ತನ್ನ ಟೈಟಲ್, ಪೋಸ್ಟರ್ ಮತ್ತು ಟ್ರೇಲರ್ ಮೂಲಕ ಒಂದಷ್ಟು ಸಿನಿಪ್ರಿಯ ಗಮನ ಸೆಳೆದಿದ್ದ “ಆಚಾರ್ ಆ್ಯಂಡ್ ಕೋ’ ಸಿನಿಮಾ ಈ ವಾರ ಬಿಡುಗಡೆಯಾಗಿದೆ. ಆರಂಭದಲ್ಲಿಯೇ ಚಿತ್ರತಂಡ ಹೇಳಿಕೊಂಡಿರುವಂತೆ, ಇದೊಂದು ಅಪ್ಪಟ ರೆಟ್ರೋ ಶೈಲಿಯ ಸಿನಿಮಾ. 1960ರ ಕಾಲಘಟ್ಟದಲ್ಲಿ ಸಾಗುವ ಸಿನಿಮಾದ ಕಥೆಯಲ್ಲಿ ಆಗಿನ ಅವಿಭಕ್ತ ಕುಟುಂಬ, ಸಂಬಂಧಗಳು, ಜನ-ಜೀವನ ಎಲ್ಲದರ ಚಿತ್ರಣವಿದೆ.
ಪಿಡಬ್ಲ್ಯುಡಿ ಇಂಜಿನಿಯರ್ ಆಗಿರುವ ಮಧುಸೂದನ ಆಚಾರ್ ಅವರದ್ದ ಕೂಡು ಕುಟುಂಬ. ಚಿಕ್ಕ ಮನೆಯಲ್ಲಿ ಹತ್ತಾರು ಜನ. ಮನೆಯ ಎಲ್ಲ ಮಕ್ಕಳ ಶಿಕ್ಷಣ, ಉದ್ಯೋಗ, ಮದುವೆಯ ಜವಾಬ್ದಾರಿ ವಹಿಸಿಕೊಂಡು ಎಲ್ಲರನ್ನೂ ಪೋಷಿಸಿಕೊಂಡು ಬರುತ್ತಿದ್ದ ಹಿರಿಯರಾದ ಮಧುಸೂದನ ಹಠತ್ತಾಗಿ ನಿಧನರಾಗುತ್ತಾರೆ. ಅದಾದ ನಂತರ ಅವಿಭಕ್ತ ಕುಟುಂಬದ ಮನೆಯ ಪರಿಸ್ಥಿತಿ ಬದಲಾಗುತ್ತದೆ. ತಂದೆಯ ನಿಧನದಿಂದ ಜವಾಬ್ದಾರಿ ಮಕ್ಕಳ ಹೆಗಲಿಗೆ ವರ್ಗಾವಣೆ ಆಗುತ್ತದೆ. ಆಗ ಈ ಕೂಡು ಕುಟುಂಬದಲ್ಲಿ ಏನೆಲ್ಲ ಬದಲಾವಣೆ ಆಗುತ್ತದೆ ಎಂಬುದರ ಸುತ್ತ “ಆಚಾರ್ ಆ್ಯಂಡ್ ಕೋ’ ಸಿನಿಮಾದ ಕಥಾಹಂದರ ಸಾಗುತ್ತದೆ.
1960ರ ದಶಕದ ಕಥೆಯನ್ನು ಇಂದಿನ ತಲೆಮಾರಿಗೆ ಇಷ್ಟವಾಗುವಂತೆ ಕಾಮಿಡಿ ಶೈಲಿಯಲ್ಲಿ ಅಚ್ಚುಕಟ್ಟಾಗಿ ತೆರೆಗೆ ತಂದಿರುವ ಹೆಗ್ಗಳಿಕೆ ನಿರ್ದೇಶಕಿ ಸಿಂಧೂ ಶ್ರೀನಿವಾಸಮೂರ್ತಿ ಅವರದ್ದು. ಎಮೋಶನ್ಸ್ ಮತ್ತು ಕಾಮಿಡಿ ಎರಡ ಸಮ್ಮಿಶ್ರಣದ ಸೂತ್ರದಲ್ಲಿ ಕೌಟುಂಬಿಕ ಕಥೆಯನ್ನು ನವಿರಾಗಿ ಹೇಳಿರುವುದರಿಂದಸಿನಿಮಾ ರೆಟ್ರೋ ಟು ಮೆಟ್ರೋ ಎಲ್ಲರಿಗೂ ಕನೆಕ್ಟ್ ಆಗುವಂತಿದೆ. ಚಿತ್ರಕಥೆ ಮತ್ತು ನಿರೂಪಣೆಯಲ್ಲಿ ಕೊಂಚ ವೇಗವಿದ್ದಿದ್ದರೆ, ಕೆಲ ದೃಶ್ಯಗಳಿಗೆ ಕತ್ತರಿ ಪ್ರಯೋಗಿಸಿದ್ದರೆ, “ಆಚಾರ್ ಆ್ಯಂಡ್ ಕೋ’ ಸಿನಿಮಾ ಇನ್ನಷ್ಟು ಪರಿಣಾಮಕಾರಿಯಾಗಿ ಮೂಡಿಬರುವ ಸಾಧ್ಯತೆಗಳಿದ್ದವು.
ಇನ್ನು ಅಶೋಕ್, ಸುಧಾ ಬೆಳವಾಡಿ ಕೆಲವೊಂದು ಪರಿಚಿತ ಕಲಾವಿದರನ್ನು ಹೊರತುಪಡಿಸಿ, ಬಹುತೇಕ ಹೊಸ ಕಲಾವಿದರು “ಆಚಾರ್ ಆ್ಯಂಡ್ ಕೋ’ ಸಿನಿಮಾವನ್ನು ಆವರಿಸಿಕೊಂಡಿದ್ದಾರೆ. ಬಹುತೇಕ ಹೊಸ ಕಲಾವಿದರು ಲವಲವಿಕೆಯ ಅಭಿನಯ ನೀಡಿದ್ದರಿಂದ, ಸಿನಿಮಾ ಕೂಡ ತೆರೆಮೇಲೆ ಅಷ್ಟೇ ಲವಲವಿಕೆಯಿಂದ ಕಾಣುತ್ತದೆ. ತಾಂತ್ರಿಕವಾಗಿ ಸಿನಿಮಾದ ಛಾಯಾಗ್ರಹಣ, ಹಿನ್ನೆಲೆ ಸಂಗೀತ ಎಲ್ಲವೂ ಗುಣಮಟ್ಟದಲ್ಲಿದೆ.
ಮನೆಯಲ್ಲಿ ಹಿರಿಯರು ಆಗಾಗ್ಗೆ ಹೇಳುತ್ತಿದ್ದ “ಆ ದಿನಗಳ’ನ್ನು ಸಿನಿಮಾದಲ್ಲಿ ಕಣ್ತುಂಬಿಕೊಳ್ಳಲು ಬಯಸುವವರು ಒಮ್ಮೆ “ಆಚಾರ್ ಆ್ಯಂಡ್ ಕೋ’ ಮನೆಯವರ ಕಥೆ ನೋಡಿಕೊಂಡು ಬರಬಹುದು.
ಜಿ.ಎಸ್.ಕಾರ್ತಿಕ ಸುಧನ್