ಹೊಸದಿಲ್ಲಿ: ‘ಆಧಾರ್ ಕಾರ್ಡ್ ಕಡ್ಡಾಯ ಅಲ್ಲ! ತತ್‌ಕ್ಷಣಕ್ಕೆ ಕಡ್ಡಾಯಗೊಳಿಸಲೂ ಹೋಗಬೇಡಿ ! ಇದು ಸುಪ್ರೀಂಕೋರ್ಟ್‌ನ ಸ್ಪಷ್ಟ ನಿರ್ದೇಶ. ಸರಕಾರದ ಯಾವುದೇ ಕಲ್ಯಾಣ ಮತ್ತು ಕ್ಷೇಮಾಭಿವೃದ್ಧಿ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಲು ಆಧಾರ್ ಕಾರ್ಡ್ ಹೊಂದಿರುವುದು ಕಡ್ಡಾಯವಲ್ಲ ಎಂದು ಸೋಮವಾರ ಸ್ಪಷ್ಟಪಡಿಸಿದೆ. ಈ ಮೂಲಕ ದೇಶದ ಜನಸಾಮಾನ್ಯರ ಅನುಮಾನಕ್ಕೆ ನೇರ ಉತ್ತರ ನೀಡಿದೆ. ಮುಖ್ಯ ನ್ಯಾ| ಜೆ.ಎಸ್. ಖೇಹರ್, ನ್ಯಾ| ಡಿ.ವೈ. ಚಂದ್ರಚೂಡ್ ಮತ್ತು ನ್ಯಾ| ಎಸ್.ಕೆ. ಕೌಲ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಹೇಳಿದ್ದು, ಈ ಬಗ್ಗೆ ಕೇಂದ್ರ ಸರಕಾರಕ್ಕೂ ಸ್ಪಷ್ಟ ನಿರ್ದೇಶ ನೀಡಿದೆ. ಸರಕಾರ ಮುಂಬರುವ ದಿನಗಳಲ್ಲಿ ತನ್ನ ಕಲ್ಯಾಣ ಕಾರ್ಯಕ್ರಮಗಳಿಗೆ ಹಾಗೂ ತೆರಿಗೆ ಹಿಂಪಡೆಯುವ ಮತ್ತು ಇತರ ಚಟುವಟಿಕೆಗಳಿಗೂ ಆಧಾರ್ ಕಾರ್ಡ್ ಕಡ್ಡಾಯಗೊಳಿಸಬಾರದು ಎಂದಿದೆ. ಸುಪ್ರೀಂಕೋರ್ಟ್‌ನ ಈ ಆದೇಶದಿಂದ ಪಾನ್ ಕಾರ್ಡ್, ಮೊಬೈಲ್ ಸಂಖ್ಯೆ ಹೊಂದಲು ಮತ್ತು ಸರಕಾರದ ಇತರ ಕೆಲವು ಯೋಜನೆಗಳ ಪ್ರಯೋಜನ ಪಡೆದುಕೊಳ್ಳಲೂ ಆಧಾರ್ ಕಾರ್ಡ್ ಕಡ್ಡಾಯಗೊಳಿಸಲು ಮುಂದಾಗಿದ್ದ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ಆದರೆ ಸರಕಾರ ಅರ್ಜಿ ವಿಚಾರಣೆಗೂ ಮುನ್ನವೇ ಕಡ್ಡಾಯವಲ್ಲ. ಅಂಥ ಯಾವುದೇ ನಿರ್ಧಾರ ಸರಕಾರ ತೆಗೆದುಕೊಂಡಿಲ್ಲ. ಆಧಾರ್ ಕಾರ್ಡ್ ಐಚ್ಛಿಕವಷ್ಟೇ ಎಂದು ತಿಳಿಸಿತ್ತು.
ಖಾತೆಗೆ, ಐಟಿ ರಿಟರ್ನ್ಸ್ಗೆ ಬೇಕು: ಆದರೆ ಬ್ಯಾಂಕ್‌ನಲ್ಲಿ ಖಾತೆ ತೆರೆಯಲು, ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡಲು ಈಗಾಗಲೇ ಆಧಾರ್ ಬೇಕು ಎಂದು ಸೂಚಿಸಲಾಗಿದೆ. ಸರಕಾರದ ಕಲ್ಯಾಣ ಯೋಜನೆಗಳ ಹೊರತಾಗಿನ ಉಪಯೋಗಕ್ಕೆ ಅದರ ಬಳಕೆ ಮುಂದುವರಿಯಲಿದೆ. ಅದಕ್ಕೆ ತಡೆಯೊಡ್ಡುವುದಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಮುಂದಕ್ಕೆ ನೋಡೋಣ: ಎಲ್ಲದಕ್ಕೂ ಆಧಾರ್ ಕಡ್ಡಾಯ ಎಂಬ ನಿರ್ಧಾರದಿಂದ ಸಾರ್ವಜನಿಕರ ಖಾಸಗಿ ಜೀವನಕ್ಕೆ ಧಕ್ಕೆಯಾಗುತ್ತದೆ. ನಾಗರಿಕರ ವೈಯಕ್ತಿಕ ಮಾಹಿತಿ ಕಾಪಿಡುವುದೂ ಅಷ್ಟೇ ಮುಖ್ಯ ಎಂದು ಹೇಳಿದೆ ಸುಪ್ರೀಂಕೋರ್ಟ್.
ರಾಜ್ಯಸಭೆಯಲ್ಲಿ ಬುಧವಾರ ಮತ್ತೆ ಆಧಾರ್ ಚರ್ಚೆ
ಪಾನ್‌ಕಾರ್ಡ್, ಮೊಬೈಲ್ ಸಿಮ್ ಪಡೆದುಕೊಳ್ಳಲೂ ಆಧಾರ್ ಕಾರ್ಡ್ ಹೊಂದಿರುವುದು ಕಡ್ಡಾಯ ಎಂದು ಸರಕಾರ ಹೇಳುತ್ತಿರುವ ಬಗ್ಗೆ ರಾಜ್ಯಸಭೆಯಲ್ಲಿ ಸೋಮವಾರ ಸಾಕಷ್ಟು ಚರ್ಚೆ ನಡೆಯಿತು. ವಿಪಕ್ಷಗಳು ಸರಕಾರದ ಈ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿ, ಈ ಕ್ರಮದಿಂದ ನಾಗರಿಕ ಗೌಪ್ಯತೆಯ ಹಕ್ಕನ್ನೇ ಕಿತ್ತುಕೊಳ್ಳಲು ಮುಂದಾಗಿದೆ ಎಂದು ಟೀಕಿಸಿದರು. ದಿನವೆಲ್ಲ ಆಧಾರ್ ಕಾರ್ಡ್ ಬಗ್ಗೆಯೇ ಚರ್ಚಿಸಿದ ರಾಜ್ಯಸಭಾ ಸದಸ್ಯರು ಬುಧವಾರ, ಮಾ. 29ರಂದು ಮತ್ತೆ ಚರ್ಚಿಸಲು ನಿರ್ಧರಿಸಿದ್ದಾರೆ.
ಕಾಂಗ್ರೆಸ್‌ನ ಕಪಿಲ್ ಸಿಬಲ್ ಸರಕಾರದ ವಿರುದ್ಧ ವಾಗ್ಧಾಳಿ ನಡೆಸಿದರು. ಪಾನ್ ಕಾರ್ಡ್, ಟ್ಯಾಕ್ಸ್ ರಿಟರ್ನ್ಸ್ ಗೂ ಆಧಾರ್ ಲಿಂಕ್ ಮಾಡುತ್ತಿರುವ ಬಗ್ಗೆ ಪ್ರಶ್ನಿಸಿದ ಸಿಬಲ್, ‘ಸರಕಾರ ನಿರ್ದಾ ಕ್ಷಿಣ್ಯವಾಗಿ ಸುಪ್ರೀಂಕೋರ್ಟ್‌ನ ಆದೇಶವನ್ನು ಉಲ್ಲಂಘಿಸುತ್ತಿದೆ ಎಂದರು.
2015, ಆಗಸ್ಟ್ 11
ಸರಕಾರದ ಕಲ್ಯಾಣ ಯೋಜನೆಗಳ ಸದುಪಯೋಗಕ್ಕೆ ಆಧಾರ್ ಕಡ್ಡಾಯವಲ್ಲ ಎಂದಿದ್ದ ಸುಪ್ರೀಂಕೋರ್ಟ್
2015, ಅಕ್ಟೋಬರ್ 15
ಪಿಎಫ್ ಸಹಿತ ಎಲ್ಲ ರೀತಿಯ ನಿವೃತ್ತಿ ಪಿಂಚಣಿ ಪಡೆಯಲು, ಪ್ರಧಾನ ಮಂತ್ರಿ ಜನ್‌ಧನ್ ಯೋಜನೆ ನೆರವಿಗೂ ಆಧಾರ್ ಕಡ್ಡಾಯವಲ್ಲ, ಐಚ್ಛಿಕ ಎಂದು ನಿರ್ದೇಶ.