ಯಳಂದೂರು: ವ್ಯವಸಾಯದಲ್ಲಿ ಏನು ಆದಾಯ ಇಲ್ಲ, ಬರೀ ಲಾಸು ಎಂದು ಮೂಗು ಮುರಿಯುವವರಿಗೆ ತಾಲೂಕಿನ ಮದ್ದೂರು ಗ್ರಾಮದ ಯುವ ರೈತ ವಿಶ್ವ ಮಾದರಿಯಾಗಿದ್ದಾನೆ.
ವಿಶ್ವನಿಗೆ 6 ಎಕರೆ ಕೃಷಿ ಭೂಮಿ ಇದೆ. ಇದರಲ್ಲಿ ಅರ್ಧ ಎಕರೆ ಕಾಫಿ, 2.2 ಎಕರೆಯಲ್ಲಿ ಕಬ್ಬು, 20 ಗುಂಟೆಯಲ್ಲಿ ಬದನೆಕಾಯಿ, 2.20 ಎಕರೆಯಲ್ಲಿ ಕೋಳಿ, ಜೇನು ಸಾಕಾಣಿಕೆ ಮಾಡುವ ಮೂಲಕ ಸಮಗ್ರ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಎಲ್ಲಾ ತರಹದ ಬೆಳೆಗಳನ್ನು ಬೆಳೆಯುವ ಮೂಲಕ ಲಕ್ಷಾಂತರ ರೂ. ಆದಾಯ ಗಳಿಸುತ್ತಿದ್ದಾರೆ.
ಬಯಲು ಪ್ರದೇಶದಲ್ಲೂ ಕಾಫಿ ಬೆಳೆದ ರೈತ: ಕೊಡಗಿನಂತಹ ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಬೆಳೆಯಬಹುದಾದ ಕಾಫಿಯನ್ನು ಬಯಲು ಸೀಮೆಯಲ್ಲಿ ಬೆಳೆದಿರುವ ರೈತ ವಿಶ್ವ, ಇದರಲ್ಲೂ ಲಾಭ ಪಡೆಯುವ ಮೂಲಕ ಹೊಸ ಪ್ರಯೋಗಕ್ಕೆ ಮುನ್ನುಡಿ ಬರೆದು, ಯಶಸ್ಸು ಕಂಡಿದ್ದಾರೆ. ಇವರು ಒಟ್ಟು 20 ಗುಂಟೆ ಪ್ರದೇಶದಲ್ಲಿ ಕಾಫಿ ಬೆಳೆ ಬೆಳೆಯುತ್ತಿದ್ದಾರೆ. 900ಕ್ಕೂ ಹೆಚ್ಚು ಕಾಫಿ ಸಸಿಯನ್ನು 4 ವರ್ಷ ಹಿಂದೆ ನಾಟಿ ಮಾಡಿದ್ದರು. ಆರಂಭದಲ್ಲಿ ಬೆಳೆ ಬರುತ್ತದೆಯೇ ಇಲ್ಲವೋ ಎಂಬ ಆತಂಕ ಉಂಟಾಗಿತ್ತು. ಸದಸ್ಯ ಕಾಫಿ ಗಿಡಗಳು ಚೆನ್ನಾಗಿ ಬೆಳೆಯುತ್ತಿದ್ದು, ರೋಗಬಾಧೆಯಿಂದ ಮುಕ್ತವಾಗಿವೆ.
ಸದ್ಯಕ್ಕೆ ವರ್ಷಕ್ಕೆ 500 ಕಿಲೋಗೂ ಹೆಚ್ಚು ಕಾಫಿ ಬೀಜ ಬೆಳೆಯಲಾಗುತ್ತಿದೆ. ಜತೆಗೆ ಕಾಫಿ ಗಿಡಗಳ ಸುತ್ತಲೂ ತೆಂಗು, ಮಾವಿನ ಮರ, ಜೇನು ಸಾಕಾಣಿಕೆ ಮಾಡಲಾಗುತ್ತಿದೆ. ಈ ವಿಧಾನದ ಮೂಲಕ ಜೇನಿನ ಮೂಲಕ ಪರಾಗಸ್ಪರ್ಶ ಕ್ರಿಯೆ ಹೆಚ್ಚಾಗಿ ಕಾಫಿ, ಮಾವು, ತೆಂಗುಗಳ ಮೂಲಕ ಹೆಚ್ಚು ಲಾಭ ಪಡೆಯುತ್ತಿದ್ದಾರೆ.
ಕೋಳಿ ಸಾಕಾಣಿಕೆಯಲ್ಲೂ ಯಶಸ್ಸು: ಉತ್ತಮವಾದ ಜಾಗದಲ್ಲಿ ಕೋಳಿ ಶೆಡ್ ನಿರ್ಮಿಸಿ, ಅದಕ್ಕೆ ವಿದ್ಯುತ್, ನೀರಿನ ವ್ಯವಸ್ಥೆ ಮಾಡಿರುವ ರೈತ, ಕಿಲೋ ಕೋಳಿಗೆ ಖರ್ಚು ಕಳೆದು 12 ರೂ. ಲಾಭ ಗಳಿಸುತ್ತಿದ್ದಾರೆ. ಇವರ ಬಳಿ 5000 ಸಾವಿರ ಕೋಳಿ ಇದ್ದು, 1 ಲಕ್ಷ ರೂ. ಅಧಿಕ ಆದಾಯ ಬರುತ್ತದೆ.
ಕೃಷಿ ಲಾಭದಾಯಕವಾಗಿದೆ. ಆದರೆ, ಇದಕ್ಕೆ ವೈಜ್ಞಾನಿಕ ಕ್ರಮಗಳನ್ನು ಅನುಸರಿಸಬೇಕು, ಸಮಗ್ರ ಕೃಷಿ ಮಾಡಿದ್ದಲ್ಲಿ ಹೆಚ್ಚಿನ ಆದಾಯ ಪಡೆದುಕೊಳ್ಳಬಹುದು. ಶ್ರಮದೊಂದಿಗೆ ತಾಂತ್ರಿಕ ಅಂಶಗಳನ್ನು ಕೃಷಿಯಲ್ಲಿ ಅಳವಡಿಸಿ ಕೊಂಡಿದ್ದೇ ಆದಲ್ಲಿ ಉತ್ತಮ ಆದಾಯ ನಿರೀಕ್ಷೆ ಮಾಡಬಹುದು.
– ವಿಶ್ವ, ಯುವ ರೈತ, ಮದ್ದೂರು.