ಮಂಡ್ಯ: ತಾಲೂಕಿನ ತಂಡಸನಹಳ್ಳಿ ಗ್ರಾಮದ ವಿಶೇಷ ಚೇತನ ನೂತನ್ ಎನ್ನುವ ೨೫ ವರ್ಷದ ಯುವಕನಿಗೆ ಪ್ರಧಾನ ಮಂತ್ರಿ ಕಚೇರಿಯಿಂದಲೇ ಆಧಾರ್ ಕಾರ್ಡ್ ಸಿಕ್ಕಿದ್ದು, ಇದರಿಂದ ಯುವಕನಿಗೆ ಸರ್ಕಾರದಿಂದ ಎಲ್ಲ ಸೌಲಭ್ಯ ಸಿಗುವಂತಾಗಿದೆ.
ನೂತನ್ ಸುಮಾರು ವರ್ಷದ ಹಿಂದೆಯೇ ಆಧಾರ್ ಕಾರ್ಡ್ ಮಾಡಿಸಿದ್ದ. ಆದರೆ ಆ ವೇಳೆ ಮೊಬೈಲ್ ಸಂಖ್ಯೆ ನಮೂದಿಸಿರಲಿಲ್ಲ. ಈ ನಡುವೆ ಅಂದರೆ ಎರಡು ವರ್ಷದ ಹಿಂದೆ ಸರ್ಕಾರದಿಂದ ಬ್ಯಾಂಕ್ ಖಾತೆಗೆ ಹಣ ಬಾರದಿರುವುದನ್ನು ವಿಚಾರಿಸಲು ಹೋದಾಗ ಆಧಾರ್‌ನಲ್ಲಿ ಮೊಬೈಲ್ ಸಂಖ್ಯೆ ಅಪ್‌ಡೇಟ್ ಆಗದಿರುವ ಬಗ್ಗೆ ತಿಳಿಸಿದ್ದಾರೆ. ನಂತರ ಅಪ್‌ಡೇಟ್ ಮಾಡಿಸಿಕೊಳ್ಳಲು ಹೋದಾಗ ಸಾಧ್ಯವಾಗಿಲ್ಲ. ಕಾರಣ, ಯುವಕನಿಗೆ ಚರ್ಮದ ಸಮಸ್ಯೆ ಇದ್ದ ಕಾರಣ ಬಯೋಮೆಟ್ರಿಕ್ ತೆಗೆದುಕೊಂಡಿಲ್ಲ. ಇತ್ತ ಕಣ್ಣಿನ ಸ್ಕ್ಯಾನ್ ಕೂಡ ಆಗಿರಲಿಲ್ಲ.
ಇದರಿಂದ ಆಧಾರ್ ಕಾರ್ಡ್ ಕೂಡ ಬ್ಲಾಕ್ ಆಗಿತ್ತು. ಪರಿಣಾಮ ಸರ್ಕಾರ ಸೌಲಭ್ಯವನ್ನು ಪಡೆಯಲಾಗದೇ ಪರಿತಪಿಸುವಂತಾಗಿತ್ತು. ಈ ಹಿನ್ನೆಲೆಯಲ್ಲಿ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾಡಳಿತವನ್ನು ಭೇಟಿ ಮಾಡಲಾಗಿತ್ತಾದರೂ ಪ್ರಯೋಜನವಾಗಲಿಲ್ಲ. ಸಂಸದೆ ಸುಮಲತಾ ಅವರು ಪತ್ರ ಕೊಟ್ಟರೂ ಸಮಸ್ಯೆ ಬಗೆಹರಿಯಲಿಲ್ಲ. ಇದು ಕುಟುಂಬಸ್ಥರನ್ನು ಇನ್ನಷ್ಟು ಚಿಂತೆಗೀಡು ಮಾಡಿತ್ತು.
ಎಸ್.ಸಿ.ಮಧುಚಂದನ್ ಸಹಕಾರ
ಸ್ನೇಹಿತರೊಬ್ಬರ ಸಲಹೆಯಂತೆ ಕುಟುಂಬದವರು ಆರ್ಗ್ಯಾನಿಕ್ ಮಂಡ್ಯ ಸಂಸ್ಥಾಪಕ ಹಾಗೂ ರೈತ ಮುಖಂಡ ಎಸ್.ಸಿ.ಮಧುಚಂದನ್ ಅವರನ್ನು ಭೇಟಿ ಮಾಡಿ ಸಮಸ್ಯೆಯನ್ನು ವಿವರಿಸಿದ್ದರು. ಮೇ.27 ರಂದು ಮಾಹಿತಿ ಪಡೆದ ಮಧು ಅವರು,
28 ರಂದು ಪಿಎಂ ಕಚೇರಿಗೆ ಆನ್‌ಲೈನ್‌ನಲ್ಲಿಯೇ ಪತ್ರ ಬರೆದ್ದಿದ್ದರು. ಜತೆಗೆ ಮಾಹಿತಿಯನ್ನು ಟ್ವೀಟ್ ಮಾಡಿ ಪಿಎಂ ಕಚೇರಿಗೆ ಟ್ಯಾಗ್ ಮಾಡಿದರು. ಇದಕ್ಕೆ ಕೂಡಲೇ ಸ್ಪಂದಿಸಿದ ಅಧಿಕಾರಿಗಳು, ಬೆಂಗಳೂರಿನ ಕಚೇರಿಗೆ ಮಾಹಿತಿ ರವಾನಿಸಿದ್ದಾರೆ. 29 ರಂದು ಬೆಂಗಳೂರಿನ ಆಧಾರ್‌ಕಾರ್ಡ್ ಕಚೇರಿಯಿಂದ ಮಧುಚಂದನ್ ಅವರಿಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಲಾಗಿದೆ. ಅಂತೆಯೇ ಮರುದಿನವೇ ಹಳೆಯ ಆಧಾರ್ ಕಾರ್ಡ್ ಆಕ್ಟಿವ್‌ಗೊಳಿಸಿ ಅಪ್‌ಡೇಟ್ ಮಾಡಿಕೊಡಲಾಗಿದ್ದು, ಇದರಿಂದ ಈಗ ಎಲ್ಲ ಸಮಸ್ಯೆ ಬಗೆಹರಿದಂತಾಗಿದೆ.