Advertisement

ಚಿಕಿತ್ಸೆಗಾಗಿ ವೇಷ ಧರಿಸಿ ಹಣ ಸಂಗ್ರಹಕ್ಕೆ ಮುಂದಾದ ಯುವಕ

09:51 PM Feb 13, 2020 | Sriram |

ಕುಂದಾಪುರ: ಅನಾರೋಗ್ಯದಿಂದ ಬಳಲುತ್ತಿರುವ ಪುಟ್ಟ ಬಾಲೆಯ ಚಿಕಿತ್ಸೆಯ ವೆಚ್ಚಕ್ಕಾಗಿ ಲಕ್ಷಾಂತರ ರೂ. ಹಣದ ಅಗತ್ಯವಿದ್ದು, ಅದಕ್ಕಾಗಿ ವರ್ಲ್ಡ್ ಕುಂದಾಪುರಿಯನ್‌ ಹಾಗೂ ನೆರಳು ಸಂಘಟನೆಯ ಯುವಕರ ಸಹಕಾರದೊಂದಿಗೆ ಯುವಕನೊಬ್ಬ ವಿಶೇಷ ವೇಷ ಧರಿಸಿ ಫೆ. 14 ರ ಮಂದಾರ್ತಿ ಜಾತ್ರೆ, ಬಳಿಕ ಕುಂದಾಪುರ, ಕೋಟೇಶ್ವರ ಪೇಟೆಗಳಲ್ಲಿ ಹಣ ಸಂಗ್ರಹಿಸುವ ಮೂಲಕ ನೆರವಾಗಲು ಮುಂದಾಗಿದ್ದಾರೆ.

Advertisement

ತೊಂಭತ್ತು ಗ್ರಾಮದ ಹೆಂಗವಳ್ಳಿ ಮೂಡಬೆಟ್ಟಿನ ಬಾಬಣ್ಣ ಪೂಜಾರಿ ಹಾಗೂ ಗೀತಾ ಪೂಜಾರ್ತಿ ಅವರ ಪುತ್ರಿ 4 ಹರೆಯದ ತನುಶ್ರಿ “ಬೋನ್‌ ಮ್ಯಾರಿಯೋ’ ಎನ್ನುವ ಮಾರಕ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಪುಟ್ಟ ಬಾಲಕಿಯ ಚಿಕಿತ್ಸೆಗೆ ಹಣದ ಅವಶ್ಯಕತೆಯಿದೆ. ಇದನ್ನು ತಿಳಿದ ನೆರಳು ಸಂಘಟನೆಯ ಸದಸ್ಯ ಹೆಬ್ರಿಯ ವಿಜೇಂದ್ರ ಆಚಾರ್ಯ ಅವರು ವೇಷ ಹಾಕಿ, ಈ ಮಗುವಿಗೆ ಧನ ಸಹಾಯ ಮಾಡಲು ಮುಂದಾಗಿದ್ದಾರೆ.

ಫೆ. 14ರಂದು ಬೆಳಗ್ಗೆಯಿಂದ ಸಂಜೆಯವರೆಗೆ ವಿಜೇಂದ್ರ ಆಚಾರ್ಯ ಅವರು ಮಂದಾರ್ತಿ ಜಾತ್ರೆಯಲ್ಲಿ ಹಾಗೂ ಫೆ. 15ರಂದು ಕುಂದಾಪುರ, ಕೋಟೇಶ್ವರದ ಆಸುಪಾಸು ಪ್ರದೇಶಗಳಲ್ಲಿ ವಿಶೇಷ ವೇಷ ಧರಿಸಿ ಹಣ ಸಂಗ್ರಹಿಸಲಿದ್ದಾರೆ.

ವಿಜೇಂದ್ರ ಆಚಾರ್ಯ ಅವರಿಗೆ ನೆರಳು ಸಂಘಟನೆ, ವರ್ಲ್ಡ್ ಕುಂದಾಪುರಿಯನ್‌ ಯುವಕರ ತಂಡ ಸಹಕಾರ ನೀಡಿದ್ದು, ಇವರು ಕೂಡ ಧನ ಸಂಗ್ರಹಕ್ಕೆ ಕೈಜೋಡಿಸಿದ್ದಾರೆ. ವಿಜೇಂದ್ರ ಆಚಾರ್ಯ ಅವರು ಹಾಕಲಿರುವ ವೇಷಕ್ಕೆ ಸುಮಾರು 12 ಸಾವಿರ ರೂ. ಖರ್ಚಾಗಲಿದ್ದು, ಅದನ್ನು ಈ ವರ್ಲ್ಡ್ ಕುಂದಾ ಪುರಿಯನ್‌, ನೆರಳು ತಂಡದವರೇ ಭರಿಸಲಿದ್ದಾರೆ.

ಮಾರಕ ಕಾಯಿಲೆಗೆ ತುತ್ತಾಗಿ, ಚಿಕಿತ್ಸೆಗೊಳಗಾಗಿ ಹೊಸ ಬದುಕಿಗೆ ಹಂಬಲಿಸುತ್ತಿರುವ ಪುಟ್ಟ ಬಾಲೆಯ ಚಿಕಿತ್ಸೆಗೆ ಎಲ್ಲ ಒಟ್ಟಾಗಿ ಮಾನವೀಯ ನೆಲೆಯಲ್ಲಿ ಸ್ಪಂದಿಸಲು ಮುಂದಾದ ವಿಜೇಂದ್ರ ಆಚಾರ್ಯ ಅವರ ಪ್ರಯತ್ನ ಹಾಗೂ ಯುವಕರ ಶ್ರಮಕ್ಕೆ ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗಿದೆ.

Advertisement

ನೀವೂ ನೆರವಾಗಬಹುದು
ಈ ಬಾಲೆಯ ಚಿಕಿತ್ಸೆಗೆ 18ರಿಂದ 20 ಲಕ್ಷ ರೂ. ಬೇಕಾಗಬಹುದು ಎಂದು ಬೆಂಗಳೂರಿನ ನಾರಾಯಣ ಹೃದಯಾಲಯದ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಆದರೆ ಇವರದು ಬಡ ಕುಟುಂಬವಾಗಿದ್ದು, ಈ ಪುಟ್ಟ ಬಾಲೆ ತನುಶ್ರೀಗೆ ನೀವು ನೆರವಾಗಬಹುದು. ತನುಶ್ರೀ ತಂದೆ ಬಾಬಣ್ಣ ಪೂಜಾರಿ ಅವರ ಕೆನರಾ ಬ್ಯಾಂಕಿನ ವಿಳಾಸ ಹೀಗಿದೆ. ಬ್ಯಾಂಕ್‌ ಖಾತೆ ಸಂಖ್ಯೆ – 0647101057574, ಐಎಫ್‌ಸಿ ಕೋಡ್‌ – ಸಿಎನ್‌ಆರ್‌ಬಿ0000647,

ಒಳ್ಳೆಯ ಕೆಲಸ ಮಾಡುತ್ತಿರುವ ಖುಷಿ
ರವಿ ಕಟಪಾಡಿಯಂತವರು ಶ್ರೀ ಕೃಷ್ಣಾಷ್ಟಮಿ, ವಿಟ್ಲಪಿಂಡಿ ಉತ್ಸವದ ಸಂದರ್ಭದಲ್ಲಿ ವಿಭಿನ್ನ ವೇಷಗಳನ್ನು ಹಾಕಿ ಹಣ ಸಂಗ್ರಹಿಸಿ ಅಶಕ್ತರಿಗೆ ನೆರವಾಗುತ್ತದ್ದು, ನನ್ನ ಈ ಕೆಲಸಕ್ಕೆ ಅವರೇ ಪ್ರೇರಣೆ. ಇತ್ತೀಚೆಗೆ ನನ್ನ ಅಣ್ಣನ ಸ್ನೇಹಿತರೊಬ್ಬರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು, ಜೀವರ¾ಣ ಹೋರಾಟದಲ್ಲಿದ್ದಾಗ ಆತನ ಚಿಕಿತ್ಸೆಗಾಗಿ ಈ ರೀತಿ ವೇಷ ಹಾಕಿ ಹಣ ಸಂಗ್ರಹಿಸಲು ಚಿಂತಿಸಿದ್ದೆ. ಆದರೆ ದುರದೃಷ್ಟಾವಶಾತ್‌ ಅವರು ಬದುಕುಳಿಯಲಿಲ್ಲ. ಆದರೆ ಅದೇ ವೇಷವನ್ನು ತನುಶ್ರೀ ಚಿಕಿತ್ಸೆಗಾಗಿ ಹಾಕುತ್ತಿದ್ದೇನೆ. ಒಳ್ಳೆಯ ಕೆಲಸ ಮಾಡುತ್ತಿದ್ದೇನೆ ಎನ್ನುವ ಖುಷಿಯಿದೆ.
– ವಿಜೇಂದ್ರ ಆಚಾರ್ಯ,
ವೇಷ ಹಾಕಲು ಮುಂದಾದ ಯುವಕ

Advertisement

Udayavani is now on Telegram. Click here to join our channel and stay updated with the latest news.

Next