ಬೆಂಗಳೂರು: ಆಸ್ತಿ ವಿವಾದ ಪ್ರಕರಣದಲ್ಲಿ ಪೊಲೀಸರು ತನಗೆ ಸಹಾಯ ಮಾಡುತ್ತಿಲ್ಲ ಎಂದು ಆರೋಪಿಸಿ ಠಾಣೆಗೆ ಬಂದ ಮಹಿಳೆಯೊಬ್ಬರು ಕರ್ತವ್ಯ ನಿರತ ಸಹಾಯಕ ಸಬ್ ಇನ್‌ಸ್ಪೆಕ್ಟರ್(ಎಎಸ್‌ಐ)ಗೆ ಬಾಟಲಿಯಿಂದ ಇರಿದು ಗಾಯಗೊಳಿಸಿರುವ ಘಟನೆ ಗಂಗಮ್ಮನಗುಡಿ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಗಂಗಮ್ಮನಗುಡಿ ಪೊಲೀಸ್ ಠಾಣೆಯ ಎಎಸ್‌ಐ ನಾಗರಾಜು ಗಾಯಗೊಂಡವರು. ಘಟನೆಯಲ್ಲಿ ಅವರ ಬಲಗೈಗೆ ಗಾಯವಾಗಿದ್ದು ಚಿಕಿತ್ಸೆ ಪಡೆದಿದ್ದಾರೆ. ಬಾಟಲಿಯಿಂದ ಹಲ್ಲೆ ಮಾಡಿದ ಅಬ್ಬಿಗೆರೆ ನಿವಾಸಿ ಅಶ್ವಿನಿ ಎಂಬಾಕೆ ಮಾನಸಿಕ ಖನ್ನತೆಯಿಂದ ಬಳಲುತ್ತಿದ್ದು, ಆಕೆಯನ್ನು ಚೆಕಿತ್ಸೆಗಾಗಿ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಅಬ್ಬಿಗೆರೆ ನಿವಾಸಿ ಅಶ್ವಿನಿ ಪತಿಯಿಂದ ದೂರವಾಗಿದ್ದು ಪ್ರತ್ಯೇಕವಾಗಿ ವಾಸವಾಗಿದ್ದಾರೆ. ಮತ್ತೂಂದೆಡೆ ಸಹೋದರನ ಜತೆ ಆಸ್ತಿ ವಿವಾದವಿದೆ. ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವ ಅಶ್ವಿನಿ, ಕಳೆದ ಹತ್ತು ವರ್ಷಗಳಿಂದ ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿ¤ದ್ದಾರೆ. ಆಸ್ತಿ ವಿವಾದ ಸಂಬಂಧ ದೂರು ನೀಡಲು ಶನಿವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಗಂಗಮ್ಮನಗುಡಿ ಪೊಲೀಸ್ ಠಾಣೆಗೆ ಬಂದಿದ್ದಾರೆ. ಈ ವೇಳೆ ದೂರು ಸ್ವೀಕರಿಸಿ, ಆಲಿಸಿದ ಎಎಸ್‌ಐ ನಾಗರಾಜು ಪರಿಶೀಲಿಸುವುದಾಗಿ ಹೇಳಿದ್ದಾರೆ. ಇದರಿಂದ ಬೇಸರಗೊಂಡ ಅಶ್ವಿನಿ, ಪ್ರತಿ ಬಾರಿ ಬಂದಾಗಲೂ ಇದೇ ರೀತಿ ಹೇಳುತ್ತಿರಾ. ನನಗೆ ನ್ಯಾಯ ಕೊಡಿಸಲು ಪೊಲೀಸರು ಸಹಾಯ ಮಾಡುತ್ತಿಲ್ಲ ಎಂದು ಕೂಗಾಡಿ ತನ್ನ ಬಳಿಯಿದ್ದ ಗಾಜಿನ ಬಾಟಲಿಯನ್ನು ಒಡೆದು ಎಎಸ್‌ಐ ನಾಗರಾಜು ಬಲಗೈಗೆ ಇರಿದಿದ್ದಾರೆ. ಅಷ್ಟರಲ್ಲಿ ಠಾಣಾ ಸಿಬ್ಬಂದಿ ಆಕೆಯನ್ನು ಹಿಡಿದುಕೊಂಡಿದ್ದಾರೆ. ಆದರೂ ಎಎಸ್‌ಐ ಬಲಗೈಗೆ ಸಣ್ಣ ಪ್ರಮಾಣದಲ್ಲಿ ಗಾಯವಾಗಿದ್ದು ಕೂಡಲೇ ಎಎಸ್‌ಐ ನಾಗರಾಜು ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಬಳಿಕ ಅಶ್ವಿನಿ ಬಗ್ಗೆ ವಿಚಾರಿಸಿದಾಗ ಆಕೆ ಮಾನಸಿಕ ಖನ್ನತೆಯಿಂದ ಬಳಲುತ್ತಿರುವುದು ಕಂಡು ಬಂದಿದೆ. ಕೂಡಲೆ ಆಕೆಯ ಕುಟುಂಬಕ್ಕೆ ಮಾಹಿತಿ ನೀಡಿ ನಿಮ್ಹಾನ್ಸ್‌ಗೆ ಕಳುಹಿಸಲಾಗಿದೆ. ಆಕೆ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಹೇಳಿದರು.