Advertisement

ಲಡಾಖ್‌ಗೆ ಕಂಚುಗೋಡು ಯುವಕನ ಬುಲೆಟ್‌ ರೈಡ್‌

09:47 PM May 18, 2019 | Team Udayavani |

ಕುಂದಾಪುರ: ವಾಹನ ಚಲಾಯಿಸುವಾಗ ಸಂಚಾರಿ ನಿಯಮ ಪಾಲಿಸಿ ಎನ್ನುವ ಜಾಗೃತಿ ಮೂಡಿಸುವ ಸಲುವಾಗಿ ಮೀನುಗಾರ ಯುವಕನೋರ್ವ ಜಮ್ಮು ಕಾಶ್ಮೀರದ ಲಡಾಖ್‌ಗೆ ಕುಂದಾಪುರದಿಂದ ತನ್ನ ಬುಲೆಟ್‌ ಬೈಕ್‌ನಲ್ಲಿ ಪ್ರಯಾಣ ಬೆಳೆಸಿದ್ದಾರೆ.

Advertisement

ಹೊಸಾಡು ಗ್ರಾಮದ ಕಂಚುಗೋಡಿನ ವೆಂಕಟೇಶ್‌ ಖಾರ್ವಿ ಅವರ ಪುತ್ರ ಅನೀಶ್‌ ಖಾರ್ವಿ(25) ಬುಧವಾರ ಕುಂದಾಪುರದಿಂದ ಪ್ರಯಾಣ ಬೆಳೆಸಿದ್ದು, ಈಗಾಗಲೇ 1800 ಕಿ.ಮೀ. ಪೂರೈಸಿದ್ದಾರೆ. ಶನಿವಾರ ರಾಜಸ್ಥಾನದ ಉದಯಪುರಕ್ಕೆ ತಲುಪಿದ್ದಾರೆ.

ಭಾರತದ ಎತ್ತರದ ಪ್ರದೇಶ ಎನ್ನುವ ಖ್ಯಾತಿ ಹೊಂದಿರುವ ಕುಂದಾಪುರದಿಂದ ಲಡಾಕ್‌ಗೆ ಹೋಗಿ ಬರಲು ಒಟ್ಟು 7,200 ಕಿ.ಮೀ. ಅಂತರವಿದ್ದು, ಅನೀಶ್‌ ಅವರು ದಿನಕ್ಕೆ ಬರೋಬ್ಬರಿ 500 ಕ್ಕೂ ಹೆಚ್ಚು ಕಿ.ಮೀ. ಪ್ರಯಾಣ ಮಾಡುತ್ತಾರೆ. ಕಳೆದ 4 ದಿನದಲ್ಲಿ 1,800 ಕಿ.ಮೀ. ಕ್ರಮಿಸಿದ್ದೇನೆ. ಒಟ್ಟು 25 ದಿನಗಳ ಪ್ರಯಾಣ ಇದಾಗಿದೆ ಎಂದವರು “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.

ಮೊದಲ ಪ್ರಯಾಣ
ಕರ್ನಾಟಕ ರಾಜ್ಯದ ಬೇರೆ ಬೇರೆ ಜಿಲ್ಲೆಗಳೆಲ್ಲ ಸುತ್ತಾಟ ನಡೆಸಿದ್ದೇನೆ. ಆದರೆ ನಮ್ಮ ರಾಜ್ಯ ಹೊರತುಪಡಿಸಿ, ಇದು ನನ್ನ ಮೊದಲ ಪ್ರಯಾಣವಾಗಿದೆ. ಕಳೆದ 6 ತಿಂಗಳಿನಿಂದ ಇದಕ್ಕಾಗಿ ಸಿದ್ಧತೆ ನಡೆಸಿದ್ದೇನೆ. ಸ್ನೇಹಿತರು ಬರುತ್ತಾರೆ ಎಂದಿದ್ದರೂ ಬಾರದ್ದರಿಂದ ನಾನೊಬ್ಬನೇ ಹೊರಟಿದ್ದೇನೆ ಎನ್ನುತ್ತಾರೆ ಅನೀಶ್‌.

ಸಂಚಾರಿ ನಿಯಮ ಪಾಲನೆ ಜಾಗೃತಿ
ರಸ್ತೆ ಅಪಘಾತದಲ್ಲಿ ಇತ್ತೀಚಿನ ದಿನಗಳಲ್ಲಿ ಸಾವೀಗೀಡಾಗುವವರ ಸಂಖ್ಯೆ ಹೆಚ್ಚುತ್ತಿದ್ದು, ಈ ಕಾರಣಕ್ಕೆ ಸಂಚಾರಿ ನಿಯಮಗಳನ್ನು ಪಾಲಿಸುವುದರ ಬಗ್ಗೆ ಹೆದ್ದಾರಿಯುದ್ದಕ್ಕೂ ಸಿಗುವ ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಪ್ರಯಾಣವನ್ನು ಹಮ್ಮಿಕೊಂಡಿದ್ದೇನೆ. ಇದಲ್ಲದೆ ಇನ್ನು ಮುಂದಿನ ದಿನಗಳಲ್ಲಿ ಬೇರೆ ಬೇರೆ ರಾಜ್ಯಗಳಿಗೆ ಸಂಚರಿಸುವ ಯೋಚನೆಯಿದೆ.
-ಅನೀಶ್‌ ಖಾರ್ವಿ, ಕಂಚುಗೋಡು

Advertisement
Advertisement

Udayavani is now on Telegram. Click here to join our channel and stay updated with the latest news.

Next