ಅಫಜಲಪುರ: ಒಂದು ಕಾಲದಲ್ಲಿ ಭೀಮಾತೀರ ಎಂದಾಕ್ಷಣ ಹಂತಕರ ನಾಡು ಎಂದು ಕುಖ್ಯಾತವಾಗಿತ್ತು. ಆದರೆ ಈಗ ಇದು ಹಂತಕರ ನಾಡಲ್ಲ, ಚಿಂತಕರ ಚಾವಡಿಯಾಗಿದೆ ಎಂದು ಯುವ ಬ್ರಿಗೇಡ್ ಮಾರ್ಗದರ್ಶಕ ಸೂಲಿಬೆಲೆ ಚಕ್ರವರ್ತಿ ಹೇಳಿದರು.
ತಾಲೂಕಿನ ಘತ್ತರಗಿಯಲ್ಲಿ ಯುವ ಬ್ರಿಗೇಡ್ ವತಿಯಿಂದ ಹಮ್ಮಿಕೊಂಡಿದ್ದ ಭೀಮಾ ನದಿ ಸ್ವತ್ಛತಾ ಕಾರ್ಯಕ್ರಮದಲ್ಲಿ ನದಿ ಸ್ವತ್ಛಗೊಳಿಸಿ ಮಾತನಾಡಿದ ಅವರು, ಭೀಮಾ ತೀರ ಇನ್ನು ಮುಂದೆ ಯುವ ಪೀಳಿಗೆಗಳ ಉಜ್ವಲ ಭವಿಷ್ಯಕ್ಕೆ ನಾಂದಿಯಾಗಲಿದೆ. ಭೀಮಾ ತೀರದ ಹಂತಕರು ಎಂಬ ಹಣೆಪಟ್ಟಿ ಕಳಚಿ ಹೊಸ ಭಾಷ್ಯ ಬರೆಯಲಿದೆ. ಈ ನಿಟ್ಟಿನಲ್ಲಿ ಯುವ ಬ್ರಿಗೇಡ್‌ನ ಯುವಕರು ಪಣ ತೊಟ್ಟಿದ್ದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.
ಬ್ರಿಗೇಡ್ ಯುವಕರೊಂದಿಗೆ ಗ್ರಾಮಸ್ಥರು, ದೇವಸ್ಥಾನದ ಆಡಳಿತ ಮಂಡಳಿ ಕೈಜೋಡಿಸಿದ್ದು ಶ್ಲಾಘನೀಯವಾಗಿದೆ. ಘತ್ತರಗಿ ಪುಣ್ಯ ಕ್ಷೇತ್ರ ಸ್ವತ್ಛಗೊಂಡ ಹಾಗೆ ತಾಲೂಕಿನ ಉಳಿದ ಪುಣ್ಯಕ್ಷೇತ್ರಗಳಲ್ಲೂ ನದಿ ಸ್ವಚ್ಚವಾಗಬೇಕು ಎಂದು ಹೇಳಿದರು. ಭೀಮಾ ತೀರದ ರಕ್ಷಕರು ಎನ್ನುವ ಹಣೆಪಟ್ಟಿಯೊಂದಿಗೆ ಸುಮಾರು 600 ಜನ ಕಾರ್ಯಕರ್ತರು ನದಿ ಸ್ವತ್ಛತೆಯಲ್ಲಿ ಪಾಲ್ಗೊಂಡಿದ್ದರು.
ಭೀಮಾ ನದಿ ಸ್ವತ್ಛತೆಗಾಗಿ ರಾಜ್ಯದ ಬೆಂಗಳೂರು, ಬೆಳಗಾವಿ, ಮೈಸೂರು, ಮಂಗಳೂರು, ವಿಜಯಪುರ, ಗದಗ, ಬೀದರ, ಯಾದಗಿರಿ, ಚಾಮರಾಜನಗರ, ಶಿವಮೊಗ್ಗ, ದಕ್ಷಿಣ ಕನ್ನಡ, ರಾಯಚೂರು ಜಿಲ್ಲೆಗಳಿಂದ ಬ್ರಿಗೇಡ್ ಕಾರ್ಯಕರ್ತರು
ಆಗಮಿಸಿದ್ದರು.
ಬ್ರಿಗೇಡ್ ರಾಜ್ಯ ಸಂಚಾಲಕ ಚಂದ್ರಶೇಖರ, ವಿಭಾಗ ಸಂಚಾಲಕ ಶ್ರೀನಿವಾಸ ಮೂರ್ತಿ, ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ, ತಾಲೂಕು ಬ್ರಿಗೇಡ್‌ನ ಸುನೀಲ ದೇಸಾಯಿ, ಸಂಜು ಭಾವಿಕಟ್ಟಿ, ರಾಹುಲ್ ಸುತಾರ, ಅನೀಲ ದೇಸಾಯಿ, ಶರಣು ಬಶೆಟ್ಟಿ, ಸುನೀಲ ಶೆಟ್ಟಿ, ಭಾಗ್ಯವಂತಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಕೆ.ಜಿ ಬಿರಾದಾರ ಹಾಗೂ ದೇವಸ್ಥಾನದ ಸಿಬ್ಬಂದಿ, ಗ್ರಾಮಸ್ಥರು ಪಾಲ್ಗೊಂಡಿದ್ದರು.