ಹೊಸದಿಲ್ಲಿ: ಐಸಿಸ್ ಉಗ್ರ ಸಂಘಟನೆ ಜತೆ ನಂಟು ಹಾಗೂ ದೇಶದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ಆರೋಪದಲ್ಲಿ ಕಳೆದ ಮಾರ್ಚ್ ನಲ್ಲಿ ಬಂಧಿತಳಾಗಿದ್ದ ಕಾಶ್ಮೀರಿ ಮಹಿಳೆ ಹೀನಾ ಬಶೀರ್ ಬೇಗ್‌ಗೆ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಶದಲ್ಲಿರುವ ಆಕೆಯನ್ನು ಕೂಡಲೇ ಲೋಕನಾಯಕ ಜಯಪ್ರಕಾಶ್ ಆಸ್ಪತ್ರೆಗೆ ದಾಖಲಿಸುವಂತೆ ವಿಶೇಷ ಕೋರ್ಟ್‌ನ ನ್ಯಾಯಾಧೀಶರು ಸೂಚಿಸಿದ್ದಾರೆ. ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆಗೆ ಕುಮ್ಮಕ್ಕು ನೀಡಿದ ಹಾಗೂ ಐಸಿಸ್ ಸಿದ್ಧಾಂತವನ್ನು ಪ್ರಚುರಪಡಿಸಿದ ಆರೋಪ ಈಕೆಯ ಮೇಲಿದೆ. ಇತ್ತೀಚೆಗೆ ಎನ್‌ಐಎ, ಬೇಗ್, ಸಮಿ ಹಾಗೂ ಹೈದರಾಬಾದ್ ಮೂಲದ ಐಸಿಸ್ ಉಗ್ರ ಮೊಹಮ್ಮದ್ ಅಬ್ದುಲ್ಲಾ ಬಾಸಿತ್‌ನನ್ನು ವಶಕ್ಕೆ ಪಡೆದಿತ್ತು. ಈ ವೇಳೆ ತಿಹಾರ್ ಜೈಲಿನ ಅಧಿಕಾರಿಗಳು ಅವರನ್ನು ಪರೀಕ್ಷೆಗೆ ಒಳಪಡಿಸಿದ್ದರು. ಆದರೆ ಎಲ್ಲರ ವರದಿಯೂ ನೆಗೆಟಿವ್ ಎಂದು ಬಂದಿತ್ತು. ಬೇಗ್‌ಗೆ ರೋಗಲಕ್ಷಣ ಕಂಡುಬಂದ ಕಾರಣ, ಮತ್ತೂಮ್ಮೆ ಪರೀಕ್ಷೆಗೊಳಪಡಿಸಿದಾಗ ಆಕೆಯ ವರದಿ ಪಾಸಿಟಿವ್ ಎಂದು ಬಂದಿದೆ.