Advertisement

ಸ್ವ-ಪ್ರತಿಭೆಯಲ್ಲಿ ಬೆಳೆದ ಲೇಖಕಿ

10:00 AM Dec 02, 2019 | mahesh |

ಹಿರಿಯ ಲೇಖಕಿ ವೈದೇಹಿಯವರ 75ರ ಸಂಭ್ರಮವನ್ನು ಗೌರವಗ್ರಂಥವನ್ನು ಸಮರ್ಪಿಸುವುದರ ಮೂಲಕ ಆಚರಿಸಲಾಗುತ್ತಿದೆ. ಇಂದು ಶಿವಮೊಗ್ಗದಲ್ಲಿ “ಇರುವಂತಿಗೆ’ ಗೌರವಗ್ರಂಥ ಸಮರ್ಪಣೆ.

Advertisement

1945ರಲ್ಲಿ. ವೈದೇಹಿ ನನಗಿಂತ ಹತ್ತು ದಿನ ದೊಡ್ಡಾಕೆ. ನನ್ನ ಮೊದಲ ಕಥಾಸಂಕಲನ ಪ್ರಕಟವಾದ (ಅರವತ್ತರ ದಶಕದ ಪ್ರಾರಂಭದಲ್ಲಿ) ಹಲವಾರು ವರ್ಷಗಳ ನಂತರ ಆಕೆ ಬರೆಯಲು ತೊಡಗಿದರು. ಲಂಕೇಶ್‌ಪತ್ರಿಕೆಯ ಮೂಲಕವೇ ಎಲ್ಲರಂತೆ ನನಗೂ ಆಕೆ ಪರಿಚಯವಾದದ್ದು. ತುಂಬ ಶ್ರದ್ಧೆ-ಉತ್ಸಾಹ-ಲವಲವಿಕೆಯಿಂದ ಬರೆಯತೊಡಗಿದ ವೈದೇಹಿ ಲೇಖಕಿಯಾಗಿ ಮಾಗುತ್ತಲೇ ಸಾಗಿದರು. ಅನೇಕ ಸಂದರ್ಭಗಳಲ್ಲಿ ಆಕೆ ಹೇಳಿದ್ದಾರೆ. “ನಮಗೆಲ್ಲ ಪ್ರಾರಂಭದಲ್ಲಿ ಮೈ ಚಳಿ ಬಿಟ್ಟು ಬರೆಯತೊಡಗಲು ವೀಣಾ ಅವರೇ ಪ್ರೇರಣೆ’- ಅಂತ. ಇರಬಹುದು. ಆದರೆ, ವೈದೇಹಿ ಸ್ವಂತದ ಪ್ರತಿಭೆಯಿಂದ, ಅನುಭವದ ಪಕ್ವತೆಯಿಂದ, ತಮ್ಮದೇ ಆದ ಅನನ್ಯ ಅಭಿವ್ಯಕ್ತಿ ವಿಧಾನದಿಂದ, ಬಹಳ ಮುಂದೆ ಹೋದರು. ಒಬ್ಬ ಸಂಪ್ರದಾಯಸ್ಥ ಕುಟುಂಬದ, ಸಾಮಾನ್ಯ ಶೈಕ್ಷಣಿಕ ಹಿನ್ನೆಲೆಯ, ಸೀಮಿತ ಅವಕಾಶಗಳ ವಾತಾವರಣದಲ್ಲಿ ಬೆಳೆದ ಕನ್ನಡ ಮಹಿಳೆ ಸಾಹಿತ್ಯಲೋಕದಲ್ಲಿ ಇಷ್ಟೊಂದು ಗಮನಾರ್ಹ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದು ನಿಜವಾಗಿಯೂ ಸ್ತುತ್ಯರ್ಹ.

ವೈಯಕ್ತಿಕವಾಗಿ ನಾವಿಬ್ಬರೂ ಎಂದಿನಿಂದಲೂ ಗೆಳತಿಯರು. ಒಟ್ಟಾಗಿ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇವೆ. ಒಟ್ಟಾಗಿ ಅಮೆರಿಕದವರೆಗೂ ಹೋಗಿ ಸಾಹಿತ್ಯರಂಗ ಸಮಾರಂಭದಲ್ಲಿ ಪಾಲುಗೊಂಡಿದ್ದೇವೆ. ಫೋನಿನಲ್ಲಿ ಯಾವಾಗಲೂ ಹರಟೆ ಹೊಡೆಯುತ್ತೇವೆ. ನಮ್ಮಿಬ್ಬರ ಮನೆಗಳು ಅಕ್ಕಪಕ್ಕದಲ್ಲೇ ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಅಂದುಕೊಂಡಿದ್ದೇವೆ. ನಮಗೆ ಬಹಳಷ್ಟು Common ಅಭಿರುಚಿಗಳಿವೆ. ತುಂಬ ಸಂವೇದನಾಶೀಲೆಯಾದ, ಭಾವಜೀವಿಯಾದ ವೈದೇಹಿ ಪ್ರಸಂಗ ಬಂದಾಗ ನಿಷ್ಠುರಿಯೂ ಆಗಬಲ್ಲರು. ಹಾಗೆ ಆಕೆ ಆಂತರ್ಯದಲ್ಲಿ ಬಹಳ ಜಾಣೆ ಹೆಣ್ಣುಮಗಳು. ಆಕೆಯ ಗೆಳೆತನ ನನಗೆ ಬಹಳ ಅಮೂಲ್ಯವಾದದ್ದು.

ವೈದೇಹಿ ಬದುಕು-ಬರಹ ಕುರಿತಾದ ಪುನರಾವಲೋಕನ ರೂಪದ ಕೃತಿಯನ್ನು ಹೊರತರುತ್ತಿರುವುದು ಅರ್ಥಪೂರ್ಣ.

ವೀಣಾ ಶಾಂತೇಶ್ವರ

Advertisement
Advertisement

Udayavani is now on Telegram. Click here to join our channel and stay updated with the latest news.

Next