ಬೆಂಗಳೂರು: ಹೋಟೆಲ್ ಮಾಲೀಕ ವೇತನ ಕೊಡದೇ ಬೈಕ್ ಕಳ್ಳತನ ಮಾಡುವಂತೆ ತಮಾಷೆಗೆ ಹೇಳಿರುವುದನ್ನೇ ಗಂಭೀರ ವಾಗಿ ಪರಿಗಣಿಸಿದ ವ್ಯಕ್ತಿಯೊಬ್ಬ ಯೂಟ್ಯೂಬ್ ನೋಡಿ ಬೈಕ್ ಕಳ್ಳತನ ಮಾಡಿ ಮಡಿವಾಳ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾನೆ.
ಕೇರಳ ಮೂಲದ ಅಖಿಬ್ ಖಾನ್ (23) ಬಂಧಿತ ಆರೋಪಿ.
ಈತ ಕೆಲ ತಿಂಗಳಿಂದ ಮಡಿ ವಾಳದ ಹೊಟೆಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಹೆಚ್ಚುವರಿಯಾಗಿ ದುಡಿಸಿಕೊಂಡು ಸಂಬಳ ಸರಿಯಾಗಿ ನೀಡದ ಆರೋಪ ಮಾಲೀಕ ಆಸಿಫ್ ಮೇಲಿತ್ತು. ಇತ್ತೀಚೆಗೆ ಸಂಬಳ ಕೊಟ್ಟರೆ ಕೆಲಸ ಬಿಟ್ಟು ಹೋಗುತ್ತೇನೆ. ಊರಿಗೆ ಹೋಗಲು ಹಣವಿಲ್ಲ ಎಂದು ಮಾಲೀಕನಿಗೆ ಆಖೀಬ್ ಖಾನ್ ಬಳಿ ಹೇಳಿದ್ದ. ಇದಕ್ಕೆ ಮಾಲೀಕ “ಹೋಟೆಲ್ ಬಳಿ ಎಷ್ಟೊಂದು ಬೈಕ್‌ಗಳಿವೆ ಕಳ್ಳತನ ಮಾಡು’ ಎಂದು ತಮಾಷೆಯಾಗಿ ಹೇಳಿದ್ದ. ಇದನ್ನೇ ಗಂಭೀರವಾಗಿ ಪರಿಗಣಿಸಿದ ಆರೋಪಿಯು ಯೂಟ್ಯೂಬ್‌ನಲ್ಲಿ ಬೈಕ್ ಕದಿಯುವುದನ್ನು ನೋಡಿದ್ದ. ನಂತರ ಲಾಕ್ ಓಪನ್ ಮಾಡುವುದು ಹೇಗೆ ಎಂಬುದನ್ನು ತಿಳಿದು ಮಡಿವಾಳದ ಅಯ್ಯಪ್ಪ ದೇವಸ್ಥಾನ ಬಳಿ ಬೈಕ್ ಕಳ್ಳತನ ಮಾಡಿದ್ದ. ಕದ್ದ ಬೈಕ್‌ನಲ್ಲೇ ಕೇರಳಕ್ಕೆ ತೆರಳಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿ ಕ್ಯಾಮೆರಾ ದೃಶ್ಯ ಆಧರಿಸಿ ಆರೋಪಿ ಯಾರೆಂಬುದನ್ನು ಪತ್ತೆ ಹಚ್ಚಿದ್ದರು. ಮತ್ತೂಂದಡೆ ಬೈಕ್ ಕದ್ದಿರುವುದಕ್ಕೆ ಪಾಲಕರು ಬೈದಿದ್ದಾರೆ ಎಂದು ಬೇಸರಿಸಿಕೊಂಡು ಮತ್ತೆ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದ. ಆ ವೇಳೆ ಪೊಲೀಸರು ಆತನನ್ನು ಬಂಧಿಸಿದ್ದಾರೆ. ವಿಚಾರಣೆ ನಡೆಸಿದಾಗ ಹೋಟೆಲ್ ಮಾಲೀಕರು ಸಂಬಳ ನೀಡಿರಲಿಲ್ಲ. ಹೀಗಾಗಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬೈಕ್ ಕಳ್ಳತನ ಮಾಡು ಎಂದು ಸೂಚಿಸಿದ್ದ ಹೊಟೇಲ್ ಮಾಲೀಕನಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.