ಬೆಂಗಳೂರು: ಆಧಾರ್ ಬಯೋಮೆಟ್ರಿಕ್ ಮತ್ತು ಆಧಾರ್ ವ್ಯವಸ್ಥೆಯಿಂದ ಸಂಗ್ರಹಣೆ ಮಾಡಲಾಗಿರುವ ದತ್ತಾಂಶದ ನಿರ್ವಹಣೆ ಗುತ್ತಿಗೆಯನ್ನು ಅಮೆರಿಕ ಸೇರಿದಂತೆ 4 ವಿದೇಶಿ ಕಂಪನಿಗಳಿಗೆ ನೀಡಲಾಗಿರುವ ಕೇಂದ್ರ ಸರ್ಕಾರದ ಕ್ರಮ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ಪರಿಹಾರ ಪಡೆದುಕೊಳ್ಳುವಂತೆ ಹೈಕೋರ್ಟ್ ಸೂಚಿಸಿದೆ.
ಈ ಕುರಿತು ನಗರದ ಥಣಿಸಂದ್ರ ನಿವಾಸಿ ಮ್ಯಾಥ್ಯೂ ಥಾಮಸ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ಗುರುವಾರ ವಿಚಾರಣೆಗೆ ಬಂದಿತ್ತು.
ಈ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಪ್ರಶಾಂತ್ ಭೂಷಣ್ ವಾದ ಮಂಡಿಸಿ, ಆಧಾರ್ ಬಯೋಮೆಟ್ರಿಕ್ ಮತ್ತು ಆಧಾರ್ ಮೂಲಕ ಸಂಗ್ರಹಿಸಿದ ದತ್ತಾಂಶದ ನಿರ್ವಹಣೆ ಕಾರ್ಯದ ಗುತ್ತಿಗೆಯನ್ನು ನಾಲ್ಕು ವಿದೇಶಿ ಕಂಪನಿಗಳಿಗೆ ನೀಡಲಾಗಿದೆ. ಗುತ್ತಿಗೆ ಪಡೆದಿರುವ ಅಮೆರಿಕದ ಕಂಪನಿಯು ಅಲ್ಲಿನ ಎಫ್ಬಿಐ ಮತ್ತು ಕೇಂದ್ರ ಗುಪ್ತಚರ ಏಜೆನ್ಸಿಯೊಂದಿಗೆ ಕಾರ್ಯ ನಿರ್ವಹಿಸುತ್ತದೆ. ಹಾಗಾಗಿ, ಆಧಾರ್ ದತ್ತಾಂಶ ಈ ಎಲ್ಲಾ ಕಂಪನಿಗಳಿಗೆ ಸುಲಭವಾಗಿ ಲಭ್ಯವಾಗುತ್ತದೆ ಎಂದು ತಿಳಿಸಿದರು. ಅರ್ಜಿಯಲ್ಲಿ ಎತ್ತಲಾಗಿರುವ ಅಂಶಗಳ ಕುರಿತು ಸುಪ್ರಿಂಕೋರ್ಟ್ ಮುಂದೆ ಪರಿಹಾರ ಪಡೆಯುವುದೇ ಸೂಕ್ತ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.
ಅದಕ್ಕೆ ಅರ್ಜಿದಾರರ ಪರ ವಕೀಲರು ಪ್ರತಿಕ್ರಿಯಿಸಿ, ಆಧಾರ್ ಕಾರ್ಡ್ ಪಡೆಯಲು ಜನ ತಮ್ಮ ಖಾಸಗಿ ಮಾಹಿತಿ ನೀಡಬೇಕಿರುವ ಹಿನ್ನೆಲೆ ಯಲ್ಲಿ ಆ ಕುರಿತ ಕಾನೂನಾತ್ಮಕ ಅಂಶಗಳ ಬಗ್ಗೆ ಅರ್ಜಿದಾರರು ಈ ಹಿಂದೆ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಸುಪ್ರೀಂಕೋರ್ಟ್ ಸಹ ಆಧಾರ್ ಕಾರ್ಡ್‌ಗಾಗಿ ಜನ ನೀಡುವುದು ಖಾಸಗಿ ಮಾಹಿತಿಯಾಗಿದ್ದು, ಗೌ ಪ್ಯ ತೆಗೆ ಸಂಬಂಧಿಸಿ ರುವುದಾಗಿ ಹೇಳಿದೆ. ತದ ನಂತರ ಬೆಳವಣಿಗೆಗಳ ಬಗ್ಗೆ ಈ ಅರ್ಜಿ ಸಲ್ಲಿಸಲಾಗಿದ್ದು, ಅದರ ವಿಚಾರಣೆ ನಡೆಸುವ ಅಧಿಕಾರ ವ್ಯಾಪ್ತಿ ಹೈಕೋರ್ಟ್ ಹೊಂದಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.
ಈ ಹಿಂದೆ ಅರ್ಜಿದಾರರು ಸಲ್ಲಿಸಿದ್ದ ಅರ್ಜಿ ಕುರಿತು ಸುಪ್ರೀಂ ಕೋರ್ಟ್ ಸುದೀರ್ಘವಾದ ಆದೇಶ ಹೊರಡಿಸಿದೆ. ಹಾಗಾಗಿ, ಈ ವಿಚಾರದ ಕುರಿತು ಸುಪ್ರಿಂಕೋರ್ಟ್ ವಿಚಾರಣೆ ನಡೆಸುವುದೇ ಸೂಕ್ತ. ಅರ್ಜಿದಾರರ ಈ ಮನವಿಗಳ ಬಗ್ಗೆ ಸುಪ್ರಿಂಕೋರ್ಟ್ ಗಮನ ಹರಿಸಿ, ಹಿಂದೆ ಹೊರಡಿಸಿದ ಆದೇಶವನ್ನು ಮಾರ್ಪಡಿಸಬಹುದು. ಇಲ್ಲವೇ ಹಿಂಪಡೆದುಕೊಂಡು ಹೊಸದಾಗಿ ಆದೇಶ ಮಾಡುವ ಸಾಧ್ಯತೆ ಇರಬಹುದು ಎಂದು ನ್ಯಾಯಪೀಠ ಹೇಳಿತು.ಅದಕ್ಕೆ ಒಪ್ಪಿದ ಅರ್ಜಿದಾರರು, ಅರ್ಜಿ ಹಿಂಪಡೆದು ಸುಪ್ರೀಂಕೋರ್ಟ್ ಮುಂದೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಅರ್ಜಿದಾರರ ಪರ ವಕೀಲರ ಹೇಳಿಕೆ ದಾಖಲಿಸಿಕೊಂಡ ನ್ಯಾಯಪೀಠ, ಅರ್ಜಿ ಹಿಂಪಡೆಯಲು ಅರ್ಜಿದಾರರಿಗೆ ಅನುಮತಿ ನೀಡಿತು. ಜೊತೆಗೆ, ಅರ್ಜಿಯಲ್ಲಿ ಎತ್ತಲಾಗಿರುವ ಎಲ್ಲಾ ಅಂಶಗಳನ್ನು ಮುಕ್ತವಾಗಿರಿಸಲಾಗಿದೆ ಎಂದು ಹೇಳಿ ಅರ್ಜಿಯನ್ನು ಇತ್ಯರ್ಥಪಡಿಸಿತು.