Advertisement
ಈ ಬಗ್ಗೆ ರಾಜ್ಯ ಪ್ರೌಢ ಶಿಕ್ಷಣ ಮಂಡಳಿ ಸುತ್ತೋಲೆ ಹೊರಡಿಸಿದೆ. ಅಂಕಪಟ್ಟಿ ಕಳೆದುಕೊಂಡವರು ಅಥವಾ ಯಾವುದೇ ಅಭ್ಯರ್ಥಿ ದ್ವಿತೀಯ, ತೃತೀಯ ಅಥವಾ ನಾಲ್ಕನೇ ಅಂಕಪಟ್ಟಿಗೆ ಶಾಲೆಯ ಮೂಲಕವೇ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿಗದಿ ಪಡಿಸಿರುವ ಶುಲ್ಕ ಪಾವತಿಸಿ, ಸಂಬಂಧ ಪಟ್ಟ ಶಾಲೆಯ ಮೂಲಕವೇ ಅಂಕಪಟ್ಟಿಗೆ ಅರ್ಜಿ ಸಲ್ಲಿಸಬಹುದು. ಇದರ ಜತೆಗೆ ಆಧಾರ್ ನಕಲು ಪ್ರತಿ ನೀಡಬೇಕು.
Related Articles
ವಿದ್ಯಾರ್ಥಿ ವ್ಯಾಸಂಗ ಮಾಡಿದ ಶಾಲೆಯಿಂದಲೇ ಅಂಕಪಟ್ಟಿಗೆ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಯು ಎರಡನೇ, ಮೂರನೇ ಅಥವಾ ನಾಲ್ಕನೇ ಅಂಕಪಟ್ಟಿಗೆ ಅಥವಾ ತಿದ್ದುಪಡಿ ಅಂಕಪಟ್ಟಿಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರು ಅರ್ಜಿಯನ್ನು ಸರಿಯಾಗಿ ಪರಿಶೀಲನೆ ಮಾಡದೆ, ಅಪೂರ್ಣ ಮಾಹಿತಿಯನ್ನು ಅರ್ಜಿಯನ್ನು ಮತ್ತು ಅಭ್ಯರ್ಥಿಗಳಿಗೆ ಅಂಕಪಟ್ಟಿ ನೀಡುವಾಗ ತಪ್ಪುಗಳಿರುವುದನ್ನು ಪರಿಶೀಲಿಸದೆ ನೀಡುತ್ತಿರುವುದು ಮಂಡಳಿಯ ಗಮನಕ್ಕೆ ಬಂದಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ, ಶಾಲಾ ಮುಖ್ಯಶಿಕ್ಷಕರಿಗೆ ಅಗತ್ಯ ನಿರ್ದೇಶನ ನೀಡಲಾಗಿದೆ ಎಂದು ಮಂಡಳಿಯ ಹಿರಿಯ ಅಧಿಕಾರಿ “ಉದಯವಾಣಿ’ಗೆ ಮಾಹಿತಿ ನೀಡಿದರು.
Advertisement
ಎಚ್ಚರ ವಹಿಸಿ!ಇತ್ತೀಚಿನ ದಿನಗಳಲ್ಲಿ ಅಂಕಪಟ್ಟಿಯಲ್ಲಿ ಹಲವು ರೀತಿಯಲ್ಲಿ ಲೋಪವಾಗುತ್ತಿದೆ ಎಂಬ ಆರೋಪ ಬಂದಿರುವ ಹಿನ್ನೆಲೆಯಲ್ಲಿ ಅಂಕಪಟ್ಟಿ ವಿತರಣೆಗೆ ಮುನ್ನ ಸೂಕ್ಷ್ಮ ಪರಿಶೀಲನೆ ಮಾಡಬೇಕು ಎಂದಿದೆ ಪ್ರೌಢಶಿಕ್ಷಣ ಮಂಡಳಿ. ಅಂಕಪಟ್ಟಿಯಲ್ಲಿನ ಅಭ್ಯರ್ಥಿ, ತಂದೆ, ತಾಯಿಯ ಹೆಸರು, ಜನ್ಮ ದಿನಾಂಕ ಇತ್ಯಾದಿ ತಪ್ಪುಗಳಾಗಿದ್ದಲ್ಲಿ ತಿದ್ದುಪಡಿಗೆ ಅರ್ಜಿ ಸಲ್ಲಿಸಿದಾಗ ಅದನ್ನು ಕೂಲಂಕಷವಾಗಿ ಪರಿಶೀಲಿಸಬೇಕು. ವಿದ್ಯಾರ್ಥಿಯು ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುವಾಗ ನೀಡಿರುವ ದಾಖಲೆಗಳನ್ನೇ ಪ್ರೌಢಶಾಲೆಗೆ ನೀಡಲಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ಪ್ರಾಥಮಿಕ ಶಾಲೆಯಲ್ಲಿ ಒಂದು ರೀತಿಯ ದಾಖಲೆ ಹಾಗೂ ಪ್ರೌಢಶಾಲೆಗೆ ಇನ್ನೊಂದು ರೀತಿಯ ದಾಖಲೆ ನೀಡಿದರೆ ಅಂತಹ ಪ್ರಸ್ತಾವನೆಯನ್ನು ಮಂಡಳಿಗೆ ಸಲ್ಲಿಸುವ ಮೊದಲು ಎಲ್ಲ ನಿಯಮಗಳನ್ನು ಸರಿಯಾಗಿ ಅರಿತುಕೊಳ್ಳಬೇಕು ಎಂದು ಮುಖ್ಯ ಶಿಕ್ಷಕರಿಗೆ ಮಂಡಳಿ ಖಡಕ್ ಎಚ್ಚರಿಕೆ ನೀಡಿದೆ.