ಬೆಂಗಳೂರು: ಯಾವುದೋ ಸಂದರ್ಭಗಳಲ್ಲಿ ಆಕಸ್ಮಿಕವಾಗಿ ದಾರಿತಪ್ಪಿ ಪೋಷಕರಿಂದ ದೂರವಾಗಿ ನಗರದ ಅನಾಥಾಲಯ ಸೇರಿದ್ದ ಹೊರ ರಾಜ್ಯಗಳ ಮೂರು ಮಕ್ಕಳು ಮರಳಿ ಗೂಡು ಸೇರಲು “ಆಧಾರ್’ ನೆರವಾಗಿದೆ.
ಭಾರತೀಯ ವಿಶೇಷ ಗುರುತಿನ ಪ್ರಾಧಿಕಾರ (ಯುಐಡಿಎಐ)ದ ತಂಡವು ಈಚೆಗೆ ನಗರದ ಬನ್ನೇರುಘಟ್ಟ ರಸ್ತೆಯಲ್ಲಿರುವ ಅನಾಥಾಲಯದಲ್ಲಿ ನಡೆಸಿದ ಆಧಾರ್ ನೋಂದಣಿ ಅಭಿಯಾನದ ಸಂದರ್ಭದಲ್ಲಿ ಮೂರು ಮಕ್ಕಳ ಮೂಲ ಪತ್ತೆಯಾಗಿದ್ದು, ಮಂಗಳವಾರ ಆ ಮೂವರು ಮಕ್ಕಳು ತಮ್ಮ ಪೋಷಕರನ್ನು ಸೇರಲಿದ್ದಾರೆ.
ಗುರುತು ಪತ್ತೆಯಾದ ಮೂರು ಮಕ್ಕಳು ಇಂದೋರ್, ಜಾರ್ಖಂಡ್ ಮತ್ತು ಚಿತ್ತೂರಿನವರು ಎಂದು ತಿಳಿದುಬಂದಿದೆ. ಕೇಂದ್ರ ಸರ್ಕಾರದ ಸೂಚನೆಯಂತೆ ಅನಾಥಾಲಯದಲ್ಲಿ ಆಧಾರ್ ನೋಂದಣಿ ಅಭಿಯಾನ ಆರಂಭಿಸಲಾಗಿದೆ. ಅದರಂತೆ ಈಚೆಗೆ ಬಯೋಮೆಟ್ರಿಕ್ ಕಿದ್ವಾಯಿ ಆಸ್ಪತ್ರೆಗೆ ಹೊಂದಿಕೊಂಡಿರುವ ಅನಾಥಾಲಯದಲ್ಲಿ ಈ ಅಭಿಯಾನ ನಡೆಸಲಾಯಿತು. ಈ ಪೈಕಿ ಮೂರು ಮಕ್ಕಳ ಬಯೋಮೆಟ್ರಿಕ್ ಮಾಹಿತಿ ಸಂಗ್ರಹಿಸುವಾಗ ಆಗಲೇ ಬಯೋಮೆಟ್ರಿಕ್ ಯಂತ್ರದಲ್ಲಿ ಆ ಮಕ್ಕಳ ಮಾಹಿತಿ ದಾಖಲಾಗಿರುವುದು ಕಂಡುಬಂತು.
ಅದರ ಜಾಡುಹಿಡಿದು ಹೋದಾಗ ಮೂರೂ ಮಕ್ಕಳು ಇಂದೂರ್, ಜಾಖಂಡ್ ಮತ್ತು ಚಿತ್ತೂರಿನಿಂದ ಬಂದವರು ಎಂದು ಗೊತ್ತಾಯಿತು. ಆಕಸ್ಮಿಕವಾಗಿ ಪೋಷಕರಿಂದ ಈ ಮಕ್ಕಳು ತಪ್ಪಿಸಿಕೊಂಡಿದ್ದಾರೆ. ಯಾವ್ಯಾವುದೋ ರೀತಿಯಲ್ಲಿ ಅನಾಥಾಲಯಕ್ಕೆ ಬಂದು ಸೇರಿದ್ದಾರೆ. ಗುರುತು ಪತ್ತೆಯಾದ ಮೂವರು ಮಕ್ಕಳ ಪೈಕಿ ಒಂದು ಮಗು ಮಾನಸಿಕವಾಗಿ ವಿಕಲಚೇತನ ಆಗಿದೆ ಎಂದು ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ಮೂವರೂ ಮಕ್ಕಳ ಪೋಷಕರೊಂದಿಗೆ ಮಾತನಾಡಿದ್ದು, ಮಂಗಳವಾರ ಆ ಮಕ್ಕಳ ಪೋಷಕರು ಆಗಮಿಸಲಿದ್ದಾರೆ. ಇದೊಂದು ಅಪರೂಪದ ಕ್ಷಣ. ಪೋಷಕರನ್ನು ಕಳೆದುಕೊಂಡು ಅನಾಥರಾಗಿದ್ದ ಮಕ್ಕಳು, ಆಧಾರ್‌ನಿಂದ ಮತ್ತೆ ಗೂಡು ಸೇರುತ್ತಿರುವುದು ಖುಷಿ ಎನಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.