ದೋಟಿಹಾಳ: ತಮ್ಮ ಕುಟುಂಬ ಸದಸ್ಯರನ್ನು ಅಡುಗೆ ಸಹಾಯಕರಾಗಿ ನೇಮಿಸಿಕೊಳ್ಳಬೇಕು ಎಂದು ಆಗ್ರಹಿಸಿ ಮಹಿಳೆ ಪಟ್ಟು ಹಿಡಿದ ಕಾರಣ ಬನ್ನಟಿ ಗ್ರಾಮದ ಶಾಲಾ ಮಕ್ಕಳು ಕೆಲ ದಿನಗಳಿಂದ ಬಿಸಿಯೂಟ ಇಲ್ಲದೇ ಪರದಾಡುವಂತಾಗಿದೆ. ಹಿಂದೆ ತಮ್ಮ ತಾಯಿ ಮಾಡುತ್ತಿದ್ದ ಅಡುಗೆ ಸಹಾಯಕ ಕೆಲಸಕ್ಕೆ ತಮ್ಮ ಮನೆಯವರನ್ನೇ ನೇಮಕ ಮಾಡಿಕೊಳ್ಳಬೇಕು ಎಂದು ಪಟ್ಟುಹಿಡಿದ ಸಂಗಮ್ಮ ರಮೇಶ ಕಜ್ಜಿ ಎಂಬುವವರು ನಾಲ್ಕು ದಿನಗಳಿಂದ ಮಕ್ಕಳಿಗೆ ಅಡುಗೆ ಮಾಡಲು ಬಿಡುತ್ತಿಲ್ಲ.
ಶಾಲೆಯಲ್ಲಿ ಸಂಗಮ್ಮ ರಮೇಶ ಕಜ್ಜಿ ಅವರ ತಂದೆ-ತಾಯಿ ಸಹಾಯಕ ಅಡುಗೆದಾರರಾಗಿ ಕೆಲಸ ಮಾಡುತ್ತಿದ್ದರು. ತಂದೆ ನಿಧನರಾದ ನಂತರ ತಾಯಿ ದೊಡ್ಡಮ್ಮ ಮಲ್ಲಪ್ಪ ಸೂಡಿ ಅವರು ತಾತ್ಕಾಲಿಕವಾಗಿ 10 ತಿಂಗಳ ಸೇವೆ ಸಲಿಸಿ 3 ತಿಂಗಳ ಹಿಂದೆ ನಿಧನರಾಗಿದ್ದಾರೆ. ಈಗ ಅವರ ಸೊಸೆ ವಾಣಿ ಹನುಮಪ್ಪ ಸೂಡಿ ಅವರನ್ನು ನೇಮಕ ಮಾಡಿಕೊಳ್ಳಬೇಕು ಎಂದು ಸಂಗಮ್ಮ ಪಟ್ಟು ಹಿಡಿದ್ದಾರೆ.
ಅಡುಗೆದಾರರನ್ನು ನೇಮಿಸಿಕೊಳ್ಳುವ ಕುರಿತು ಗ್ರಾಪಂ ವರ್ಷದ ಹಿಂದೆ ಅರ್ಜಿ ಕರೆದಿತ್ತು. ಸಲ್ಲಿಕೆಯಾದ ಅರ್ಜಿಗಳನ್ನು ಪರಿಶೀಲಿಸಿ ಗ್ರಾಪಂ ಜೂ. 13ರಂದು ಲಕ್ಷಿ ್ಮೕ ಮುದುಕಪ್ಪ ಹವಾಲ್ದಾರ ಅವರನ್ನು ನೇಮಕ ಮಾಡಿ ಶಾಲಾ ಶಿಕ್ಷಕರಿಗೆ ಆದೇಶ ನೀಡಿತ್ತು. ಲಕ್ಷ್ಮೀ ಹವಾಲ್ದಾರ ಅಡುಗೆ ಸಹಾಯಕಿಯಾಗಿ ನೇಮಕವಾಗಿದನ್ನು ಖಂಡಿಸಿ ಸಂಗಮ್ಮ ಮೂರು ದಿನಗಳಿಂದ ಮಕ್ಕಳಿಗೆ ಅಡುಗೆ ಮಡುವುದನ್ನು ತಡೆದಿದ್ದಾಳೆ.
ಸಮಸ್ಯೆ ಪರಿಹರಿಸಲು ಶನಿವಾರ ತಾಲೂಕು ಅಕ್ಷರದಾಸೋಹ ಸಹಾಯಕ ನಿರ್ದೇಶಕ ಅಧಿಕಾರಿ ಕೆ. ಶರಣಪ್ಪ, ಗ್ರಾಪಂ ಅಧ್ಯಕ್ಷ ಚೇತನಕುಮಾರ ಹಿರೇಮಠ, ತಾಪಂ ಸದಸ್ಯ ನಾಗಪ್ಪ ದೋಟಿಹಾಳ, ಗ್ರಾಪಂ ಸದಸ್ಯ ರಾಮನಗೌಡ, ಪಿಡಿಒ ಬಸವರಾಜ ಸಂಕನಾಳ ಅವರು ಶಾಲೆಗೆ ಭೇಟಿ ನೀಡಿ ಮನವೊಲಿಸುವ ಪ್ರಯತ್ನ ಮಾಡಿದರೂ ಸಂಗಮ್ಮ ಪಟ್ಟು ಸಡಿಲಿಸಲಿಲ್ಲ. ಆದ ಕಾರಣ ಕಾನೂನಿನ ಪ್ರಕಾರ ಕ್ರಮಕೈಗೊಳ್ಳಲು ಮುಖ್ಯ ಶಿಕ್ಷಕರಿಗೆ ಸೂಚಿಸಿದ್ದಾರೆ.
ಸಂಗಮ್ಮ ಶಾಲೆಗೆ ಭೇಟಿ ನೀಡಿದ್ದ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಮಾತು ಕೇಳದ ಕಾರಣ ಅನಿವಾರ್ಯವಾಗಿ ಪೊಲೀಸ್ ಠಾಣೆಗೆ ದೂರು ನೀಡುತ್ತಿದೇವೆ ಎಂದು ಶಾಲಾ ಮುಖ್ಯಶಿಕ್ಷಕಿ ತಿಳಿಸಿದ್ದಾರೆ.
ಸರಕಾರದ ನೇಮಕಾತಿ ಆದೇಶದ ಪ್ರಕಾರ ನೇಮಕಾತಿ ಮಾಡಲಾಗಿದೆ. ಅಡುಗೆದಾರರ ನೇಮಕಾತಿಗೆ 30-40 ವರ್ಷದೊಳಗಿನವರ ಮಾತ್ರ ಆಯ್ಕೆ ಮಾಡಬೇಕು ಎಂಬ ಆದೇಶ ಇದೆ. ಹೀಗಾಗಿ ದಾಖಲಾತಿಗಳನ್ನು ಪರಿಶೀಲಿಸಿ ಸಹಾಯಕಿಯನ್ನು ನೇಮಕ ಮಾಡಲಾಗಿದೆ
•ಚೇತನಕುಮಾರ ಹಿರೇಮಠ, ಗ್ರಾಪಂ ಅಧ್ಯಕ್ಷರು ಮುದೇನೂರು
ಬಿಸಿಯೂಟ ಅಡುಗೆ ಕೆಲಸಗಾರರು ಅಕಾಲಿಕ ಮರಣ ಹೊಂದಿದರೆ ಅವರ ಮನೆಯವರನ್ನು ಮರಳಿ ನೇಮಕ ಮಾಡಬೇಕು ಎಂಬ ಯಾವುದೇ ಆದೇಶ ಇಲ್ಲ. ಶಾಲಾ ಮಕ್ಕಳ ಬಿಸಿಯೂಟ ಸ್ಥಗಿತ ಮಾಡುವುದು ಕಾನೂನು ಪ್ರಕಾರ ತಪ್ಪು.
•ಕೆ. ಶರಣಪ್ಪ, ತಾಲೂಕು ಅಕ್ಷರದಾಸೋಹ ಅಧಿಕಾರಿ