Advertisement

ಬೈಂದೂರಿನಲ್ಲಿ ಯುವ ಚೆಂಡೆ ಬಳಗದ್ದೇ ಸದ್ದು

10:55 PM Jan 08, 2020 | mahesh |

ಚೆಂಡೆಯ ಲಯಬದ್ಧ ನಿನಾದ ಆಕರ್ಷಣೀಯ. ಈ ಯುವಕರು ಆ ಕಲಾವಂತಿಕೆಯಲ್ಲೇ ಹೆಸರು ಮಾಡಿದ್ದಾರೆ.

Advertisement

ವಾ ದ್ಯ ಸಂಗೀತವೆಂಬುದು ದೇವಾಡಿಗ ಸಮುದಾಯಕ್ಕೆ ಪರಂಪರೆಯಿಂದ ಒಲಿದು ಬಂದ ಕಲೆ. ನಾದಸ್ವರ, ಸ್ಯಾಕ್ಸೋಪೋನ್‌ ವಾದನದಲ್ಲಿ ಈಗಾಗಲೇ ರಾಜ್ಯದೆಲ್ಲೆಡೆ ಗುರುತಿಸಿಕೊಂಡವರು ಬಹಳಷ್ಟು ಮಂದಿ ಇದ್ದಾರೆ. ಕೆಲವರು ಇದನ್ನು ವೃತ್ತಿಯಾಗಿಸಿಕೊಂಡರೆ, ಇನ್ನೂ ಕೆಲವರು ಹವ್ಯಾಸದ ಮಟ್ಟಕ್ಕೆ ಇಟ್ಟುಕೊಂಡಿದ್ದಾರೆ.

ಇಂಥ ಆಸಕ್ತ ಯುವಕರ ತಂಡವೊಂದು ಬೈಂದೂರಿನಲ್ಲಿ ಯುವ ಚಂಡೆ ಬಳಗವನ್ನು ಹುಟ್ಟುಕೊಂಡಿದೆ. ಭಟ್ಕಳದ ಗಣೇಶ ದೇವಾಡಿಗ ಇವರ ಮಾರ್ಗದರ್ಶನಲ್ಲಿ ರೂಪುಗೊಂಡ 21 ಮಂದಿ ಆಸಕ್ತ ಹವ್ಯಾಸಿ ಯುವಕರ ‘ದೇವಾಡಿಗ ಯುವ ಚೆಂಡೆ ಬಳಗ’ ಈಗಾಗಲೇ ಬೈಂದೂರು-ಭಟ್ಕಳ ವಿವಿಧೆಡೆ ಶಾರದೋತ್ಸವ, ಗಣೇಶೋತ್ಸವ ಸೇರಿದಂತೆ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕಲಾಸಕ್ತರ ಮೆಚ್ಚುಗೆ ಪಡೆದಿದೆ. ಇತ್ತೀಚೆಗೆ ಉಪ್ಪುಂದ ಕೊಡಿ ಹಬ್ಬದ ರಥೋತ್ಸವದಲ್ಲಿ ನೀಡಿದ ಪ್ರದರ್ಶನ ಪ್ರಶಂಸೆಗೆ ಕಾರಣವಾಯಿತು.

ಡಿಸೆಂಬರ್‌ನಲ್ಲಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಉಪಸ್ಥಿತಿಯಲ್ಲಿ ನಡೆದ ದೇವಾಡಿಗ ನವೋದಯ ಸಂಘದ ಕಾರ್ಯಕ್ರಮದಲ್ಲೂ ಭಾಗವಹಿಸಿ ಪ್ರದರ್ಶನ ನೀಡಿತು. ಅಲ್ಲಿ ಈ ತಂಡವನ್ನು ಗೌರವಿಸಲಾಯಿತು. ಈ ತಂಡದಲ್ಲಿರುವ ಯುವಕರು ವಿವಿಧ ಉದ್ಯೋಗದಲ್ಲಿದ್ದರೆ ಕೆಲವರು ವಿದ್ಯಾರ್ಥಿಗಳು. ತಮ್ಮ ಬಿಡುವಿನ ವೇಳೆಯಲ್ಲಿ ವಿವಿಧೆಡೆ ಕಾರ್ಯಕ್ರಮ ನೀಡಿದ್ದಾರೆ. ತಂಡದ ಕಾರ್ಯನಿರ್ವಾಹಕ ಸಂಚಾಲಕರಾಗಿ ರಾಜಶೇಖರ ದೇವಾಡಿಗ ಹಾಗೂ ಸಂಚಾಲಕರಾಗಿ ನಾರಾಯಣ ದೇವಾಡಿಗ ಕೋಣುರು ಮನೆ ಇದ್ದಾರೆ. ಈ ತಂಡವು ಜಿಲ್ಲೆ, ಹೊರ ಜಿಲ್ಲೆಯಲ್ಲಿ ಪ್ರದರ್ಶನ ನೀಡಿ ಸಂಭಾವನೆ ರೂಪದಲ್ಲಿ ಸಂಗ್ರಹಿತವಾದ ಹಣದಲ್ಲಿ (ಸದಸ್ಯರ ಸಂಭಾವನೆ ಹೊರತಪಡಿಸಿ) ಒಕ್ಕೂಟದ ವಿದ್ಯಾರ್ಥಿ ವೇತನಕ್ಕೆ ಸಹಾಯ ಮಾಡುವ ಉದ್ದೇಶ ಹೊಂದಿದೆ.

ಬೈಂದೂರಿನ ದೇವಾಡಿಗ ಒಕ್ಕೂಟದ ಆಶ್ರಯದಲ್ಲಿ ಈ ತಂಡ ಕಾರ್ಯ ನಿರ್ವಹಿಸುತ್ತಿದ್ದು, ಕೇರಳ ಮಾದರಿ ಶ್ರೇಷ್ಠ ಚೆಂಡೆ ನುಡಿಸಬೇಕೆನ್ನುವುದು ಹೊಂಗನಸು ಎನ್ನುತ್ತಾರೆ ಸಂಘದ ರಾಜಶೇಖರ ದೇವಾಡಿಗ.

Advertisement

- ರವಿರಾಜ್‌ ಬೈಂದೂರು

Advertisement

Udayavani is now on Telegram. Click here to join our channel and stay updated with the latest news.

Next