Advertisement

ಅಂಚೆ ಕಚೇರಿಯಲ್ಲೂ ಆಧಾರ್‌

06:00 AM Jul 16, 2018 | |

ಬೆಂಗಳೂರು: ಹೊಸ ಆಧಾರ್‌ ಕಾರ್ಡ್‌ ಎಲ್ಲಿ ಪಡೆದುಕೊಳ್ಳುವುದು? ಈಗಾಗಲೇ ಹೊಂದಿರುವ ಆಧಾರ್‌ì ಕಾರ್ಡ್‌ನ ಮಾಹಿತಿ ಬದಲಾವಣೆ ಹೇಗೆ? ಎಂದು ಚಿಂತಿಸುವ ಅಗತ್ಯವಿಲ್ಲ. ತಾಲೂಕು ಕಚೇರಿ, ನಾಡಕಚೇರಿ ಹಾಗೂ ವಾರ್ಡ್‌ ಆಫೀಸ್‌ ಸೇರಿದಂತೆ ಕೆಲವು ಕಚೇರಿಗಳಲ್ಲಿ ವಿಶಿಷ್ಟ ಗುರುತಿನ ಚೀಟಿ ಪಡೆಯಬಹುದು. ಈ ಸೇವೆ ಇನ್ಮುಂದೆ ಅಂಚೆ ಕಚೇರಿಗಳಲ್ಲೂ ಸಿಗುತ್ತಿದೆ.

Advertisement

ದೇಶದ ಯಾವುದೇ ಅಂಚೆ ಕಚೇರಿಗಳಲ್ಲೂ ನೀವು ಹೊಸ ಆಧಾರ್‌ ಕಾರ್ಡ್‌ ಪಡೆದುಕೊಳ್ಳಬಹುದು ಅಥವಾ ಈಗಾಗಲೇ ಹೊಂದಿರುವ ಆಧಾರ್‌ ಕಾರ್ಡ್‌ನಲ್ಲಿ ಮಾಹಿತಿ ಬದಲಾವಣೆ ಮಾಡಿಕೊಳ್ಳಬಹುದು. ಒಬ್ಬ ಸಿಬ್ಬಂದಿ ಇರುವ ಅಂಚೆ ಕಚೇರಿ ಹೊರತುಪಡಿಸಿ ಉಳಿದ ಎಲ್ಲಾ ಅಂಚೆ ಕಚೇರಿಗಳಲ್ಲಿ ಆಧಾರ್‌ ಸೇವೆ ದೊರೆಯಲಿದೆ. ಈ ಸೇವೆ ಒದಗಿಸಲು ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಅಂಚೆ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಡಿದೆ.

ಆಧಾರ್‌ ಅಭಿಯಾನ
ಕಳೆದ 5 ತಿಂಗಳ ಹಿಂದೆಯೇ ದೇಶದ ಎಲ್ಲ ಅಂಚೆ ಕಚೇರಿಗಳಲ್ಲೂ ಹೊಸ ಆಧಾರ್‌ ಕಾರ್ಡ್‌ ನೋಂದಣಿ ಹಾಗೂ ಆಧಾರ್‌ ಕಾರ್ಡ್‌ನಲ್ಲಿ ಈಗಿರುವ ಮಾಹಿತಿ ಬದಲಾವಣೆ ಮಾಡಿಸುವ ಸೇವೆ ದೊರೆಯುತ್ತಿತ್ತು. ಆದರೆ, ಜನರಿಗೆ ಈ ಸೇವೆ ಬಗ್ಗೆ ತಿಳಿಯದೇ ಇರುವುದರಿಂದ ಶನಿವಾರ ದೇಶದ ಎಲ್ಲ ಅಂಚೆ ಕಚೇರಿಗಳಲ್ಲೂ ಆಧಾರ್‌ ಅಭಿಯಾನದ ಮೂಲಕ ಮಾಹಿತಿ ನೀಡಲಾಯಿತು.

ಎಲ್ಲ ಅಂಚೆ ಕಚೇರಿಗಳು ಕನಿಷ್ಠ ಒಂದಾದರೂ ಆಧಾರ್‌ ಸೇವೆ ಒದಗಿಸಬೇಕೆಂದು ಕೇಂದ್ರ ಸರ್ಕಾರ ಸೂಚಿಸಿದ್ದರ ಪರಿಣಾಮ ಶನಿವಾರ ನಡೆದ ಅಭಿಯಾನದಲ್ಲಿ ರಾಜ್ಯದ 600 ರಿಂದ 700 ಅಂಚೆ ಕಚೇರಿಗಳು ಭಾಗವಹಿಸಿದ್ದವು. ಒಟ್ಟು 6ರಿಂದ 8 ಸಾವಿರ ಮಂದಿ ಈ ಅಭಿಯಾನದಲ್ಲಿ ಸೇವೆ ಪಡೆದುಕೊಂಡರು.

ಬೆಂಗಳೂರಿನಲ್ಲಿ ನಡೆದ ಅಭಿಯಾನ
ಬೆಂಗಳೂರು ನಗರಕ್ಕೆ ಸಂಬಂಧಿಸಿದ ಪೂರ್ವ, ಪಶ್ಚಿಮ ಹಾಗೂ ದಕ್ಷಿಣ ವಲಯ ಹಾಗೂ ಚನ್ನಪಟ್ಟಣದ ವಿಭಾಗದ ಬಹುತೇಕ ಅಂಚೆ ಕಚೇರಿಗಳೂ ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದು, ಒಟ್ಟು ಎರಡು ಸಾವಿರ ಮಂದಿ ಈ ಸೇವೆ ಪಡೆದುಕೊಂಡಿದ್ದಾರೆ. ಬೆಂಗಳೂರು ಪೂರ್ವ ವಲಯದಲ್ಲಿರುವ 75 ಅಂಚೆ ಕಚೇರಿಗಳಲ್ಲಿ 51 ಕಡೆಗಳಲ್ಲಿ ಆಧಾರ್‌ ಸೇವೆ ಸಿಗಲಿದೆ. ಪಶ್ಚಿಮ ವಲಯದಲ್ಲಿರುವ 50 ಅಂಚೆ ಕಚೇರಿಗಳಲ್ಲಿ 41ರಲ್ಲಿ ಕಚೇರಿಗಳಲ್ಲಿ ಸೇವೆ ಲಭ್ಯವಿದೆ. ದಕ್ಷಿಣ ವಲಯದ 65 ಅಂಚೆ ಕಚೇರಿಗಳಲ್ಲಿ 43 ಅಂಚೆ ಕಚೇರಿಗಳಲ್ಲಿ ಹಾಗೂ ಬೆಂಗಳೂರು ವಲಯಕ್ಕೆ ಸೇರಿದ ಸೇರಿದ ಚನ್ನಪಟ್ಟಣ ವಿಭಾಗದಲ್ಲಿರುವ 60 ರಿಂದ 70 ಅಂಚೆ ಕಚೇರಿಗಳಲ್ಲಿ 28 ಕಚೇರಿಗಳಲ್ಲಿ ಆಧಾರ್‌ ಕಾರ್ಡ್‌ ಸೇವೆ ಪಡೆದುಕೊಳ್ಳಬಹುದು.

Advertisement

ಏನೇನು ದಾಖಲೆಗಳು ಬೇಕು?
ಪಾಸ್‌ಪೋರ್ಟ್‌, ಪಾನ್‌ ಕಾರ್ಡ್‌, ಚುನಾವಣಾ ಗುರುತಿನ ಚೀಟಿ, ಪಡಿತರ ಚೀಟಿ, ಡ್ರೈವಿಂಗ್‌ ಲೈಸನ್ಸ್‌, ನರೇಗಾ ಉದ್ಯೋಗ ಕಾರ್ಡ್‌, ಶಿಕ್ಷಣ ಸಂಸ್ಥೆಗಳು ನೀಡಿರುವ ಭಾವಚಿತ್ರವಿರುವ ಗುರುತಿನ ಚೀಟಿ, ಕ್ರೆಡಿಟ್‌ ಕಾರ್ಡ್‌, ಬ್ಯಾಂಕ್‌ ಎಟಿಎಂ ಕಾರ್ಡ್‌, ಕಿಸಾನ್‌ ಪಾಸ್‌ಬುಕ್‌, ಪಿಂಚಣಿ ಕಾರ್ಡ್‌, ಸ್ವಾತಂತ್ರ ಹೋರಾಟಗಾರರ ಗುರುತಿನ ಚೀಟಿ, ಬ್ಯಾಂಕ್‌ ಪಾಸ್‌ಬುಕ್‌ ಸೇರಿದಂತೆ ಸರ್ಕಾರ ನೀಡುವ ಯಾವುದೇ ಗುರುತಿನ ಚೀಟಿ ಒದಗಿಸಿ ಸೇವೆ ಪಡೆದುಕೊಳ್ಳಬಹುದು.

ಉಚಿತವಾಗಿ ಹೊಸ ಆಧಾರ್‌ ಕಾರ್ಡ್‌ ಪಡೆದುಕೊಳ್ಳಬಹುದು. ಆಧಾರ್‌ ಕಾರ್ಡ್‌ನಲ್ಲಿರುವ ಮಾಹಿತಿ ಬದಲಾವಣೆಗೆ 30 ರೂ. ಪಾವತಿಸಬೇಕು. ಅಂಚೆ ಕಚೇರಿಯಲ್ಲಿಯೇ ಆಧಾರ್‌ ಕಾರ್ಡ್‌ ಲಭಿಸುವುದಿಲ್ಲ. ಅಲ್ಲಿ ದಾಖಲೆಗಳನ್ನು ನೀಡಿ ಬೆರಳಚ್ಚು, ಫೋಟೋ ತೆಗೆಸಿದರೆ ರಶೀದಿ ಪತ್ರ ದೊರೆಯಲಿದೆ. ಕಾರ್ಡ್‌ ನಿಮ್ಮ ಮನೆಗೆ ಬಂದು ಸೇರಲಿದೆ.

ಆನ್‌ಲೈನ್‌ನಲ್ಲಿ ಹೊಸ ಆಧಾರ್‌ ಕಾರ್ಡ್‌ ಪಡೆದುಕೊಳ್ಳಲು ತಿಳಿಯದ ಮಂದಿಗೆ ಅಂಚೆ ಕಚೇರಿಯಲ್ಲಿ ಆಧಾರ್‌ ಸೇವೆ ಒದಗಿಸಿರುವುದು ಅನುಕೂಲವಾಗಿದೆ. ಎಲ್ಲ ಗ್ರಾಮೀಣ ಪ್ರದೇಶದಲ್ಲೂ ಅಂಚೆ ಕಚೇರಿ ಇರುವುದರಿಂದ ಹೊಸ ಆಧಾರ್‌ ಕಾರ್ಡ್‌ ಪಡೆದುಕೊಳ್ಳುವುದು ಹಾಗೂ ಈಗಾಗಲೇ ಪಡೆದುಕೊಂಡಿರುವ ಆಧಾರ್‌ ಕಾರ್ಡ್‌ನಲ್ಲಿರುವ ಮಾಹಿತಿ ಬದಲಾವಣೆ ಸೇವೆ ಎಲ್ಲರಿಗೂ ಸುಲಭದಲ್ಲಿ ಸಿಗಲಿದೆ.
– ಸಂದೇಶ ಮಹದೇವಪ್ಪ, ವರಿಷ್ಠ ಅಂಚೆ ಅಧಿಕ್ಷಕರು, ಪೂರ್ವ ವಲಯ

– ಶ್ರುತಿ ಮಲೆನಾಡತಿ

Advertisement

Udayavani is now on Telegram. Click here to join our channel and stay updated with the latest news.

Next