Advertisement

ಲಂಚ ಸ್ವೀಕರಿಸುವ ವೇಳೆ ಎಸಿಬಿ ಬಲೆಗೆ ಬಿದ್ದ ಮಹಿಳಾ ಇನ್ಸ್‌ಪೆಕ್ಟರ್‌

10:43 AM Apr 21, 2022 | Team Udayavani |

ಬೆಂಗಳೂರು: ನೆಲದಡಿಯಲ್ಲಿ ಅನಿಲ ಕೊಳವೆ ಅಳವಡಿಸುವ ಗುತ್ತಿಗೆ ಕಾಮಗಾರಿ ಮುಂದುವರಿಸಲು ಗುತ್ತಿಗೆದಾರರೊಬ್ಬರಿಂದ 20 ಸಾವಿರ ರೂ. ಲಂಚ ಪಡೆಯುತ್ತಿದ್ದ ಚಿಕ್ಕಜಾಲ ಸಂಚಾರ ಠಾಣೆಯ ಇನ್ಸ್‌ಪೆಕ್ಟರ್‌ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಲೆಗೆ ಬಿದ್ದಿದ್ದಾರೆ.

Advertisement

ಚಿಕ್ಕಜಾಲ ಸಂಚಾರ ಪೊಲೀಸ್‌ ಠಾಣೆಯ ಹಂಸವೇಣಿ ಬಂಧಿತರು. ರಾಮಪುರ ನಿವಾಸಿಯೊಬ್ಬರು ಗ್ಯಾಸ್‌ಲೇನ್‌ ಕಾಮಗಾರಿ ನಿರ್ವಹಿಸುವ ಗುತ್ತಿಗೆದಾರರಾಗಿದ್ದು, ಗೇಲ್‌ ಕಂಪನಿ ವತಿಯಿಂದ ಮಾಸ್‌ ಕನ್‌ಸ್ಟ್ರಕ್ಷನ್‌ನವರಿಗೆ ಬೆಂಗಳೂರು ನಗರದ ಸಾಕಷ್ಟು ಕಡೆ ನೆಲದ ಅಡಿಯಲ್ಲಿ ಪೈಪ್‌ ಅಳವಡಿಸಿ ಗ್ಯಾಸ್‌ ಸಂಪರ್ಕ ನೀಡುವ ಗುತ್ತಿಗೆಯನ್ನು ಇವರು ಪಡೆದಿದ್ದರು. ಅದೇ ರೀತಿ ಜಕ್ಕೂರು ವಾರ್ಡ ನಂ-5ರ ಟೆಲಿಕಾಂ ಬಡಾವಣೆಯಲ್ಲಿ ನೆಲದಡಿಯಲ್ಲಿ ಪೈಪ್‌ ಅಳವಡಿಸುವ ಉಪಗುತ್ತಿಗೆ ನೀಡಲಾಗಿತ್ತು. ಟೆಲಿಕಾಂ ಬಡಾವಣೆಯ 8ನೇ ಕ್ರಾಸ್‌ನಲ್ಲಿ ಕಾಮಗಾರಿ ಪ್ರಾರಂಭಿಸಿದಾಗ ಚಿಕ್ಕಜಾಲ ಸಂಚಾರ ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್‌ ಹಂಸವೇಣಿ ಕೆಲಸ ನಿಲ್ಲಿಸಲು ಸೂಚಿಸಿದ್ದರು. ಕಾಮಗಾರಿಯ ದಾಖಲಾತಿಗಳನ್ನು ಠಾಣೆಗೆ ತೆಗೆದುಕೊಂಡು ಬರುವಂತೆ ತಿಳಿಸಿದ್ದರು.

ಗುತ್ತಿಗೆದಾರರು ಸಂಬಂಧಪಟ್ಟ ದಾಖಲಾತಿಗಳೊಂದಿಗೆ ಚಿಕ್ಕಜಾಲ ಟ್ರಾಫಿಕ್‌ ಪೊಲೀಸ್‌ ಠಾಣೆಗೆ ಹೋಗಿ ದಾಖಲಾತಿ ತೋರಿಸಿದ್ದರು. ಆ ವೇಳೆ ಅದೇ ಠಾಣೆಯ ಸಿಬ್ಬಂದಿ ಗಂಗರಾಜು ಹಾಗೂ ಅಮುಲ್‌ ಎಂಬುವವರು “ಕಾಮಗಾರಿ ಮುಂದುವರಿಸಲು 20 ಸಾವಿರ ರೂ. ಲಂಚ ಕೊಡಬೇಕು’ ಎಂದು ಸೂಚಿಸಿದ್ದರು. ಹೆಚ್ಚುವರಿ ಕಾಮಗಾರಿ ನಿರ್ವಹಿಸಲು ಒಟ್ಟು 50 ಸಾವಿರ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಲಂಚ ಕೊಡಲು ಇಚ್ಛಿಸದ ಗುತ್ತಿಗೆದಾರರು ಎಸಿಬಿಗೆ ಈ ಕುರಿತು ದೂರು ನೀಡಿದ್ದರು.

ಬುಧವಾರ ಬೆಳಗ್ಗೆ (ಏ.20) ಹಂಸವೇಣಿ ಗುತ್ತಿಗೆದಾರರಿಂದ 20 ಸಾವಿರ ರೂ. ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳು ಚಿಕ್ಕಜಾಲ ಠಾಣೆಯ ಮೇಲೆ ದಾಳಿ ನಡೆಸಿ ಹಂಸವೇಣಿಯನ್ನು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next