುವರಿ 5 ದಿನಗಳನ್ನು ನೀಡಲಾಗಿತ್ತು. ಆ. 3ರಂದು ನೀಡಿದ ಆದೇಶದಲ್ಲಿ ಫಲಾನುಭವಿ ಬಳಿ ಆಧಾರ್‌ ಸಂಖ್ಯೆ ಇಲ್ಲದಿದ್ದರೆ ಅವರ ಹತ್ತಿರದ ಬಂಧುಗಳಾದ ತಂದೆ, ತಾಯಿ, ಪತಿ, ಪತ್ನಿಯ ಆಧಾರ್‌ ಜೋಡಣೆಗೂ ಅವಕಾಶ ನೀಡಲಾಗಿತ್ತು.

ತೀರಾ ಕಡಿಮೆ: ಎರಡು ದಿನಗಳಿಂದ ನಿಗಮದ ವೆಬ್‌ಸೈಟ್‌ನ ತಾಂತ್ರಿಕ ಸಮಸ್ಯೆಯಿಂದಾಗಿ ಮಾಹಿತಿ ತುಂಬಿಸುವ ಕಾರ್ಯ ಕೂಡ ವಿಳಂಬವಾಗುತ್ತಿದೆ. ಜು. 31 ಕೊನೆಯ ದಿನ ಎಂದು ನೀಡಿದ್ದಾಗ ಜು. 29ಕ್ಕೆ ಬಂಟ್ವಾಳದಲ್ಲಿ 7,991 (ಆವರಣದಲ್ಲಿ ಆಧಾರ್‌ ಜೋಡಣೆ ಮಾಡಿದ ಮನೆಗಳ ಸಂಖ್ಯೆ 75), ಬೆಳ್ತಂಗಡಿಯಲ್ಲಿ 5,671 (1,771), ಮಂಗಳೂರಿನಲ್ಲಿ 2,290 (1,014), ಪುತ್ತೂರಿನಲ್ಲಿ 4,251 (620), ಸುಳ್ಯದಲ್ಲಿ 2,894(735) ಎಂದು ಒಟ್ಟು 23,097 ಮನೆಗಳ ಆಧಾರ್‌ ಜೋಡಣೆ ಬಾಕಿ ಇದ್ದು 4,215 ಮನೆಗಳ ಆಧಾರ್‌ ಜೋಡಣೆ ಮಾತ್ರ ನಡೆದಿತ್ತು. ಈ ಮೊಲವೇಗದ ಕಾರ್ಯವಿಧದಿಂದಾಗಿ ಹೆಚ್ಚುವರಿ 5 ದಿನ ನೀಡಲಾಗಿತ್ತು.

Advertisement

ಅಧಿಕಾರಿ ಎತ್ತಂಗಡಿ: ನಕಲಿ ಪ್ರಕರಣಗಳಿಂದ ಅರ್ಹ ಫಲಾನುಭವಿಗಳಿಗೆ ವಂಚನೆಯಾಗುತ್ತಿದೆ. ಈ ನಡುವೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮನೀಶ್‌ ಮೌದ್ಗಿಲ್‌ ಅವರನ್ನು ಎತ್ತಂಗಡಿ ಮಾಡಲಾ ಗಿದ್ದು ಆ ಜಾಗಕ್ಕೆ ಬೇರೆ ಯಾರನ್ನೂ ನೇಮಿಸಿಲ್ಲ. ಆಧಾರ್‌ ಜೋಡಣೆ ವರದಿ ಮಾಡಿದಾಗಲೇ ಅಧಿಕಾರಿ ವರ್ಗವಾಗುವ ಸಾಧ್ಯತೆ ಕುರಿತು ಉದಯವಾಣಿ ಉಲ್ಲೇಖ ಮಾಡಿತ್ತು.

ಇಂದಿರಾ ಮನೆ ಆ್ಯಪ್‌: ನಿಗಮ ಮೂಲಕ ಈ ವರ್ಷ ರಾಜ್ಯದಲ್ಲಿ 3.2 ಲಕ್ಷ ಮನೆ ನಿರ್ಮಾಣದ ಗುರಿ ಹಾಕಿಕೊಳ್ಳಲಾಗಿದೆ. ಪಂಚಾಯತ್‌ ಅಧಿಕಾರಿಗಳು ಮಾತ್ರ ಮಾಹಿತಿ ಮೇಲ್‌ ತುಂಬುವ ಕ್ರಮಕ್ಕೆ ಪರ್ಯಾಯವಾಗಿ ಈಗ ಹೊಸ ಕ್ರಮ ಜಾರಿ ಮಾಡಲಾಗಿದೆ. ಫಲಾನುಭವಿಯೇ ನಿಗಮದ ವೆಬ್‌ಸೈಟಿಗೆ ಮಾಹಿತಿ, ಫೋಟೊ ಹಾಗೂ ಇತರ ಮಾಹಿತಿ ಮೇಲ್‌ ತುಂಬಿಸುವ ಇಂದಿರಾ ಮನೆ ಎಂಬ ಮೊಬೈಲ್‌ ಆ್ಯಪ್‌ ತರಲಾಗಿದೆ. ಇದರಲ್ಲಿ ಪಂಚಾಯತ್‌ ಅಧಿಕಾರಿಗಳ ನೆರವಿಲ್ಲದೇ ಫಲಾನುಭವಿ ಮಾಹಿತಿ ತುಂಬಿಸಿದರೆ ಅನುದಾನ ಬ್ಯಾಂಕ್‌ ಖಾತೆಗೆ ಜಮೆಯಾಗುತ್ತದೆ.

ವಂಚನೆಗೆ ಅವಕಾಶ: ಮೊದಲು 600 ಚದರ ಅಡಿಗಿಂತ ದೊಡ್ಡ ಮನೆ ಕಟ್ಟಿದರೆ ಅಧಿಕಾರಿಗಳು ಅನುದಾನ ನಿರಾಕರಿಸುತ್ತಿದ್ದರು. ಈಗ ಫಲಾನು ಭವಿಯೇ ಫೋಟೊ ಅಪ್‌ಲೋಡ್‌ ಮಾಡಲು ಅವಕಾಶ ನೀಡಿದ್ದು ಇದು ದುರ್ಬಳಕೆಗೂ ಕಾರಣ ವಾಗುವ ಸಾಧ್ಯತೆಯಿದೆ. ಒಂದೆಡೆಯಿಂದ ಕಾನೂನು ಬಿಗಿ ಮಾಡುತ್ತಾ ಬಂದು ಇನ್ನೊಂದೆಡೆಯಿಂದ ಕಾನೂನು ಉಲ್ಲಂಘನೆಗೂ ಅವಕಾಶ ನೀಡಿರುವುದು ಮಾತ್ರ ವಿಪರ್ಯಾಸ.

– ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next