ಕುಂದಾಪುರ: ಹಂತ- ಹಂತವಾಗಿ ಲಾಕ್‌ಡೌನ್ ಸಡಿಲಿಕೆಯಾಗು ತ್ತಿದ್ದರೂ ಕೂಡ ಈಗಾಗಲೇ ಕೋವಿಡ್-19 ಭೀತಿಯಿಂದಾಗಿ ಹೊರ ರಾಜ್ಯದ ಹಾಗೂ ಹೊರ ಜಿಲ್ಲೆಗಳ ಕಾರ್ಮಿಕರು ತಮ್ಮ – ತಮ್ಮ ಊರಿಗೆ ಮರಳಿದ್ದರಿಂದಾಗಿ ರಸ್ತೆ, ಕಟ್ಟಡ ಸೇರಿದಂತೆ ಅಭಿವೃದ್ಧಿ ಕಾಮಗಾರಿಗೆ ಅಡ್ಡಿಯಾಗಿದೆ. ಇನ್ನೂ ಕೂಡ ಕುಂದಾಪುರ, ಬೈಂದೂರು ಭಾಗದ ಬಹುತೇಕ ಅಭಿವೃದ್ಧಿ ಕಾಮಗಾರಿಯೂ ಸರಿಯಾದ ರೀತಿಯಲ್ಲಿ ವೇಗ ಪಡೆದುಕೊಂಡಿಲ್ಲ.
ಒಂದೆಡೆ ಮುಂಗಾರು ಆರಂಭಗೊಂಡಿದ್ದು, ಅದಾಗಿಯೂ ಕಾಂಕ್ರೀಟ್ ರಸ್ತೆ, ಒಳಾಂಗಣ ಕಟ್ಟಡ ಕಾಮಗಾರಿಗೆ ಅವಕಾಶವಿದ್ದರೂ ಕೂಡ ಕುಂದಾಪುರ, ಬೈಂದೂರು ತಾಲೂಕಿನಲ್ಲಿ ಮಂಜೂರಾಗಿದ್ದ ಅಭಿವೃದ್ಧಿ ಕಾಮಗಾರಿಗಳು ಆರಂಭವೇ ಆಗಿಲ್ಲ.
ಈ ವರ್ಷದಲ್ಲಿ ಬೈಂದೂರು ಹಾಗೂ ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಮಂಜೂರಾಗಿದ್ದು, ಆದರೆ ಈಗ ಟೆಂಡರ್ ಎಲ್ಲ ಆಗಿ ಕಾಮಗಾರಿ ಆರಂಭಿಸುವ ಹಂತದಲ್ಲಿ ಹೊರ ರಾಜ್ಯಗಳ ಕಾರ್ಮಿಕರು ತಮ್ಮೂರಿಗೆ ತೆರಳಿದ್ದರಿಂದ ಗುತ್ತಿಗೆದಾರರಿಗೆ ತೊಂದರೆಯಾಗಿದೆ. ಇದರಿಂದ ಬಹುತೇಕ ಕಾಮಗಾರಿ ಮಳೆಗಾಲದ ಅನಂತರ ಆರಂಭಗೊಳ್ಳುವ ಸಾಧ್ಯತೆಯಿದೆ.
ಉಡುಪಿ ಜಿಲ್ಲೆಯಲ್ಲಿ ರಸ್ತೆ, ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿಸಿ ಕೊಳ್ಳುವವರು ಉತ್ತರ ಭಾರತದವರು ಅಥವಾ ಉತ್ತರ ಕರ್ನಾಟಕದವರೇ ಹೆಚ್ಚು. ಉತ್ತರ ಪ್ರದೇಶ, ಝಾರ್ಖಂಡ್, ಬಿಹಾರ, ಒಡಿಶಾ, ಪಶ್ಚಿಮ ಬಂಗಾಲ ಸೇರಿದಂತೆ ವಿವಿಧ ರಾಜ್ಯಗಳ ಸುಮಾರು 4 ಸಾವಿರಕ್ಕೂ ಅಧಿಕ ಮಂದಿ ಕಾರ್ಮಿಕರು ಉಡುಪಿ ಜಿಲ್ಲೆಯಿಂದ ತಮ್ಮೂರಿಗೆ ತೆರಳಿದ್ದಾರೆ.