ಒಂದು ಸಿನಿಮಾ ಮಾಡಿ, ಅದನ್ನು ತೆರೆಗೆ ತರುವುದು ಎಷ್ಟು ಕಷ್ಟ ಎಂಬುದು ಸಿನಿಮಾ ಮಂದಿಗಷ್ಟೇ ಗೊತ್ತು. ದಯಾಳ್ ವಿಚಾರದಲ್ಲೂ ಅದು ಹಾಗೇ ಆಗಿದೆ. ಹೌದು, “ಆ ಕರಾಳ ರಾತ್ರಿ’ ಚಿತ್ರ ಶುರುವಾಗಿದ್ದು, ಚಿತ್ರೀಕರಣಗೊಂಡಿದ್ದು, ಮುಗಿದಿದ್ದು, ಬಿಡುಗಡೆಯ ಕೆಲಸಗಳು ಜೋರಾಗಿ ನಡೆದದ್ದು, ಮೊದಲ ಪ್ರತಿಯನ್ನೂ ಪಡೆದದ್ದು ಎಲ್ಲವೂ ವೇಗವಾಗಿಯೇ ನಡೆದಿದೆ. ಆದರೆ, ಅದೇಕೋ ಏನೋ, ಬಿಡುಗಡೆ ಆಗಬೇಕಿದ್ದ ಚಿತ್ರ ಎರಡು ವಾರ ಮುಂದಕ್ಕೆ ಹೋಗಿಬಿಟ್ಟಿದೆ.
ಇಷ್ಟರಲ್ಲಾಗಲೇ ಚಿತ್ರ ಬಿಡುಗಡೆ ಮಾಡುವುದಕ್ಕೆ ದಯಾಳ್ ಯೋಚಿಸಿದ್ದರು. ಆದರೆ, ಚಿತ್ರ ಸ್ವಲ್ಪ ಮುಂದಕ್ಕೆ ಹೋಗಿದ್ದು, ಮುಂದಿನ ವಾರ ಅಂದರೆ ಜುಲೈ 13ರಂದು ಚಿತ್ರವು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಎಲ್ಲಾ ಸರಿ, ಚಿತ್ರ ವಿಳಂಬವಾಗಿದ್ದು ಏಕೆ ಎಂದರೆ, ಪ್ರಾಣಿದಯಾ ಮಂಡಳಿ ಎಂಬುದು ದಯಾಳ್ ಮಾತು. ಪ್ರಾಣಿ ದಯಾ ಮಂಡಳಿಯವರು ಚಿತ್ರಕ್ಕೆ ಪ್ರಮಾಣ ಪತ್ರ ಕೊಡುವುದರ ಜೊತೆಗೆ, ನಿರ್ಮಾಪಕರಿಗೆ ಸ್ವಲ್ಪ ಹಣದ ಸಮಸ್ಯೆಯೂ ಎದುರಾಯಿತಂತೆ.
ಆದರೆ, ಕೆಲ ಸಿನಿಮಾಸಕ್ತ ಟೆಕ್ಕಿಗಳು ಕಥೆಯ ಸಾರಾಂಶ ಚೆನ್ನಾಗಿದೆ ಅಂತ ಪರಿಚಿತರೊಬ್ಬರಿಗೆ ಚಿತ್ರ ತೋರಿಸಿದ್ದೇ ತಡ, ಕೆಲವರು ನೋಡಿ, ನಿರ್ದೇಶಕ ದಯಾಳ್‌ಗೆ ತಮ್ಮ ಮುಂದಿನ ಚಿತ್ರ ನಿರ್ದೇಶಿಸಿ ಅಂತ ಅಡ್ವಾನ್ಸ್ ಮಾಡಿದ್ದಾರೆ. ಅಷ್ಟೇ ಅಲ್ಲ, ಇನ್ನೊಬ್ಬರು ಚಿತ್ರ ಬಿಡುಗಡೆಗೆ ಸಹಾಯವನ್ನೂ ಮಾಡಿದ್ದಾರೆ. ಇಷ್ಟೆಲ್ಲಾ ನಡೆದ ಹಿನ್ನೆಲೆಯಲ್ಲಿ ದಯಾಳ್ ಚಿತ್ರ ಬಿಡುಗಡೆಗೆ ಅಣಿಯಾಗಿದ್ದಾರೆ. ಜ್ಞಾನೇಶ್ವರ್ ಐತಾಳ್ ಚಿತ್ರ ಬಿಡುಗಡೆ ಮಾಡಿಕೊಡಲು ಒಪ್ಪಿದ್ದಾರೆ. ಅಲ್ಲಿಗೆ “ಆ ಕರಾಳ ರಾತ್ರಿ’ ಅನುಭವ ಹಂಚಿಕೊಳ್ಳಲು ಪ್ರೇಕ್ಷಕರು ಸಜ್ಜಾಗಬೇಕಷ್ಟೇ.
ಚಿತ್ರಕ್ಕೆ ಜೆಕೆ ನಾಯಕ. ಅವರಿಗೆ ಅನುಪಮಾ ಗೌಡ ನಾಯಕಿ. ಚಿತ್ರದಲ್ಲಿ ರಂಗಾಯಣ ರಘು, ವೀಣಾ ಸುಂದರ್, ನವರಸನ್ ನಟಿಸಿದ್ದಾರೆ. ನವೀನ್‌ಕೃಷ್ಣ ಬುಡಬುಡಕೆ ಪಾತ್ರದ ಜೊತಗೆ ಸಂಭಾಷಣೆ ಬರೆದಿದ್ದಾರೆ. ಚಿತ್ರಕ್ಕೆ ಮೋಹನ್‌ಹಬ್ಬು ಕಥೆ ಇದೆ. ಗಣೇಶ್‌ನಾರಾಯಣ್ ಸಂಗೀತವಿದೆ. ಪಿ.ಕೆ.ಹೆಚ್.ದಾಸ್ ಛಾಯಾಗ್ರಹಣವಿದೆ. ತಂಗಾಳಿ ನಾಗರಾಜ್ ಸಾಹಿತ್ಯವಿದೆ. ಮೂಡಿಗೆರೆ ಸಮೀಪದ ಬಾಳೂರು ಗ್ರಾಮದ ಪುರಾತನ ಮನೆಯಲ್ಲಿ ಚಿತ್ರೀಕರಿಸಲಾಗಿದೆ. ಒಂದು ಮುಕ್ಕಾಲು ಗಂಟೆಯ ಈ ಚಿತ್ರ ಜುಲೈ 13ರಂದು ತೆರೆ ಕಾಣುತ್ತಿದೆ.