ಹೊಸದಿಲ್ಲಿ: ನೀವು ಇನ್ನೂ ಆಧಾರ್ ಕಾರ್ಡ್ ಹೊಂದಿಲ್ಲವೇ? ಹಾಗಿದ್ದರೆ ಚಿಂತೆ ಬಿಡಿ. ಅಂಚೆಯ ಅಣ್ಣ ನಿಮ್ಮ ಮನೆ ಬಾಗಿಲಿಗೇ ಬಂದು ವಿವರ ಪಡೆದು ಆಧಾರ್ ಕಾರ್ಡ್ ನೀಡಲಿದ್ದಾರೆ.
ಈ ಉದ್ದೇಶಕ್ಕಾಗಿ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ)ವು ದೇಶದ 755 ಜಿಲ್ಲೆಗಳಲ್ಲಿ ಆಧಾರ ಸೇವಾ ಕೇಂದ್ರ ಮತ್ತು 48 ಸಾವಿರ ಅಂಚೆ ಸಿಬಂದಿಗೆ ತರಬೇತಿ ನೀಡಲು ಮುಂದಾಗಿದೆ.
ವಿಶೇಷವಾಗಿ ದುರ್ಗಮ ಪ್ರದೇಶಗಳಲ್ಲಿ ಇರುವ ಜನರ ಮನೆ ಬಾಗಿಲಿಗೆ ತೆರಳಿ ಆಧಾರ್ ನೀಡುವ ವ್ಯವಸ್ಥೆ ಇದು. ಅಂಚೆ ಇಲಾಖೆಯ 48 ಸಾವಿರ ಸಿಬಂದಿಗೆ ಈ ಬಗ್ಗೆ ತರಬೇತಿ ನೀಡಲಾಗುತ್ತದೆ.
ಸದ್ಯ ಅಂಚೆ ಇಲಾಖೆಯ ಆಯ್ದ ಸಿಬಂದಿಗೆ ಟ್ಯಾಬ್ಲೆಟ್ ಮತ್ತು ಮೊಬೈಲ್ ಆಧಾರಿತ ಕಿಟ್ ನೀಡಲಾಗಿದ್ದು, ಅದರ ಮೂಲಕ ಮಕ್ಕಳ ನೋಂದಣಿ ನಡೆಸಲು ಸೂಚಿಸಲಾಗಿದೆ.
ಮುಂದಿನ ದಿನಗಳಲ್ಲಿ ಅವರು ಎಲ್ಲರ ಆಧಾರ್ ಅಪ್‌ಡೇಟ್ ಮಾಡುವ ವ್ಯವಸ್ಥೆ ಯನ್ನೂ ಮಾಡಲಿದ್ದೇವೆ. ಅದಕ್ಕಾಗಿ ಲ್ಯಾಪ್‌ಟಾಪ್ ಅಥವಾ ಡೆಸ್ಕ್ ಟಾಪ್ ಕಂಪ್ಯೂಟರ್ ನೀಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
2ನೇ ಹಂತದಲ್ಲಿ ದೇಶದ ಎಲ್ಲ ಅಂಚೆ ಕಚೇರಿಗಳಿಗೆ ಈ ವ್ಯವಸ್ಥೆಯನ್ನು ವಿಸ್ತರಿಸುವ ಇರಾದೆಯನ್ನು ಪ್ರಾಧಿಕಾರ ಹೊಂದಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯಾಚರಿಸುತ್ತಿರುವ ಬ್ಯಾಂಕಿಂಗ್ ಕರೆಸ್ಪಾಂಡೆಂಟ್ ಗಳನ್ನು ಇದೇ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳುವ ಬಗ್ಗೆಯೂ ಪರಾಮರ್ಶೆ ನಡೆಸಲಾಗುತ್ತಿದೆ.