Advertisement

ಪಂಚಾಯತ್‌ಗಳಲ್ಲಿ ಆಗದ ಆಧಾರ್‌ ಕಾರ್ಡ್‌ ತಿದ್ದುಪಡಿ

12:15 AM Jul 23, 2019 | mahesh |

ಕಡಬ: ಹೊಸ ಆಧಾರ್‌ ಕಾರ್ಡ್‌ ಮಾಡಿಸಲು ಮತ್ತು ಹಾಲಿ ಇರುವ ಆಧಾರ್‌ ಕಾರ್ಡ್‌ನಲ್ಲಿ ತಪ್ಪುಗಳನ್ನು ತಿದ್ದುಪಡಿ ಮಾಡಿಸಲು ನೂತನ ಕಡಬ ತಾಲೂಕಿನ 42 ತಾಲೂಕಿನ ಜನರು ಕಡಬ ತಹಶೀಲ್ದಾರ್‌ ಕಚೇರಿಯ ಆಧಾರ್‌ ಕೇಂದ್ರದಲ್ಲಿ ಬೆಳಗಿನ ಜಾವದಿಂದಲೇ ಸಾಲುಗಟ್ಟಿ ನಿಲ್ಲುತ್ತಿರುವುದರಿಂದ ಅಲ್ಲಿ ಪ್ರತಿದಿನ ನೂಕುನುಗ್ಗಲಿಂದಾಗಿ ಜನರು ಪಡಿಪಾಟಲು ಪಡುವಂತಾಗಿದೆ.

Advertisement

ಗ್ರಾಮ ಪಂಚಾಯತ್‌, ಪ್ರಧಾನ ಅಂಚೆ ಕಚೇರಿ, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಆಧಾರ್‌ ತಿದ್ದುಪಡಿಗಳನ್ನು ಮಾಡಲು ಸರಕಾರ ಅವಕಾಶ ಕಲ್ಪಿಸಿದೆ. ಆದರೆ ಕಡಬ ತಹಶೀಲ್ದಾರ್‌ ಕಚೇರಿ ಹಾಗೂ ಅಂಚೆ ಕಚೇರಿಯನ್ನು ಬಿಟ್ಟರೆ ಯಾವುದೇ ಪಂಚಾಯತ್‌ಗಳಲ್ಲಿ ಆಧಾರ್‌ ತಿದ್ದುಪಡಿ ಆಗದೆ ಸಾರ್ವಜನಿಕರು ತೀವ್ರ ತೊಂದರೆ ಎದುರಿಸುವಂತಾಗಿದೆ.

ಈ ಹಿಂದೆ ಸರಕಾರವು ತಾಲೂಕು ಕೇಂದ್ರದಲ್ಲಿರುವ ಆಧಾರ್‌ ಕೇಂದ್ರ, ಅಂಚೆ ಕಚೇರಿ, ಪ್ರತಿ ಗ್ರಾ.ಪಂ.ಗಳಲ್ಲಿ, ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಆಧಾರ್‌ ತಿದ್ದುಪಡಿ ಮಾಡಲಾಗುವುದು ಎಂದು ಪ್ರಕಟನೆ ಹೊರಡಿಸಿತ್ತು. ಆಮೇಲೆ ಗ್ರಾ.ಪಂ.ಗಳಲ್ಲಿ ಆಧಾರ್‌ ತಿದ್ದುಪಡಿಗೆ ಮಾತ್ರ ಅವಕಾಶ ಕಲ್ಪಿಸಿ ವ್ಯವಸ್ಥೆ ಮಾಡಲಾಗಿತ್ತು. ಕೆಲವು ದಿನ ಕೆಲವು ಗ್ರಾ.ಪಂ.ಗಳಲ್ಲಿ ಆಧಾರ್‌ ತಿದ್ದುಪಡಿ ನಡೆದು, ಬಳಿಕ ಅದು ಸ್ಥಗಿತಗೊಂಡಿದೆ. ಪ್ರಸ್ತುತ ಕಡಬ ತಾಲೂಕಿನ ಯಾವ ಗ್ರಾ.ಪಂ.ನಲ್ಲೂ ಆಧಾರ್‌ ತಿದ್ದುಪಡಿ ಆಗುತ್ತಿಲ್ಲ. ಸಾರ್ವಜನಿಕರು ಕಡಬ ತಹಶೀಲ್ದಾರ್‌ ಕೇಂದ್ರಕ್ಕೆ ನಸುಕಿನಲ್ಲಿ ಬಂದು ಕ್ಯೂ ನಿಲ್ಲುವಂತಾಗಿದೆ. ಕಡಬ ಆಧಾರ್‌ ಕೇಂದ್ರದಲ್ಲಿ ಒಂದೇ ಆಧಾರ್‌ ಕಿಟ್ ಇತ್ತು. ಜು. 17ರಿಂದ ಹೆಚ್ಚುವರಿಯಾಗಿ ಇನ್ನೊಂದು ಆಧಾರ್‌ ಕಿಟ್ ವ್ಯವಸ್ಥೆ ಮಾಡಲಾಗಿದೆ. ಇಬ್ಬರು ಆಪರೇಟರ್‌ಗಳು ದಿನಕ್ಕೆ 50ರಿಂದ 60 ಅರ್ಜಿಯನ್ನು ವಿಲೇವಾರಿ ಮಾಡಲು ಸಾಧ್ಯವಾಗುತ್ತದೆ. ಆದರೆ ಆಧಾರ್‌ ಕೆಲಸಕ್ಕೆ ಪ್ರತಿ ದಿನ ಕ್ಯೂ ನಿಲ್ಲುವವರ ಸಂಖ್ಯೆ ಮಾತ್ರ 200ಕ್ಕಿಂತಲೂ ಹೆಚ್ಚಿದೆ. ಆಧಾರ್‌ ತಿದ್ದುಪಡಿಗೆ ಹೆಸರು ನೋಂದಾಯಿಸಿದವರ ಸಂಖ್ಯೆ 2,000 ದಾಟಿದೆ. ಇದರಿಂದಾಗಿ ಗೊಂದಲ ಸೃಷ್ಟಿಯಾಗುತ್ತಿದೆ.

ಗ್ರಾ.ಪಂ.ಗಳಲ್ಲಿ ತಿದ್ದುಪಡಿ ವ್ಯವಸ್ಥೆಗೆ ಆಗ್ರಹ
ಗ್ರಾಮ ಪಂಚಾಯತ್‌ಗಳಲ್ಲಿ ಆಧಾರ್‌ ತಿದ್ದುಪಡಿಗೆ ವ್ಯವಸ್ಥೆಯಾದರೆ ಹೆಚ್ಚಿನ ಸಮಸ್ಯೆ ಬಗೆಹರಿದು ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಪಂಚಾಯತ್‌ಗಳಲ್ಲಿ ಆಧಾರ್‌ ತಿದ್ದುಪಡಿಗೆ ಅವಕಾಶ ಕಲ್ಪಿಸಿ ದ್ದರೂ ತಾಂತ್ರಿಕ ತೊಂದರೆಯಿಂದ ಸಮಸ್ಯೆ ಯಾಗಿದೆ. ಈ ಕುರಿತು ಸಂಬಂಧ ಪಟ್ಟವರು ಗಮನಹರಿಸಬೇಕಾದ ಅಗತ್ಯವಿದೆ.

ಗೊಂದಲ, ಮಾತಿನ ಚಕಮಕಿ
ಕಡಬ ಆಧಾರ್‌ ಕೇಂದ್ರದಲ್ಲಿ ಸೋಮವಾರ ಜನರಿಗೆ ಟೋಕನ್‌ ವಿತರಿಸುವ ವಿಚಾರದಲ್ಲಿ ಕೆಲಕಾಲ ಗೊಂದಲ ಉಂಟಾಗಿ ಕಂದಾಯ ಇಲಾಖೆ ಸಿಬಂದಿ ಹಾಗೂ ಸರತಿ ಸಾಲಿನಲ್ಲಿದ್ದ ಜನರ ನಡುವೆ ಮಾತಿನ ಚಕಮಕಿಯೂ ನಡೆಯಿತು. ದಿನಕ್ಕೆ 60 ಟೋಕನ್‌ ಮಾತ್ರ ಕೊಡಲು ಸಾಧ್ಯವಿದ್ದು, ಸರತಿ ಸಾಲಿನಲ್ಲಿ ನಿಂತು ಟೋಕನ್‌ ಸಿಗದವರು ರೊಚ್ಚಿಗೆದ್ದು ತಹಶೀಲ್ದಾರ್‌ ಕಚೇರಿ ಸಿಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ತಹಸೀಲ್ದಾರ್‌ ಜಾನ್‌ ಪ್ರಕಾಶ್‌ ರೋಡ್ರಿಗಸ್‌ ಆಧಾರ್‌ ಕೇಂದ್ರಕ್ಕೆ ಆಗಮಿಸಿ ಸಿಬಂದಿ ಹರೀಶ್‌ ಅವರಿಂದ ಮಾಹಿತಿ ಪಡೆದುಕೊಂಡು ಜನರಿಗೆ ಸಮಸ್ಯೆ ಕುರಿತು ಮನವರಿಕೆ ಮಾಡಿದರು.

Advertisement

ಜು. 24ರಿಂದ ಕಡಬ ತಹಶೀಲ್ದಾರ್‌ ಕಚೇರಿಯಲ್ಲಿ ಆಧಾರ್‌ ತಿದ್ದುಪಡಿ, ನೋಂದಣಿಗೆ ಟೋಕನ್‌ ವ್ಯವಸ್ಥೆ ರದ್ದುಗೊಳಿಸಿ, ಅರ್ಜಿ ಸಲ್ಲಿಸಿ ದಿನಾಂಕ ನಿಗದಿಪಡಿಸಿಕೊಳ್ಳಲು ಸೂಚಿಸಲಾಗಿದೆ. ಈ ಹಿಂದೆ ಆಧಾರ್‌ ತಿದ್ದುಪಡಿ, ನೋಂದಣಿಗಾಗಿ ಹೆಸರು ನೀಡಿದವರೂ ತಮ್ಮ ಆಧಾರ್‌ ಸಂಬಂಧಿಸಿದ ಕೆಲಸಗಳಿಗೆ ಅಗತ್ಯ ದಾಖಲೆಗಳೊಂದಿಗೆ ನಿಗದಿತ ಅರ್ಜಿ ನಮೂನೆಯಲ್ಲಿ ಅರ್ಜಿ ಸಲ್ಲಿಸಿ ದಿನಾಂಕ ಪಡೆದುಕೊಳ್ಳಬೇಕು. ಸಾರ್ವಜನಿಕರು ಬೆಳಗ್ಗೆಯಿಂದಲೇ ಕಾಯಬೇಕಾದ ಅಗತ್ಯವಿಲ್ಲ ಎಂದು ತಹಶೀಲ್ದಾರ್‌ ಜಾನ್‌ ಪ್ರಕಾಶ್‌ ರೋಡ್ರಿಗಸ್‌ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ನಾಳೆಯಿಂದ ಟೋಕನ್‌ ವ್ಯವಸ್ಥೆ ರದ್ದು
ಜು. 24ರಿಂದ ಕಡಬ ತಹಶೀಲ್ದಾರ್‌ ಕಚೇರಿಯಲ್ಲಿ ಆಧಾರ್‌ ತಿದ್ದುಪಡಿ, ನೋಂದಣಿಗೆ ಟೋಕನ್‌ ವ್ಯವಸ್ಥೆ ರದ್ದುಗೊಳಿಸಿ, ಅರ್ಜಿ ಸಲ್ಲಿಸಿ ದಿನಾಂಕ ನಿಗದಿಪಡಿಸಿಕೊಳ್ಳಲು ಸೂಚಿಸಲಾಗಿದೆ. ಈ ಹಿಂದೆ ಆಧಾರ್‌ ತಿದ್ದುಪಡಿ, ನೋಂದಣಿಗಾಗಿ ಹೆಸರು ನೀಡಿದವರೂ ತಮ್ಮ ಆಧಾರ್‌ ಸಂಬಂಧಿಸಿದ ಕೆಲಸಗಳಿಗೆ ಅಗತ್ಯ ದಾಖಲೆಗಳೊಂದಿಗೆ ನಿಗದಿತ ಅರ್ಜಿ ನಮೂನೆಯಲ್ಲಿ ಅರ್ಜಿ ಸಲ್ಲಿಸಿ ದಿನಾಂಕ ಪಡೆದುಕೊಳ್ಳಬೇಕು. ಸಾರ್ವಜನಿಕರು ಬೆಳಗ್ಗೆಯಿಂದಲೇ ಕಾಯಬೇಕಾದ ಅಗತ್ಯವಿಲ್ಲ ಎಂದು ತಹಶೀಲ್ದಾರ್‌ ಜಾನ್‌ ಪ್ರಕಾಶ್‌ ರೋಡ್ರಿಗಸ್‌ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next