ಮಂಗಳೂರು: ಸಾಯಲು ನೇತ್ರಾವತಿಗೆ ದಾರಿದ ವ್ಯಕ್ತಿ ಕೊನೆ ಕ್ಷಣದಲ್ಲಿ ನಡು ನೀರಿನಲ್ಲಿ ಮನಸ್ಸು ಬದಲಾಯಸಿದ ಘಟನೆ ಉಳ್ಳಾಲದಲ್ಲಿ ನಡೆದಿದೆ. ನೀರಿಗೆ ಹಾರಿದ ಬಳಿಕ ಪತ್ನಿ ಮತ್ತು ಮಗುವಿನ ನೆನಪಾಗಿ ನಿರ್ಧಾರ ಬದಲಾಯಿತು ಎನ್ನಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ನಿವಾಸಿಯಾಗಿದ್ದು, ಪ್ರಸ್ತುತ ಮಂಗಳೂರಿನ ಉರ್ವಸ್ಟೋರ್‌ನಲ್ಲಿ ವಾಸ್ತವ್ಯವಿರುವ ಗಿರೀಶ್ (32) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ.
ನದಿಗೆ ಹಾರಿ ಬಳಿಕ ಈಜುತ್ತಾ ದಡದತ್ತ ಬರುತ್ತಿದ್ದ ಇವರನ್ನು ಗಮನಿಸಿದ ಸ್ಥಳೀಯ ಕೆಲವು ಮೀನುಗಾರರು ರಕ್ಷಿಸಿದ್ದಾರೆ. ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಣಾಪಾಯ ದಿಂದ ಪಾರಾಗಿದ್ದಾರೆ.
ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಗಿರೀಶ್ ನಗರದ ಉರ್ವ ಸ್ಟೋರ್ ನಲ್ಲಿ ಎಳನೀರು ವ್ಯಾಪಾರ ಮಾಡುತ್ತಿದ್ದು, ಅವರ ಪತ್ನಿ ನಗರದ ಕೋರ್ಟ್ ನಲ್ಲಿ ಉದ್ಯೋಗಿಯಾಗಿದ್ದಾರೆ. ಉರ್ವ ಪಿಡಬ್ಲ್ಯುಡಿ ಕ್ವಾಟ್ರಸ್‌ನಲ್ಲಿ ವಾಸಿಸುತ್ತಿದ್ದರು.
ಪೊಲೀಸ್ ಗಸ್ತು ವ್ಯವಸ್ಥೆ
ನೇತ್ರಾವತಿ ನದಿಗೆ ಅಡ್ಡವಾಗಿ ಕಟ್ಟಿಸಿರುವ ಈ ಉಳ್ಳಾಲ ಸೇತುವೆಯ ಬಳಿ ಪೊಲೀಸ್ ಗಸ್ತು ಕಾರ್ಯಾಚರಣೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಮಂಗಳೂರು ನಗರ ಡಿಸಿಪಿ ಲಕ್ಷ್ಮಿಗಣೇಶ್ ಅವರು ತಿಳಿಸಿದ್ದಾರೆ.