ಕೊಪ್ಪಳ: ಕೆಲಸ ಮಾಡುವ ವೇಳೆ ಕಂಡ ಹಾವನ್ನು ಮಹಿಳೆಯು ಹಿಡಿದು ಕೊರಳಿಗೆ ಸುತ್ತಿಕೊಂಡು ದೇವರ ಜಪ ಮಾಡಿದ ಘಟನೆ ಕೊಪ್ಪಳ ತಾಲೂಕಿನಲ್ಲಿ ನಡೆದಿದೆ. ಇದು ದೈವಲೀಲೋ.. ಮಹಿಳೆಯ ಹುಚ್ಚುತನವೋ ಎಂದು ಜನ ಮಾತನಾಡುವಂತಾಗಿದೆ.
ಕೊಪ್ಪಳ ತಾಲೂಕಿನ ಹಿರೇ ಬಗನಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಶೀಲಮ್ಮ ಕೊರಳಿಗೆ ಹಾವು ಹಾಕಿಕೊಂಡು ಅಚ್ಚರಿ ಮೂಡಿಸಿದ್ದಾಳೆ.
ಗದಗ ಜಿಲ್ಲೆಯ ಕೋಟುಮಚಗಿ ಗ್ರಾಮದವರಾಗಿರುವ ಶೀಲಮ್ಮ ಕಳೆದ 6 ತಿಂಗಳ ಹಿಂದೆ ತನ್ನ ಪತಿಯೊಂದಿಗೆ ಹಿರೇಬಗನಾಳ ಗ್ರಾಮದ ಬಳಿ ಇರುವ ಕೋಳಿಫಾರಂವೊಂದರಲ್ಲಿ ಕೆಲಸಕ್ಕೆ ಬಂದಿದ್ದಾಳೆ.
ಕೋಳಿಫಾರಂ ನಲ್ಲಿ ಕೆಲಸ ಮಾಡುತ್ತಿದ್ದಾಗ ಹಾವೊಂದು ಕಂಡು ಬಂದಿದೆ. ಅದನ್ನು ನೋಡಿದ ಶೀಲಮ್ಮ ಅದನ್ನು ಯಾವುದೇ ಭಯವಿಲ್ಲದೆ ಹಿಡಿದು ತನ್ನ ಕೊರಳಿಗೆ ಸುತ್ತಿಕೊಂಡು ಗ್ರಾಮದ ಮಠಕ್ಕೆ ಬಂದಿದ್ದಾಳೆ.
ಇದನ್ನು ನೋಡಿದ ಜನರು ಆಕೆಯ ಮೈಯ್ಯಲ್ಲಿ ದೇವರು ಬಂದಿದೆ ಎಂದು ಹೇಳುತ್ತಿದ್ದಾರೆ. ದೊಡ್ಡ ಗಾತ್ರದ ಮತ್ತು 6 ಅಡಿಗೂ ಹೆಚ್ಚು ಉದ್ದವಿರುವ ಹಾವನ್ನು ಮಹಿಳೆ ಕೊರಳಲ್ಲಿ ಸುತ್ತಿಕೊಂಡರೂ ಹಾವು ಸಹ ಆಕೆಗೆ ಏನೂ ಮಾಡದೆ ಇರೋದು ಅಚ್ಚರಿಗೆ ಕಾರಣವಾಗಿದೆ.
ಸುಮಾರು ಹೊತ್ತು ಹಾವನ್ನು ಕೊರಳಲ್ಲಿ ಸುತ್ತಿಕೊಂಡಿದ್ದ ಶೀಲಮ್ಮ, ಹಾವಿನೊಂದಿಗೆ ಹಿರೇಬಗನಾಳದ ಗವಿಸಿದ್ದೇಶ್ವರ ಶಾಖಾ ಮಠದಲ್ಲಿ ದೇವರ ಹಾಡು ಪಠಣ ಮಾಡುತ್ತಾ ಕುಣಿದಿದ್ದಾಳೆ ಹಾವಿನೊಂದಿಗೆ ಕೊಂಚಹೊತ್ತು ಆಟವಾಡಿದ್ದಾಳೆ. ಇದನ್ನು ಕಂಡು ಜನ ದೈವಲೀಲೆ ಎಂದು ಬಣ್ಣಿಸಿದ್ದರೆ ಕೆಲವರು ಈ ಮಹಿಳೆ ಹುಚ್ಚಾಟದ ಬಗ್ಗೆ ಮಾತನಾಡಿದ್ದಾರೆ.
ಇನ್ನು ಈ ಕುರಿತಂತೆ ಮಹಿಳೆಯ ಪತಿ, ಎರಡು ವರ್ಷದ ಹಿಂದೆ ತಮ್ಮ ಪತ್ನಿಗೆ ಇದೇ ರೀತಿ ದೇವರು ಬಂದಿತ್ತು ಎಂದು ತಿಳಿಸಿದ್ದಾರೆ. ಕೆಲ ಹೊತ್ತಿನ ಬಳಿಕ ಗ್ರಾಮಸ್ಥರು ಆ ಮಹಿಳೆಯಿಂದ ಹಾವು ಬಿಡಲು ಹೇಳಿದ್ದಾರೆ. ಮಹಿಳೆ ಊರು ಹೊರಗಿನ ಬನ್ನಿ ಗಿಡದ ಬಳಿ ಹಾವನ್ನು ಬಿಟ್ಟಿದ್ದು ತನ್ನನ್ನು ಹುಬ್ಬಳ್ಳಿ ಸಿದ್ದಾರೂಢ ಮಠಕ್ಕೆ ಬಿಟ್ಟು ಬರುವಂತೆ ಹೇಳಿದ್ದಾಳೆ. ಹಾಗಾಗಿ ಗ್ರಾಮಸ್ಥರು ಮಹಿಳೆಯನ್ನು ಮಠಕ್ಕೆ ಬಿಟ್ಟು ಬರಲು ತಯಾರಿ ನಡೆಸಿದ್ದಾರೆ.