Advertisement

Bangalore: ಡಿಸಿಪಿ ಕಚೇರಿ ಮುಂಭಾಗವೇ ಯುವತಿಗೆ ಲೈಂಗಿಕ ಕಿರುಕುಳ

11:53 AM Nov 14, 2023 | Team Udayavani |

ಬೆಂಗಳೂರು: ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಯುವತಿಯನ್ನು ಹಿಂಬಾಲಿಸಿದ ಯುವಕನೊಬ್ಬ ಆಕೆಯ ಬಟ್ಟೆ ಹಿಡಿದು ಎಳೆದಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಲೈಂಗಿಕ ಕಿರುಕುಳ ನೀಡಿರುವ ಘಟನೆ ಜಯನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

Advertisement

ನ.6ರಂದು ರಾತ್ರಿ 11ಕ್ಕೆ ಜಯನಗರದ ಸೌತ್‌ ಎಂಡ್‌ ಸರ್ಕಲ್‌ ಬಳಿಯಿರುವ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಕಚೇರಿಯ ಮುಂಭಾಗವೇ ಘಟನೆ ನಡೆದಿದೆ.

ಬನಶಂಕರಿಯ ಅಶೋಕನಗರ ನಿವಾಸಿ 26 ವರ್ಷದ ಯುವತಿ ನೀಡಿದ ದೂರಿನ ಮೇರೆಗೆ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆ ಕಾರ್ಯ ನಡೆಯುತ್ತಿದೆ. ಕೂಡ್ಲುಗೇಟ್‌ ಬಳಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಸಂತ್ರಸ್ತೆ, ನ.6ರಂದು ರಾತ್ರಿ 11 ಗಂಟೆಗೆ ಕೆಲಸ ಮುಗಿಸಿಕೊಂಡು ಕನಕಪುರ ಮುಖ್ಯ ರಸ್ತೆ ಕಡೆಯಿಂದ ಮನೆಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದರು. ಈ ವೇಳೆ ಸೌಂತ್‌ ಎಂಡ್‌ ಸರ್ಕಲ್‌ನಲ್ಲಿರುವ ದಕ್ಷಿಣ ವಿಭಾಗ ಡಿಸಿಪಿ ಕಚೇರಿ ಮುಂಭಾಗ ಹೋಗುವಾಗ ಹಿಂದಿನಿಂದ ಬೈಕ್‌ನಲ್ಲಿ ಬಂದ ಆರೋಪಿ, ಸಂತ್ರಸ್ತೆಯ ಬಟ್ಟೆ ಹಿಡಿದು ಎಳೆದಾಡಿದ್ದಾನೆ. ಆಕೆ ಪ್ರತಿರೋಧವೊಡ್ಡಿದಾಗ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಆಗ ಆಕೆ ರಕ್ಷಣೆಗಾಗಿ ಜೋರಾಗಿ ಕೂಗಿಕೊಳ್ಳುತ್ತಿದ್ದಂತೆ, ಕನಕಪುರ ಮುಖ್ಯರಸ್ತೆಯ ಸರ್ಕಲ್‌ನಲ್ಲಿ ಯುಟರ್ನ್ ತೆಗೆದುಕೊಂಡು ಪರಾರಿಯಾಗಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.

ಘಟನಾ ಸ್ಥಳದ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಆರೋಪಿಯನ್ನು ಸದ್ಯದಲ್ಲೇ ಬಂಧಿಸಲಾಗುತ್ತದೆ ಎಂದು ಪೊಲೀಸರು ಹೇಳಿದರು.

ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next