ತೀರ್ಥಹಳ್ಳಿ: ಎಳ್ಳಮಾವಾಸ್ಯೆ ಜಾತ್ರೆಯ ಕೊನೆಯ ದಿನವಾದ ಶುಕ್ರವಾರ ಸಂಜೆ ವೈಭವದ ತೆಪ್ಪೋತ್ಸವ ನಡೆಯಿತು. ಉತ್ಸವದ ಅಂಗವಾಗಿ ತುಂಗಾನದಿಯ ಎರಡೂ ಬದಿಯ ದಡದಲ್ಲಿ ಬೆಳಕಿನ ಬಣ್ಣದ ಲೋಕವೇ ಸೃಷ್ಟಿಯಾಗಿತ್ತು.
ಸುಣ್ಣ ಬಣ್ಣಗಳಿಂದ ಕೂಡಿದ ಕುರುವಳ್ಳಿ ಜಯಚಾಮರಾಜೇಂದ್ರ ಕಮಾನು ಸೇತುವೆಗೆ ಮಾಡಿದ್ದ ಬಣ್ಣದ ಬೆಳಕಿನ ಅಲಂಕಾರ ನೋಡುಗರ ಮನಸ್ಸನ್ನು ಸೂರೆಗೊಂಡಿತು.ಬೆಳಕಿನ ರಂಗೋಲಿಯಲ್ಲಿ ತುಂಗಾನದಿ ತೇಲಾಡಿದಂತಿತ್ತು.
ಇದನ್ನೂ ಓದಿ:ಸ್ವಚ್ಛತಾ ಕಾರ್ಯಕ್ಕೆ ಸಹಕರಿಸಲು ಮನವಿ
ಶ್ರೀ ರಾಮೇಶ್ವರ ಉತ್ಸವ ದೇವರ ಮೂರ್ತಿಗೆ ವಿಶೇಷ ಪೂಜೆ ಮಾಡಿ ನಂತರ ತುಂಗಾ ತೀರಕ್ಕೆ ತಂದು ಬಣ್ಣ- ಬಣ್ಣದಿಂದ ಕೂಡಿದ ತೆಪ್ಪದಲ್ಲಿರಿಸಿ ಪೂಜೆ ಸಲ್ಲಿಸಲಾಯಿತು. ನಂತರ ನದಿಯಲ್ಲಿ ಒಂದು ಸುತ್ತು ಬರಲಾಯಿತು. ಬಣ್ಣ ಬಣ್ಣದ ಪಟಾಕಿ, ಬಾಣ- ಬಿರುಸಿನ ಬೆಳಕಿನ ಚಿತ್ತಾರ ತೆಪ್ಪೋತ್ಸವಕ್ಕೆ ಮೆರುಗು ತಂದಿತ್ತು.
ಈ ಬಾರಿ ವಿಶೇಷವಾಗಿ ಜಾನಪದಕ್ಕೆ ಒತ್ತು ನೀಡಿ ತುಂಗೆಯ ದಡದಲ್ಲಿ ಜನಪರ ಉತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಉತ್ಸವ ಉದ್ಘಾಟಿಸಿದರು. ತಹಶೀಲ್ದಾರ್ ಡಾ| ಶ್ರೀಪಾದ್, ಸೊಪ್ಪುಗುಡ್ಡೆ ರಾಘವೇಂದ್ರ, ದೇವಸ್ಥಾನದ ಸಮಿತಿಯವರು ಸೇರಿದಂತೆ ಈ ಕಾರ್ಯಕ್ರಮದಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.