ಮೂಡುಬಿದಿರೆ: ಹದಿನೆಂಟು ಬಸದಿ, ಹದಿನೆಂಟು ದೇವಸ್ಥಾನ, ಹದಿನೆಂಟು ಕೆರೆ ಹೀಗೆ ಹದಿನೆಂಟರ ನಂಟಿನ ಊರಾದ ಮೂಡುಬಿದಿರೆಯಿಂದ ಭಾರತ ಚೀನ ಗಡಿ ತಾಣವಾದ ಲಡಾಖ್ ಗೆ ಹದಿನೆಂಟರ ಹರೆಯದ ಮಹ್ಮದ್ ಆರಿಫ್ ಸೈಕಲ್‌ನಲ್ಲಿ ಯಾನ ಕೈಗೊಂಡಿದ್ದಾರೆ.
ಕಲಿತದ್ದು ಐಟಿಐ ವೆಲ್ಡರ್ ಟ್ರೇಡ್, ಎಲೆಕ್ಟ್ರಿಕಲ್ಸ್ ಕೂಡ ಗೊತ್ತು. ಮೂಡುಬಿದಿರೆಯ ಪ್ರಾಂತ್ಯ ಗ್ರಾಮದ ಅಬೂಬಕ್ಕರ್ ಅವರ ಪುತ್ರ ಮಹ್ಮದ್ ಆರಿಫ್ ಅವರು ಅದು ಹೇಗೋ ಲಡಾಕ್‌ಗೆ ಹೋಗಿ ಬರುವ ಕನಸು ಕಂಡಿದ್ದರು. ತಾನು ಕೆಲಸ ಮಾಡುವ ಲಾಡಿ ಬಳಿಯ ಮೆಟಲ್ ಶಾಪ್‌ನ ಮಾಲಕ ನಝೀರ್ ಅವರ ಬೆಂಬಲ, ಗೆಳೆಯರು ಹಾಗೂ ಮನೆ ಮಂದಿಯ ಪ್ರೋತ್ಸಾಹದಿಂದ ಇಂಥದ್ದೊಂದು ಕನಸು ಸೋಮವಾರ ಸೈಕಲ್ ಪೆಡಲ್ ತುಳಿಯಲಾರಂಭಿಸುವ ಮೂಲಕ ನನಸಾಗತೊಡಗಿದೆ.
ದಿನಕ್ಕೆ 100 ಕಿ.ಮೀ. ಕ್ರಮಿಸುವ ಛಲವಿದೆ. ಒಟ್ಟು ಸುಮಾರು 2 ತಿಂಗಳ ಯಾನ ಎಂಬುದವರ ನಿರೀಕ್ಷೆ.!
ಸೈಕಲ್‌ನ ಮುಖದಲ್ಲಿ ಜೋಡಿಸಲಾದ ಫಲಕದಲ್ಲಿ “ಆಲ್ ಇಂಡಿಯಾ ಟ್ರಿಪ್, ಮೂಡುಬಿದಿರೆ ಟು ಲಡಾಕ್, ಕರ್ನಾಟಕ- ಕಾಶ್ಮೀರ್ ಸೂರ್ಯಚಂದ್ರ (ತೌಳವ ಸಂಕೇತ?), ಮಿಸ್ಟರ್ ರೈಡರ್ ಬೆದ್ರ ‘ ಎಂಬಿತ್ಯಾದಿ ಲೇಖಿಸಲಾಗಿದೆ. ಮೂಡುಬಿದಿರೆ – ಮುಂಬೈ-ಹೊಸದಿಲ್ಲಿ-ಲಡಾಕ್ ಇದವರ ಮಾರ್ಗಸೂಚಿ.
“ದೇವಸ್ಥಾನ, ಮಠ, ಮಂದಿರ ಮೊದಲಾದ ತಾಣಗಳಲ್ಲಿ ವಿರಾಮ; ಯಾವುದೂ ವ್ಯವಸ್ಥೆಯಾಗದಿದ್ದರೆ ಪೆಟ್ರೋಲ್ ಬಂಕ್ ಬಳಿಯೇ ಟೆಂಟ್ ಹಾಕಿ ಕೊಂಡು ವಿರಮಿಸಿ ಮರುಮುಂಜಾನೆ ಮತ್ತೆ ಯಾನ ಮುಂದುವರಿಸುತ್ತೇನೆ ಎಂದು ಮಂಗಳವಾರ ಉಡುಪಿಯಿಂದ ಹೊರಟು ಮುರುಡೇಶ್ವರದತ್ತ ಸಾಗುವ ಹಾದಿಯಲ್ಲಿ ಮೊಬೈಲ್ ಸಂಪರ್ಕಕ್ಕೆ ಸಿಕ್ಕ ಮಹ್ಮದ್ ತಿಳಿಸಿದರು.
ಸೈಕಲ್‌ನಲ್ಲಿ ಟೆಂಟ್, ಮ್ಯಾಟ್, ಅವಶ್ಯ ಉಡುಗೆ ತೊಡುಗೆಗಳಿವೆ. ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಪರವಾನಿಗೆ ಬೇಕಿಲ್ಲ ಎಂದವರು ಹೇಳಿದ್ದಾರಂತೆ.