Advertisement

ಆಧಾರ್‌ ತಿದ್ದುಪಡಿ: ಕೇಂದ್ರದಲ್ಲಿ ಗಡಿಬಿಡಿ

11:25 AM Mar 10, 2018 | Team Udayavani |

ಪುತ್ತೂರು: ಇಷ್ಟರವರೆಗೆ ಆಧಾರ್‌ಕಾರ್ಡ್‌ ಮಾಡಿಸೋ ತರಾ ತುರಿ. ಈಗ ತಿದ್ದುಪಡಿ ಮಾಡೋ ಅವಸರ. ಆರ್‌ಟಿಇ ಅಡಿ ಶಾಲಾ ನೋಂದಣಿಯಿಂದ ಹಿಡಿದು ನಿತ್ಯದ ಎಲ್ಲ ಅಗತ್ಯಕ್ಕೂ ಆಧಾರ್‌ ಬಳಕೆಯಾಗುತ್ತಿದೆ. ತಮ್ಮ ಕೈಯಲ್ಲಿರುವ ಆಧಾರ್‌ನ್ನು ಕೊಂಡು ಹೋದರೆ ತಿರಸ್ಕೃತಗೊಳ್ಳುತ್ತಿದೆ. ಕಾರಣ, ದಾಖಲಾತಿ ಸಂದರ್ಭ ನಡೆದ ಎಡವಟ್ಟು. ಕೆಲ ವರ್ಷಗಳ ಹಿಂದೆ ಆಧಾರ್‌ ಕಾರ್ಡ್‌ನಲ್ಲಿ ಹುಟ್ಟಿದ ವರ್ಷವನ್ನು ಮಾತ್ರ ದಾಖಲಿಸಲಾಗುತ್ತಿತ್ತು. ಆದರೆ ಈಗ ಹುಟ್ಟಿದ ದಿನವೂ ಅಗತ್ಯ. ಈ ಬದಲಾವಣೆಗೆ ಬ್ಯಾಂಕ್‌ಗಳ ಮುಂದೆ ರಜೆ ಮಾಡಿ ಸರತಿ ನಿಲ್ಲಬೇಕು.

Advertisement

ಆಧಾರ್‌ ಕಾರ್ಡನ ಹೊಣೆಯನ್ನು ಖಾಸಗಿ ಕೇಂದ್ರಗಳಿಂದ ತೆಗೆದು ಬ್ಯಾಂಕ್‌ಗಳಿಗೆ ವಹಿಸಲಾಯಿತು. ಅಷ್ಟರಲ್ಲೇ ಎಲ್ಲದಕ್ಕೂ ಆಧಾರ್‌ ಕೇಳುತ್ತಿರುವುದರಿಂದ ಮತ್ತು ಕೇಂದ್ರದಲ್ಲಿ ಸಾಕಷ್ಟು ಸೌಲಭ್ಯ ಕಲ್ಪಿಸದ ಕಾರಣ ಸಮಸ್ಯೆ ಭೂತಾಕಾರ ತಾಳಿದೆ. ಜಿಲ್ಲೆಯಾದ್ಯಂತ ನಿತ್ಯ ಬ್ಯಾಂಕ್‌ಗಳ ಮುಂದೆ ಸರತಿ ಸಾಲು ಹೆಚ್ಚುತ್ತಿದೆ.

ನಿತ್ಯವೂ ನಿಗದಿಪಡಿಸಿದ ಬ್ಯಾಂಕ್‌ನಲ್ಲಿ 15ರಿಂದ 20ರಷ್ಟು ಟೋಕನ್‌ ನೀಡಲಾಗುತ್ತದೆ. ಇದನ್ನು ಪಡೆಯಲು ಹಳ್ಳಿಗಳಿಂದ ಬೆಳಿಗ್ಗೆಯೇ ಬಂದು ಕಾಯಬೇಕು. ಟೋಕನ್‌ ಸಿಗಲಿಲ್ಲ ಎಂದಾದರೆ, ಮರುದಿನ ಮತ್ತೆ ಬರಬೇಕು. ಆಧಾರ್‌ ಇಲ್ಲದೇ ತಮ್ಮ ಮಗುವನ್ನು ಆರ್‌ಟಿಇ ಅಡಿ ಶಾಲೆಗೆ ಸೇರಿಸಲು ಪರದಾಡಬೇಕಾದ ಸ್ಥಿತಿ ಹಲವು ಹೆತ್ತವರದ್ದು.

ಬ್ಯಾಂಕ್‌ಗಳ ಅಸಹಾಯಕತೆ
ಸದ್ಯಕ್ಕೆ ಆಫ್‌ಲೈನ್‌ ಮೂಲಕ ಆಧಾರ್‌ ನೋಂದಣಿ ನಡೆಸಲಾಗುತ್ತಿದೆ. ಸಂಜೆವರೆಗೆ ನೋಂದಣಿ ಮಾಡಿದ್ದನ್ನು ಕೊನೆಗೆ ಸರ್ವರ್‌ ಗೆ ಅಪ್‌ಲೋಡ್‌ ಮಾಡಬೇಕು. ಈ ಎಲ್ಲವನ್ನು ತಾಳೆನೋಡಿ, ಪ್ಯಾಕೆಟ್‌ ತರಹ ಮಾಡಿ ಇಡಲಾಗುತ್ತದೆ. ಇದೆಲ್ಲ ಆಗಿ ಬಳಿಕ ದೋಷ ಕಂಡುಬಂದರೆ ಬ್ಯಾಂಕ್‌ ಅಧಿಕಾರಿಗಳಿಗೇ ದಂಡ ವಿಧಿಸಲಾಗುತ್ತದೆ. ಎಷ್ಟೇ ವೇಗವಾಗಿ ಮಾಡಿದರೂ ದಿನಕ್ಕೆ 20ರಿಂದ ಹೆಚ್ಚು ಜನರ ಗುರುತು ಪಡೆಯಲಾಗದು. ಬ್ಯಾಂಕ್‌ಗಳಲ್ಲಿ ಈ ಕಾರ್ಯಕ್ಕೆ ಪ್ರತ್ಯೇಕ ಸಿಬಂದಿ ಇರದ ಕಾರಣ ಸಮಸ್ಯೆ ತೀವ್ರತೆ ಹೆಚ್ಚಿದೆ.

ಜನಸಾಮಾನ್ಯರ ಬವಣೆ
ಹೊಸದಾಗಿ ಆಧಾರ್‌ ಕಾರ್ಡ್‌ ಮಾಡಿಸುವವರಿಗೆ ಪ್ರತ್ಯೇಕ ಕೇಂದ್ರ, ಗ್ರಾಮ ಪಂಚಾಯತ್‌, ಶಾಲೆಗಳಲ್ಲಿ ಅವಕಾಶ ನೀಡಲಾಗಿದೆ. ಆದರೆ ಆಧಾರ್‌ ತಿದ್ದುಪಡಿಗೆ ಇಷ್ಟು ಅವಕಾಶ ಕಲ್ಪಿಸದಿರುವುದು ಸಾಕಷ್ಟು ತೊಂದರೆಯಾಗುತ್ತಿದೆ ಎಂಬುದು ನಾಗರಿಕರ ಅಭಿಪ್ರಾಯ.

Advertisement

ಆರ್‌ಟಿಇ (ಶಿಕ್ಷಣ ಹಕ್ಕು ಕಾಯ್ದೆ) ಅಡಿ ವಿದ್ಯಾರ್ಥಿಯನ್ನು ನೋಂದಾಯಿಸಲು ಆಧಾರ್‌ ಕಾರ್ಡ್‌ ಕಡ್ಡಾಯ ಎಂದು ಪ್ರಭಾರ ಬಿಇಒ ಶಿವರಾಮ್‌ ಭಟ್‌ ತಿಳಿಸಿದ್ದಾರೆ. ನಿಗದಿತ ದಿನದೊಳಗೆ ವಿದ್ಯಾರ್ಥಿಗಳ ನೋಂದಣಿ ಮಾಡಿಕೊಳ್ಳಬೇಕಿದ್ದರೆ, ಆಧಾರ್‌ ಅಡ್ಡಗಾಲಾಗುತ್ತದೆ. ಹಾಗಾಗಿ ಜಿಲ್ಲಾಡಳಿತ ಏನಾದರೂ ಪರಿಹಾರ ಸೂಚಿಸಬೇಕೆಂಬುದು ಹೆತ್ತವರ ಆಗ್ರಹ.

ಸೂಕ್ತ ಕ್ರಮ
ಆಧಾರ್‌ ಕೇಂದ್ರದ ಸಮಸ್ಯೆಯನ್ನು ಗಮನಿಸಿದ್ದೇನೆ. ಸಾಕಷ್ಟು ಮಂದಿ ತಮ್ಮ ಅಮೂಲ್ಯ ದಿನವನ್ನು ಹಾಳು ಮಾಡುವಂತಾಗಿದೆ. ಈ ಹಿನ್ನೆಲೆಯಲ್ಲಿ ರೋಟರಿ ಕ್ಲಬ್‌ ಜತೆ ಮಾತುಕತೆ ನಡೆಸಿದ್ದೇನೆ. ಆಧಾರ್‌ನ ಕಿಟ್‌ ತಂದು, 3 ದಿನದಲ್ಲಿ ತಿದ್ದುಪಡಿ, ಹೊಸ ನೋಂದಣಿಗೆ ಅವಕಾಶ ಮಾಡಿಕೊಡುವ ಚಿಂತನೆ ನಡೆದಿದೆ. ಈ ಬಗ್ಗೆ ಅಪರ ಜಿಲ್ಲಾಧಿಕಾರಿ ಜತೆ ಮಾತುಕತೆ ನಡೆಸಿ, ಸಮಸ್ಯೆ ಪರಿಹಾರಕ್ಕೆಸೂಕ್ತ ಕ್ರಮ ಕೈಗೊಳ್ಳಲಾಗುವುದು.
– ಎಚ್‌.ಕೆ. ಕೃಷ್ಣಮೂರ್ತಿ,
ಸಹಾಯಕ ಆಯುಕ್ತ, ಪುತ್ತೂರು

ಗಣೇಶ್‌ ಎನ್‌. ಕಲ್ಲರ್ಪೆ 

Advertisement

Udayavani is now on Telegram. Click here to join our channel and stay updated with the latest news.

Next