Advertisement
ಕೊಂಕಣಿ ಸಾಹಿತ್ಯ ಅಕಾಡೆಮಿ ಸದಸ್ಯ, ಕುಡುಬಿ ಜ್ಞಾನದೀಪ್ತಿ ಮಾಸ ಪತ್ರಿಕೆಯ ಸಂಪಾದಕ, ಎಲೆಕ್ಟ್ರಿಶಿಯನ್, ಆಫ್ಘಾನಿಸ್ಥಾನದ ಕಂದಹಾರ್‌ನ ಯುದ್ಧ ಭೂಮಿಯಲ್ಲಿ ಟ್ಯಾಂಕರ್ ಚಾಲಕರಾಗಿದ್ದವರು ಈಗ ಹಡಿಲು ಹೊಲದಲ್ಲಿ ಭತ್ತದ ಹೊನ್ನ ಬೆಳೆ ತೆಗೆವ ಛಲಗಾರ. ಮೂಡಬಿದಿರೆ ಶ್ರೀ ಮಹಾವೀರ ಕಾಲೇಜು ಬಳಿಯ ನೂಯಿಯಲ್ಲಿ 2 ದಶಕಗಳಿಂದ ಹಡಿಲು ಬಿದ್ದಿದ್ದ ಹೊಲಗಳನ್ನು ಮಾಲಕರಿಂದ ಪಡೆದು, ಭತ್ತ ಬೆಳೆದು ಅಬ್ಟಾ ಅನ್ನಿಸುವಂಥ ಸಾಧನೆ ಮಾಡಿ ತೋರಿದ್ದಾರೆ. 3 ಎಕ್ರೆ ಹೊಲದಲ್ಲಿ ಖರ್ಚು ಕಳೆದು ಎಕ್ರೆಗೆ 50 ಸಾವಿರ ರೂ.ಗಳಷ್ಟು ಆದಾಯ ಸಾಧ್ಯವಿದೆ ಎಂದು ತೋರಿಸಿಕೊಟ್ಟಿದ್ದಾರೆ.
ಕಳೆಗಿಡ, ಮುಳ್ಳು ಬೆಳೆದ ಭೂಮಿಯ ಕಾಯಕಲ್ಪಕ್ಕೆ ಕೃಷಿ ಇಲಾಖೆಯ “ಯಂತ್ರಧಾರೆ’ ನೆರವು ನೀಡಿತು. ಕಳೆಗಿಡ ಕೊಚ್ಚುವ ಯಂತ್ರವನ್ನು ದಿನಕ್ಕೆ 500 ರೂ. ಬಾಡಿಗೆಗೆ ತಂದು ಲಿಂಗಪ್ಪ ಅವರು ತಾನೇ ಕಳೆ ತೆಗೆದಿದ್ದರು. ಬಳಿಕ ಗಂಟೆಗೆ 480 ರೂ. ಬಾಡಿಗೆಯಲ್ಲಿ ಉಳುಮೆ ಮಾಡಿದ್ದೂ ಆಯಿತು. ಸನಿಹದ ತೋಡಿನಿಂದ ಭೂಮಿಗೆ ನೀರು ಹಾಯಿಸಿದ್ದರು. ಮೂಡಬಿದಿರೆ ರೈತ ಸಂಪರ್ಕ ಕೇಂದ್ರದಿಂದ “ಭದ್ರ’ ಭತ್ತ ಮತ್ತು “ಕಜೆ ಜಯ’ ಭತ್ತದ ಬೀಜವನ್ನು ತಂದು ಬಿತ್ತಿದ್ದರು. ಸಾವಯವ ಗೊಬ್ಬರವನ್ನೇ ಅವರು ಬಳಸಿದ್ದು, ಯಾವುದೇ ಕೀಟ ನಾಶಕವನ್ನೂ ಬಳಸಲಿಲ್ಲ.
Related Articles
ಕಟಾವಿಗೆ ಯಂತ್ರ ತಂದರೆ ಬೈಹುಲ್ಲು ಪುಡಿಯಾಗುತ್ತದೆ. ಡೀಸೆಲ್ ವಾಸನೆಯಿಂದ ಜಾನುವಾರುಗಳು ತಿನ್ನುವುದಿಲ್ಲ. ಅದಕ್ಕಾಗಿ ಕೃಷಿ ಕಾರ್ಮಿಕರನ್ನೇ ಬಳಸಿದೆ ಎಂದಿದ್ದಾರೆ. ಇವರ ಸಾಧನೆಗೆ ತಾಯಿ, ನಾಟಿ ವೈದ್ಯೆ ಕಲ್ಯಾಣಿ ಬಾಯಿ ಕೈ ಜೋಡಿಸಿದ್ದಾರೆ.
Advertisement
ಬಹುಮುಖೀ ಸಾಧಕಲಿಂಗಪ್ಪ ಗೌಡ ಹೋರಾಟಮಯ ಬದುಕಿನ ವ್ಯಕ್ತಿ. ತನ್ನೂರಿನಲ್ಲಿ ಈ ಹಿಂದೆ ಆಗುತ್ತಿದ್ದ ಅಕ್ರಮಗಳನ್ನು ಬಹಿರಂಗಗೊಳಿಸುತ್ತ ಗ್ರಾಮಸಭೆಗಳನ್ನು “ಗರಂ ಸಭೆ’ಗಳನ್ನಾಗಿಸುತ್ತಿದ್ದರು. ಕುಡುಬಿ ಜನಾಂಗದ ಒಳಿತಿಗಾಗಿ ಶ್ರಮಿಸುತ್ತಿರುವ ಅವರೀಗ ಕೊಂಕಣಿ ಸಾಹಿತ್ಯ ಅಕಾಡೆಮಿ ಹಾಗೂ ಮಾಂಡ್ ಸೋಭಾಣ್ ಸದಸ್ಯರಾಗಿದ್ದಾರೆ. “ಕುಡುಬಿ ಜ್ಞಾನದೀಪ್ತಿ’ ಮಾಸಪತ್ರಿಕೆಯನ್ನೂ ಸಂಪಾದಿಸಿ, ಪ್ರಕಟಿಸುತ್ತಿದ್ದಾರೆ. ಎಲೆಕ್ಟ್ರಿಕಲ್, ಪ್ಲಂಬಿಂಗ್, ನೀರಾವರಿ ಮುಂತಾದ ತಾಂತ್ರಿಕ ಕೆಲಸ ಬಲ್ಲ ಲಿಂಗಪ್ಪ ಗೌಡರು ಅಫ್ಘಾನಿಸ್ಥಾನದ ಕಂದಹಾರ್‌ನ ಯುದ್ಧಭೂಮಿಯಲ್ಲಿ ಟ್ಯಾಂಕರ್ ಚಾಲಕರಾಗಿಯೂ ಕೆಲಸ ಮಾಡಿದ್ದರು. ಕೆಲ ತಿಂಗಳ ಹಿಂದಷ್ಟೇ ಅವರಿಗೆ ಸಿಂಗಾಪುರದಲ್ಲಿ ನೌಕರಿಯ ಆಫರ್ ಬಂದಿತ್ತು. ಆದರೂ ನೂಯಿಯ ಹೊನ್ನಿನ ಭತ್ತದ ಬೆಳೆ ಅವರನ್ನು ಸದ್ಯ ಇಲ್ಲೇ ಇರುವಂತೆ ಮಾಡಿದೆ! 1.50 ಲಕ್ಷ ರೂ. ಲಾಭ!
ಭತ್ತದ ಕೃಷಿಯಿಂದ ಸುಮಾರು 80-85 ಮುಡಿ ಅಕ್ಕಿ ಸಂಗ್ರಹವಾಗಿದೆ. ಇದರ ಮೌಲ್ಯ ಸುಮಾರು 1.35 ಲಕ್ಷ ರೂ. ಇದೆ. ಇದರೊಂದಿಗೆ ಸೂಡಿ ಬೈಹುಲ್ಲಿಂದ 12 ಸಾವಿರ ರೂ. ಆದಾಯ ನಿರೀಕ್ಷೆ ಇದೆ. ಒಟ್ಟಾರೆ 1.70 ಲಕ್ಷ ಆದಾಯದ ಲೆಕ್ಕಾಚಾರವಿದೆ. ಖರ್ಚು ಕಳೆದು 1.50 ಲಕ್ಷ ರೂ. ಕೈ ಸೇರಬಹುದು ಎಂದು ಲಿಂಗಪ್ಪ ಅವರು ಹೇಳುತ್ತಾರೆ. ಧನಂಜಯ ಮೂಡಬಿದಿರೆ