ಬೆಂಗಳೂರು: ಕ್ಯಾಂಪಸ್ ಸೆಲೆಕ್ಷನ್‌ನಲ್ಲಿ ಆಯ್ಕೆ ಆಗದಕ್ಕೆ ಬೇಸರ ಗೊಂಡಿದ್ದ ಬಿ.ಕಾಂ ವಿದ್ಯಾರ್ಥಿಯೊಬ್ಬ ಬನ್ನೇರುಘಟ್ಟ ರಸ್ತೆಯಲ್ಲಿರುವ ವೆಗಾಸಿಟಿ ಮಾಲ್‌ನ 4ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಜೆ.ಪಿ.ನಗರ ನಿವಾಸಿ ಸುಹಾಸ್ ಅಡಿಗ (21) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.
ಶುಕ್ರವಾರ ಮಧ್ಯಾಹ್ನ 2.30ರ ಸುಮಾರಿಗೆ ದುರ್ಘಟನೆ ನಡೆದಿದ್ದು, ಮೈಕೋ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಖಾಸಗಿ ಟೆಕ್ಸ್‌ಟೈಲ್ಸ್‌ನಲ್ಲಿ ಮ್ಯಾನೇಜರ್ ಆಗಿರುವ ಸುಹಾಸ್ ಅಡಿಗ ಅವರ ತಂದೆ ವಾಸುದೇವ ಅಡಿಗ, ಕುಟುಂಬ ಸಮೇತ ಜೆ.ಪಿ.ನಗರದಲ್ಲಿ ವಾಸವಾಗಿದ್ದಾರೆ. ಸುಹಾಸ್ ಅಡಿಗ ನಗರದ ಖಾಸಗಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಕಾಂ ಪದವಿ ವ್ಯಾಸಂಗ ಮಾಡುತ್ತಿದ್ದ. ಕೆಲ ತಿಂಗಳ ಹಿಂದೆ ಕಾಲೇಜಿನಲ್ಲಿ ಕ್ಯಾಂಪಸ್ ಸೆಲೆಕ್ಷನ್ ಇತ್ತು. ಅದರಲ್ಲಿ ಸುಭಾಷ್ ಆಯ್ಕೆ ಆಗಿರಲಿಲ್ಲ. “ನಾನು ಉತ್ತಮ ವ್ಯಾಸಂಗ ಮತ್ತು ಅಂಕ ಪಡೆದಿದ್ದರೂ ಕ್ಯಾಂಪಸ್ ಸೆಲೆ ಕ್ಷನ್‌ನಲ್ಲಿ ಆಯ್ಕೆ ಆಗಲಿಲ್ಲ’ ಎಂಬ ವಿಚಾರಕ್ಕೆ 2-3 ತಿಂಗಳಿಂದ ಬೇಸರ ಮಾಡಿಕೊಂಡಿದ್ದ. ಮನೆಯಲ್ಲಿ ಯಾರೊಂದಿಗೂ ಹೆಚ್ಚು ಬೆರೆಯುತ್ತಿರಲಿಲ್ಲ ಎಂದು ಆತನ ಪೋಷಕರು ಮಾಹಿತಿ ನೀಡಿರುವುದಾಗಿ ಪೊಲೀಸರು ತಿಳಿಸಿದರು.
ಸ್ನೇಹಿತನಿಗೆ ಹೇಳಿದ್ದ ಸುಹಾಸ್ ಅಡಿಗ: ಶುಕ್ರವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಸ್ನೇಹಿತನೊಬ್ಬನಿಗೆ ಕರೆ ಮಾಡಿದ್ದ ಸುಭಾಷ್ ಅಡಿಗ, “ಕ್ಯಾಂಪಸ್ ಆಯ್ಕೆ ಆಗದಿರುವುದಕ್ಕೆ ಬಹಳ ಬೇಸರವಾಗಿದೆ. ನಾನು ಇರುವುದಿಲ್ಲ’ ಎಂದು ಹೇಳಿಕೊಂಡಿದ್ದ. ಆ ನಂತರ ಬನ್ನೇರುಘಟ್ಟ ರಸ್ತೆಯಲ್ಲಿರುವ ವೆಗಾಸಿಟಿ ಮಾಲ್‌ಗೆ ಮಧ್ಯಾಹ್ನ ಬೈಕ್ ನಲ್ಲಿ ಒಬ್ಬನೇ ಬಂದು, ಒಳ ಹೋಗಿದ್ದಾನೆ. ಬಳಿಕ 4ನೇ ಮಹಡಿಗೆ ಹೋಗಿ ಹೆಲ್ಮೆಟ್ ಇಟ್ಟು, ಚಪ್ಪಲಿ ಬಿಟ್ಟು ಮಾಲ್‌ನ ಮಧ್ಯ ಬಿದ್ದಿದ್ದರಿಂದ ತಲೆಗೆ ಪೆಟ್ಟಾಗಿ, ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕೂಡಲೇ ಮಾಲ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು, ಮೃತದೇಹವನ್ನು ಮರಣೋ ತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಘಟನಾ ಸ್ಥಳದ ಸಿಸಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ. ಜತೆಗೆ ಪ್ರತ್ಯಕ್ಷದರ್ಶಿಗಳ ಹೇಳಿಕೆ ಕೂಡ ಪಡೆಯಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದರು.