ಬೆಂಗಳೂರು: ಪ್ರತಿಷ್ಠಿತ ಕಾಲೇಜಿನ ಎಲ್‌ಎಲ್‌ಬಿ ವಿದ್ಯಾರ್ಥಿನಿಯೊಬ್ಬಳು ಚಾಕಲೇಟ್ ಖರೀದಿಸಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ದುಡ್ಡು ನೀಡಲು ಮುಂದಾದಾಗ ಆಕೆಯ ಮೊಬೈಲ್ ಕಸಿದುಕೊಂಡ ಆರೋಪಿಯನ್ನು ಹಿಡಿಯಲು ಹೋದಾಗ ಕೈಗೆ ಚೂರಿಯಿಂದ ಇರಿದು ಗಾಯಗೊಳಿಸಿರುವ ಪ್ರಕರಣ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪ್ರತಿಷ್ಠಿತ ಕಾಲೇಜಿನ ಎಲ್‌ಎಲ್‌ಬಿ ವಿದ್ಯಾ ರ್ಥಿನಿ ಕೋಡಿಹಳ್ಳಿ ನಿವಾಸಿ ಅಮೃತಾ (19) ಗಾಯಗೊಂಡವರು.
ಗಾಯಗೊಂಡ ವಿದ್ಯಾರ್ಥಿನಿಯು ಹುಲ್ಲಹಳ್ಳಿ ಪ್ರತಿಷ್ಠಿತ ಕಾಲೇಜಿನಲ್ಲಿ ಮೊದಲನೆ ವರ್ಷದ ಬಿ.ಎ.ಎಲ್.ಎಲ್.ಬಿ. ಓದುತಿದ್ದು, ಇತ್ತೀಚೆಗೆ ಕಾಲೇಜು ಸಮೀಪದ ಬೇಕರಿಯಲ್ಲಿ 1 ರೂ. ಮೌಲ್ಯದ 20 ಚಾಕಲೇಟ್‌ಗಳನ್ನು ತೆಗೆದುಕೊಂಡು ಹಣವನ್ನು ಕೂಆರ್ ಕೋಡ್ ಸ್ಕ್ಯಾನರ್‌ಗೆ ಹಾಕಲು ಫೋಟೋ ತೆಗೆದು ಹಿಡಿದುಕೊಂಡಿದ್ದರು. ಅಲ್ಲೇ ಪಕ್ಕದಲ್ಲಿ ಮಾಸ್ಕ್ ಧರಿಸಿ ನಿಂತಿದ್ದ ಹುಡುಗನೊಬ್ಬ ಅಮೃತಾ ಅವರ ಫೋನ್
ಕಿತ್ತುಕೊಂಡು ಮೈಲಸಂದ್ರದ ಕಡೆಗೆ ಓಡಿ ಹೋಗಿದ್ದ. ಅಮೃತಾ ತಕ್ಷಣ ಆತನ ಹಿಂದೆ ಓಡಿ ಅವನ ಕತ್ತನ್ನು ಹಿಡಿದುಕೊಂಡಿದ್ದಳು. ಆ ವೇಳೆ ಆರೋಪಿಯು ವಿದ್ಯಾರ್ಥಿನಿಯನ್ನು ತಳ್ಳಿ ಸುಮಾರು 50 ಮೀಟರ್ ಓಡಿದ್ದು, ತಕ್ಷಣ ಅಮೃತಾ ಕಿರುಚಿಕೊಂಡಿದ್ದರು. ಇದರಿಂದ ಆತಂಕಗೊಂಡ ಆರೋಪಿಯು ಜೇಬಿನಿಂದ ಚೂರಿ ತೆಗೆದು ಅಮೃತಾ ಅವರ ಎಡ ಮುಂಗೈಗೆ ಹೊಡೆದಿದ್ದಾನೆ. ಪರಿಣಾಮ ರಕ್ತಗಾಯವಾಗಿ ವಿದ್ಯಾರ್ಥಿನಿ ಅಮೃತಾ ಆಳುತಿದ್ದಾಗ ಆರೋಪಿಯು ಅಲ್ಲೇ ಈತನನಿಗಾಗಿ ಸ್ಕೂಟರ್ ನಲ್ಲಿ ಕಾಯುತ್ತಿದ್ದ ಸಹಚರನ ಜೊತೆಗೆ ಪರಾರಿಯಾಗಿದ್ದಾನೆ. ಅಮೃತಾ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ಕೃತ್ಯ ನಡೆದ ಆಸು-ಪಾಸಿನಲ್ಲಿರುವ ಸಿಸಿ ಕ್ಯಾಮೆರಾ ಪರಿಶೀಲಿಸಿ ಆರೋಪಿಗೆ ಶೋಧ ನಡೆಸುತ್ತಿದ್ದಾರೆ. ಮೊದಲೇ ಸಂಚು ರೂಪಿಸಿ ಆರೋಪಿ ಕೃತ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎನ್ನಲಾಗುತ್ತಿದೆ.