Advertisement
ರಷ್ಯಾದ ಸೂಯೆಝ್ ಅಂತರಿಕ್ಷ ನೌಕೆ, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಗಗನಯಾತ್ರಿಗಳನ್ನು ಪಿಕಪ್ ಮಾಡುವ, ಡ್ರಾಪ್ ಮಾಡುವ ಕೆಲಸದಲ್ಲಿ ನಿರತವಾಗಿದೆ. 2011ರ ತನಕ ಅಮೆರಿಕದ ನೌಕೆಯೂ ಸೂಯೆಝ್ಗೆ ಸಾಥ್ ನೀಡುತ್ತಿತ್ತು. ಅದು ಕೆಟ್ಟ ನಂತರ ರಷ್ಯಾದ ಗಗನಯಾತ್ರಿಗಳನ್ನು ಮಾತ್ರವಲ್ಲದೆ ಇತರೆ ದೇಶಗಳ ಗಗನಯಾತ್ರಿಗಳೂ ಸೂಯೆಝ್ ನೌಕೆಯ ಸೇವೆಯನ್ನು ಬಳಸಿಕೊಳ್ಳುತ್ತಿದ್ದರು. ಇತ್ತೀಚಿಗೆ ಇದೇ ಸೂಯೆಝ್ ನೌಕೆಗೆ ಹೊಸ ಅತಿಥಿ ಪ್ರಯಾಣಿಕ ಬಂದಿದ್ದ. ಭೂಮಿಯಿಂದ ಅವನನ್ನು ಏಕಾಂಗಿಯಾಗಿ ಕಳಿಸಲಾಗಿತ್ತು. ಅಷ್ಟು ದೂರದಿಂದ ಒಬ್ಬನೇ ಬಂದಿದ್ದರೂ ಅವನಿಗೆ ಬೋರ್ ಆಗಿರಲಿಲ್ಲ. ಅಷ್ಟು ಮಾತ್ರವೇಕೆ, ಹಸಿವು- ಬಾಯಾರಿಕೆಗಳೂ ಆಗಿರಲಿಲ್ಲ. ಅವನೆಂಥಾ ಮನುಷ್ಯ ಎಂದು ನಿಮಗನ್ನಿಸಿದ್ದರೆ ನಿಮ್ಮ ಅನುಮಾನ ನಿಜ. ಈ ಪ್ರಯಾಣಿಕ ಮನುಷ್ಯನಲ್ಲ, ಯಂತ್ರ ಮಾನವ. ಆತನ ಹೆಸರು ಫೆಡೋರ್.
Related Articles
ಅಂತರಿಕ್ಷಕ್ಕೆ ಕಳುಹಿಸಲ್ಪಟ್ಟ ರೋಬಾಟ್‌ಗಳಲ್ಲಿ ಫೆಡೋರ್ ಮೊದಲಿಗನೇನಲ್ಲ. ಈ ಹಿಂದೆ ಅಮೆರಿಕ, ಯುರೋಪ್ ಕೂಡಾ ರೋಬಾಟ್‌ಗಳನ್ನು ಕಳಿಸಿತ್ತು. ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ “ರೋಬೋನಾಟ್’ ಎಂಬ ರೋಬಾಟ್ ಕಳಿಸಿತ್ತು. ತನ್ನ ದೇಶದ ಗಗನಯಾತ್ರಿಗಳ ದಿನನಿತ್ಯದ ಕೆಲಸಗಳಿಗೆ ಸಹಾಯ ಮಾಡುವುದು ಅದರ ಕೆಲಸವಾಗಿತ್ತು. ಅಲ್ಲದೆ ಆ್ಯಸ್ಟ್ರೋ ಬೀಸ್ ಎಂಬ ರೋಬಾಟ್‌ಅನ್ನು ಅಮೆರಿಕ ಈ ಹಿಂದೆ ಅಂತರಿಕ್ಷಕ್ಕೆ ಕಳಿಸಿತ್ತು. ಅದರ ಕೆಲಸ ರಿಪೇರಿ ಮಾಡುವಾಗ ನಟ್ಟು ಬೋಲ್ಟಾಗಳು ಮತ್ತಿತರ ಚಿಕ್ಕಪುಟ್ಟ ಸಲಕರಣೆಗಳು, ಬಿಡಿಭಾಗಗಳು ಕಳೆದು ಹೋಗದಂತೆ ನೋಡಿಕೊಳ್ಳುವುದು. ಅದರ ಜೊತೆಗೆ ಗಗನನೌಕೆಯಲ್ಲಿ ಇಂಗಾಲ ಆಮ್ಲದ ಪ್ರಮಾಣ ಎಷ್ಟಿದೆ ಎಂದು ಸೂಚಿಸುವುದನ್ನೂ ಅದು ಮಾಡುತ್ತಿತ್ತು.
Advertisement
ಹರ್ಷವರ್ಧನ್ ಸುಳ್ಯ