Advertisement

ಜೀವನದ ಅದ್ಭುತ ಕ್ಷಣ, ವಿಶೇಷ ಸಂದರ್ಭ: ಉಡುಪಿಯ ಸಿನಿ ಶೆಟ್ಟಿ

07:41 PM Jul 05, 2022 | Team Udayavani |

ಕಾಪು: “ಇದು ನನ್ನ ಜೀವನದ ಅದ್ಭುತ ಕ್ಷಣ. ಬಹಳಷ್ಟು ನಿರೀಕ್ಷೆಯೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ಮಿಸ್‌ ಇಂಡಿಯಾ ಆಗಿ ಮೂಡಿ ಬಂದದ್ದಕ್ಕೆ ಖುಷಿಯಾಗಿದೆ. ಹೆತ್ತವರ ಪ್ರೋತ್ಸಾಹ, ದೈವ ದೇವರ ಆಶೀರ್ವಾದದೊಂದಿಗೆ ಮುಂದಿನ ಮಿಸ್‌ ವರ್ಲ್ಡ್ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿರುವೆ’ ಎಂದು ಹೇಳಿದ್ದಾರೆ ಸಿನಿಶೆಟ್ಟಿ.

Advertisement

ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಇನ್ನಂಜೆ ಗ್ರಾಮದ ಮಡುಂಬು ಹೊಸಮನೆ ಸದಾನಂದ ಬಿ. ಶೆಟ್ಟಿ ಮತ್ತು ಬೆಳ್ಳಂಪಳ್ಳಿ ಪುಂಚೂರು ಮಾಧವ ನಿಲಯ ಹೇಮಾ ಎಸ್. ಶೆಟ್ಟಿ ದಂಪತಿ ಪುತ್ರಿ ಸಿನಿ ಶೆಟ್ಟಿ ಹುಟ್ಟಿದ್ದು ಮತ್ತು ಬೆಳೆದಿದ್ದೆಲ್ಲ ಮುಂಬಯಿಯಲ್ಲಿಯಾದರೂ ತಮ್ಮ ಮೂಲ ಊರಿನ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದಾರೆ.

ಕರ್ನಾಟಕವನ್ನು ಪ್ರತಿನಿಧಿಸಿದ್ದ ಸಿನಿ
ಕರ್ನಾಟಕ ಮತ್ತು ಮಹಾರಾಷ್ಟ್ರದ ಪ್ರತಿನಿಧಿಯಾಗಿ ಸ್ಪರ್ಧೆಗೆ ಕಾಲಿರಿಸಿದ್ದ ಅವರು ಟಾಪ್‌ 10ರಲ್ಲಿ ಆಯ್ಕೆಯಾಗಿದ್ದರು.

ಎ. 28ರಂದು ನಡೆದ ಸ್ಪರ್ಧೆಯಲ್ಲಿ ಮಿಸ್‌ ಕರ್ನಾಟಕ ಆಗಿ ಆಯ್ಕೆಯಾದ ಬಳಿಕ ಮಹಾರಾಷ್ಟ್ರ ಪ್ರಾತಿನಿಧ್ಯದಿಂದ ಹಿಂದೆ ಸರಿದು ಮಿಸ್‌ ಇಂಡಿಯಾ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದರು. ಅಂತಿಮ ಸುತ್ತಿನ ಸ್ಪರ್ಧೆಗೆ ಆಯ್ಕೆಯಾದ 31 ಮಂದಿಯೊಂದಿಗೆ ಸ್ಪರ್ಧಿಸಿ ಟಾಪ್‌ 10ಕ್ಕೆ ಆಯ್ಕೆಯಾದರು. ಬಳಿಕ ಟಾಪ್‌ ಐವರಲ್ಲಿ ಒಬ್ಬರಾಗಿ ರವಿವಾರ ರಾತ್ರಿ ನಡೆದ ಫೈನಲ್‌ ಸ್ಪರ್ಧೆಯಲ್ಲಿ ಮಿಸ್‌ ಇಂಡಿಯಾ ಕಿರೀಟ ಗೆದ್ದುಕೊಂಡರು.

71ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ ಸಿನಿ ಶೆಟ್ಟಿ. 200 ನೇ ಸಾಲಿನಲ್ಲಿ ವಿಶ್ವ ಸುಂದರಿ ಕಿರೀಟವನ್ನು ಅಲಂಕರಿಸಿದ್ದ ಪ್ರಿಯಾಂಕಾ ಚೋಪ್ರಾ ಅವರನ್ನು ಸ್ಪರ್ಧೆಗೆ ಅಣಿಗೊಳಿಸಿದವರೇ ಸಿನಿ ಶೆಟ್ಟಿಯವರನ್ನೂ ತರಬೇತು ಮಾಡುತ್ತಿದ್ದಾರೆ.

Advertisement

ಸಿನಿ ಶೆಟ್ಟಿಯವರ ತಂದೆ ಹೊಟೇಲ್‌ ಉದ್ಯಮಿ, ತಾಯಿ ಗೃಹಿಣಿ. ಸಹೋದರ ವಿದೇಶದಲ್ಲಿದ್ದರೂ ಬೆಂಬಲಿಸುತ್ತಿದ್ದಾನೆ.

ಮಾಡೆಲಿಂಗ್‌ ಬಗ್ಗೆ ಹೆಚ್ಚಿನ ಒಲವು ಹೊಂದಿರುವ ಅವರು, ಈಗಾಗಲೇ ಕೆಲವು ಪ್ರಸಿದ್ಧ ಕಂಪೆನಿಗಳ ರಾಯಭಾರಿಯಾಗಿ ಜಾಹೀರಾತುಗಳಲ್ಲಿ ಪಾಲ್ಗೊಂಡಿದ್ದಾರೆ. ಪ್ರಸ್ತುತ ವೆಬ್‌ ಸರಣಿಯಲ್ಲಿ ಅಭಿನಯಿಸು ತ್ತಿದ್ದು, ಅವಕಾಶ ಸಿಕ್ಕಿದರೆ ಸಿನಿಮಾ ರಂಗ ಪ್ರವೇಶಿಸುವ ಉತ್ಸಾಹವಿದೆ. ಸಿನಿ ಶೆಟ್ಟಿ ಕಳೆದ ಎಪ್ರಿಲ್‌ನಲ್ಲಿ ತಾಯಿ ಮನೆಯಲ್ಲಿ ನಡೆದಿದ್ದ ನಾಗ ದೇವರ ಪೂಜಾ ಕಾರ್ಯಕ್ರಮದಲ್ಲಿ ತಮ್ಮ ಕುಟುಂಬದೊಂದಿಗೆ ಭಾಗವಹಿಸಿದ್ದರು.

ಅಕೌಂಟಿಂಗ್‌ ಮತ್ತು ಫೈನಾನ್ಸ್‌ ನಲ್ಲಿ ಮಾಸ್ಟರ್ಸ್‌ ಪದವಿ ಪಡೆದಿರುವ ಸಿನಿ ಶೆಟ್ಟಿ ಪ್ರಸ್ತುತ ಮುಂಬಯಿಯ ಕಂಪೆನಿಯೊಂದರಲ್ಲಿ ಉದ್ಯೋಗಿ ಯಾಗಿದ್ದು, ಸಿಎಫ್ಎ ಕೋರ್ಸ್‌ ಸಹ ಮಾಡುತ್ತಿದ್ದಾರೆ.

ಭರತ ನಾಟ್ಯ ಪ್ರವೀಣೆ
ಭರತನಾಟ್ಯ ಪ್ರವೀಣೆಯೂ ಆಗಿರುವ ಸಿನಿಶೆಟ್ಟಿ, ಪಾಶ್ಚಾತ್ಯ ನೃತ್ಯ ಸಹಿತ ವಿವಿಧ ಪ್ರಕಾರಗಳಲ್ಲಿ ಆಸಕ್ತಿಯಿದೆ. 4ನೇ ವರ್ಷದಲ್ಲಿ ನೃತ್ಯಾಭ್ಯಾಸ ಆರಂಭಿಸಿ 14ನೇ ವಯಸ್ಸಿನಲ್ಲಿ ರಂಗ ಪ್ರವೇಶ ಮಾಡಿದ್ದರು. ಊರಿನಲ್ಲಿ ಸಂತಸ
ಸಿನಿ ಶೆಟ್ಟಿಗೆ ಮಿಸ್‌ ಇಂಡಿಯಾ ಅವಾರ್ಡ್‌ ಬಂದಿದ್ದು ಅವರ ತಂದೆಯ ಹುಟ್ಟೂರು ಇನ್ನಂಜೆಯಲ್ಲಿ ಸಂಭ್ರಮ ಮನೆ ಮಾಡಿದೆ. ಸಿನಿ ಸಾಧನೆಯನ್ನು ನೆನಪಿಸಿ ಸಂತಸ ಪಟ್ಟಿರುವ ಅವರ ಸಂಬಂಧಿಕರು ನಮ್ಮ ಮನೆಯ ಮಗಳು ವಿಶ್ವ ಸುಂದರಿ ಆಗುತ್ತಾಳೆ. ಅದಕ್ಕೆ ಎಲ್ಲ ದೈವ ದೇವರ ಅನುಗ್ರಹವಿರಲಿದೆ ಎಂದು ಹಾರೈಸಿದ್ದಾರೆ.

ಮುಂಬಯಿಯಲ್ಲೇ ಹುಟ್ಟಿ ಬೆಳೆದರೂ, ತುಳುನಾಡು, ತುಳುನಾಡಿನ ದೈವ ದೇವರ ಬಗ್ಗೆ ಅಪಾರ ನಂಬಿಕೆಯಿದೆ. ಗಂಜಿ ಊಟ, ಒಣ ಮೀನು ಚಟ್ನಿ, ನೀರ್‌ ದೋಸೆ, ಕೋರಿ ರೊಟ್ಟಿ ಸಹಿತ ವಿವಿಧ ಖಾದ್ಯಗಳನ್ನು ಇಷ್ಟ ಪಡುತ್ತಾಳೆ ಎನ್ನುತ್ತಾರೆ ಅವರ ತಂದೆ.

ವಿಶ್ವ ಸುಂದರಿಯಾಗುವುದೇ ಮುಂದಿನ ಗುರಿ
ಮೂರ್‍ನಾಲ್ಕು ವರ್ಷಗಳಿಂದ ಮಾಡೆಲಿಂಗ್‌ ಕ್ಷೇತ್ರದಲ್ಲಿ ಕ್ರಿಯಾಶೀಲವಾಗಿದ್ದಳು. ನಮಗೆ ಆಕೆ ಮಾಡೆಲ್‌ ಆಗುವುದು ಅಷ್ಟೊಂದು ಇಷ್ಟವಿರಲಿಲ್ಲ. ಆದರೂ ಆಕೆಯ ಅಭಿರುಚಿ ಎನ್ನುವ ಕಾರಣಕ್ಕೆ ಬೆಂಬಲಿಸಿದೆವು. ಊರಿನಲ್ಲಿರುವ ಅವಳ ಅಜ್ಜಿ ತುಂಗಮ್ಮ ಅವರ ಪ್ರೋತ್ಸಾಹ, ಪ್ರೇರಣೆಯಿಂದಾಗಿ ಈ ಸಾಧನೆ ಸಾಧ್ಯವಾಯಿತು. ಈಗ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವುದಕ್ಕೆ ಖುಷಿಯಾಗಿದೆ. ಸಿನಿಮಾ ರಂಗದಲ್ಲೂ ಅವಕಾಶ ಸಿಕ್ಕರೆ ಅಭಿನಯಿಸುತ್ತಾಳೆ. ಮಿಸ್‌ ವರ್ಲ್ಡ್ ಪ್ರಶಸ್ತಿ ಗೆಲ್ಲುವುದು ಅವಳ ಮುಂದಿನ ಗುರಿ. ಮಾಡೆಲಿಂಗ್‌ ಮತ್ತು ಚಲನಚಿತ್ರ ಕ್ಷೇತ್ರದಲ್ಲಿ ಸಾಧಿಸುವುದು.
– ಸದಾನಂದ ಶೆಟ್ಟಿ

ನಿರೀಕ್ಷಿಸಿರಲಿಲ್ಲ, ಸಂತಸವಾಗಿದೆ
ಮೊದಲ ಹತ್ತು ಮಂದಿಯಲ್ಲಿ ಸ್ಥಾನ ಗಳಿಸಿಯಾಳು ಎಂದು ನಿರೀಕ್ಷಿಸಿದ್ದೆವು. ಕೊನೆಗೆ ಐವರಲ್ಲಿ ಒಬ್ಬಳಾದಾಗ ರನ್ನರ್‌ ಅಪ್‌ ಪ್ರಶಸ್ತಿ ಬರಬಹುದು ಎಂದುಕೊಂಡಿದ್ದೆವು. ಅಂತಿಮ ಹಂತದ ಸ್ಪರ್ಧೆಯ ಸಂದರ್ಭದಲ್ಲಿ ಊರಿನ ನಮ್ಮ ದೈವ ದೇವರನ್ನು ನೆನಪಿಸಿ, ಪ್ರಾರ್ಥಿಸಿದೆವು. ಅದೊಂದು ಅಮೋಘ ಕ್ಷಣ. ಮಗಳು ಗೆದ್ದ ಕೂಡಲೇ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಅವಳ ಶ್ರಮಕ್ಕೆ ಪ್ರತಿಫಲ ಸಿಕ್ಕಿದೆ.
– ಹೇಮಾ ಎಸ್‌. ಶೆಟ್ಟಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next