Advertisement

Tourism: ಶೀಘ್ರ ಸಿಗಲಿದೆ “ಕ್ಷೇಮ” ಪ್ರವಾಸಾನುಭವ

11:22 PM Sep 16, 2023 | Team Udayavani |

ಬೆಂಗಳೂರು: ಪ್ರವಾಸಿಗರ ಆರೋಗ್ಯ, ಯೋಗಕ್ಷೇಮ ಕಾಪಾಡಿಕೊಳ್ಳಲು ಪ್ರವಾಸೋದ್ಯಮ ಇಲಾಖೆಯು ಮುಂದಿನ 2 ತಿಂಗಳಲ್ಲಿ ಆದ್ಯತಾ ಪ್ರವಾಸಿ ತಾಣಗಳಲ್ಲಿ “ವೆಲ್‌ನೆಸ್‌ ಟೂರಿಸಂ’ ಸೌಕರ್ಯ ಒದಗಿಸಲು ಸಿದ್ಧತೆ ನಡೆಸುತ್ತಿದೆ. ಅದರನ್ವಯ ಪ್ರವಾಸಿಗರಿಗೆ ಮನರಂಜನೆ ಜತೆಗೆ ಮನಶ್ಶಾಂತಿಯೂ ಸಿಗಲಿದೆ.

Advertisement

ರಾಜ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ದಿಗಾಗಿ ಸರಕಾರ ರೂಪಿಸಿರುವ ಮಹತ್ವದ ಯೋಜನೆಗಳಲ್ಲಿ ವೆಲ್‌ನೆಸ್‌ ಟೂರಿಸಂ ಕೂಡ ಒಂದು. “ವೆಲ್‌ನೆಸ್‌ ಟೂರಿಸಮ್‌’ ಅಡಿಯಲ್ಲಿ “ಆಯುರ್ವೇದ, ಯೋಗ ಹಾಗೂ ನ್ಯಾಚುರೋಪತಿ, ಯುನಾನಿ, ಸಿದ್ಧ, ಹೋಮಿಯೋಪತಿ ಸೌಕರ್ಯ ಸ್ಥಾಪಿಸಲು ಮುಂಬರುವ ಖಾಸಗಿ ಹೂಡಿಕೆದಾರರಿಗೆ ಇಲಾಖೆಯಿಂದ ಸಹಾಯಧನ, ರಿಯಾಯಿತಿ ಹಾಗೂ ಉತ್ತೇಜನ ಒದಗಿಸಲು ಅವಕಾಶ ಕಲ್ಪಿಸಲಾಗಿದೆ.
ಒಪ್ಪಂದ

ಎರಡು ತಿಂಗಳ ಬಳಿಕ “ಗ್ಲೋಬಲ್‌ ಟೂರಿಸಂ ಸಮ್ಮಿಟ್‌’ ಆಯೋಜಿಸಲು ಯೋಜನೆ ರೂಪಿಸಿದ್ದೇವೆ. ವೆಲ್‌ನೆಲ್‌ ಟೂರಿಸಂ ಯೋಜನೆ ಸಿದ್ಧಗೊಳ್ಳುತ್ತಿದೆ. ಈಗಾಗಲೇ ಸಿದ್ಧಪಡಿಸಿರುವ ಪ್ರಸ್ತಾವನೆ ಇಟ್ಟುಕೊಂಡು ವೆಲ್‌ನೆಲ್‌ ಟೂರಿಸಂಗೆ ಬಂಡವಾಳ ಹೂಡಿಕೆ ಮಾಡಲು ಆಸಕ್ತಿ ಇರುವವರ ಜತೆಗೆ ಮಾತುಕತೆ ನಡೆಸಿ ಒಪ್ಪಂದಕ್ಕೆ ಸಹಿ ಮಾಡುತ್ತೇವೆ. ರಾಜ್ಯದಲ್ಲಿರುವ ಪ್ರವಾಸಿ ವ್ಯವಸ್ಥೆ ಅಭಿವೃದ್ಧಿಪಡಿಸುವುದು, ಪ್ರವಾಸಿ ಸ್ಥಳಗಳಲ್ಲಿ ಬಂಡವಾಳ ಹೂಡಿಕೆ ಮಾಡುವುದು, ಸ್ಥಳೀಯ ಯುವಕರಿಗೆ ಉದ್ಯೋಗ ಅವಕಾಶ ಕಲ್ಪಿಸಿಕೊಡುವುದು, ರಾಜ್ಯದ ಆದಾಯ ಹೆಚ್ಚಿಸುವ ಉದ್ದೇಶದಿಂದ ವೆಲ್‌ನೆಸ್‌ ಟೂರಿಸಂ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ಡಾ| ವಿ.ರಾಮ್‌ ಪ್ರಸಾದ್‌ ಮನೋಹರ್‌ “ಉದಯವಾಣಿ’ಗೆ ತಿಳಿಸಿದ್ದಾರೆ.
ತಾಣ ಗುರುತು ಪ್ರಕ್ರಿಯೆ

ಮನರಂಜನೆ, ಸಾಂಸ್ಕೃತಿಕ ಪ್ರವಾಸಗಳ ಜತೆಜತೆಗೆ ವೆಲ್‌ನೆಸ್‌ ಟೂರಿಸಂಗೆ ದೇಶದಲ್ಲಿ ಬೇಡಿಕೆ ವ್ಯಕ್ತವಾಗಿದೆ. ವೆಲ್‌ನೆಸ್‌ ಟೂರಿಸಂ ತರಬಹುದಾದ ರಾಜ್ಯದ ಪ್ರವಾಸಿ ತಾಣ ಗುರುತಿಸುವ ಪ್ರಕ್ರಿಯೆಗಳು ನಡೆಯುತ್ತಿವೆ. ಅಧ್ಯಾತ್ಮಿಕ ಅನುಭವ ನೀಡುವ ಸ್ಥಳಗಳಲ್ಲೇ ಈ ವ್ಯವಸ್ಥೆ ನಿರ್ಮಿಸಲು ಚಿಂತಿಸಲಾಗಿದೆ. ಇಲಾಖೆ ಗುರುತಿಸಿರುವ ತಾಣಗಳಲ್ಲಿ ಖಾಸಗಿಯರಿಗೆ ಈ ಸೌಕರ್ಯ ಒದಗಿಸಲು ಅವಕಾಶ ಕಲ್ಪಿಸಲಾಗುತ್ತಿದೆ. ರಿಯಾಯಿತಿ ದರಗಳಲ್ಲಿ ಇಲ್ಲಿ ಸೌಲಭ್ಯ ಸಿಗಲಿದೆ. ಹೂಡಿಕೆ ಮಾಡುವ ಖಾಸಗಿ ವ್ಯಕ್ತಿ, ಸಂಸ್ಥೆಗಳಿಗೆ ಒಪ್ಪಂದದ ವೇಳೆಯೇ ಕೆಲವು ಷರತ್ತು ವಿಧಿಸಲು ನಿರ್ಧರಿಸಲಾಗಿದೆ.

ಪ್ರವಾಸೋದ್ಯಮ ಇಲಾಖೆಯಲ್ಲಿ 23 ವಿವಿಧ ಸೆಕ್ಟರ್‌ಗಳಿವೆ. ಅವುಗಳಲ್ಲಿ ವೆಲ್‌ನೆಸ್‌ ಟೂರಿಸಂ ಕೂಡ ಒಂದು. ಇದಕ್ಕೆ ಸಂಬಂಧಿಸಿದ ಯೋಜನೆ ಸಿದ್ಧಪಡಿಸುತ್ತಿದ್ದೇವೆ. ಬಂಡವಾಳ ಹೂಡುವ ಆಸಕ್ತರಿಗೆ ಸೌಲಭ್ಯಗಳನ್ನು ಇಲಾಖೆ ಒದಗಿಸಲಿದೆ.
-ಡಾ| ವಿ.ರಾಮ್‌ ಪ್ರಸಾದ್‌ ಮನೋಹರ್‌, ಪ್ರವಾಸೋದ್ಯಮ ಇಲಾಖೆ ನಿರ್ದೇಶಕ

Advertisement

ಏನಿದು ವೆಲ್‌ನೆಸ್‌ ಟೂರಿಸಂ ?
ಕ್ಷೇಮ ಪ್ರವಾಸೋದ್ಯಮವು ಭಾರತದಲ್ಲಿ ಭಾರೀ ಮುನ್ನೆಲೆಗೆ ಬರುತ್ತಿದೆ. ರಾಜ್ಯದಲ್ಲಿ ಪ್ರಕೃತಿ ಸಹಜ ವಾತಾವರಣಗಳಿಂದ ಕೂಡಿರುವ ಕೆಲವು ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ವೆಲ್‌ನೆಸ್‌ ಟೂರಿಸಂನಡಿ ಯೋಗ, ಧ್ಯಾನ, ಮನಶ್ಶಾಂತಿ ನೀಡುವ ಕೆಲವು ಆಯುರ್ವೇದ ಚಿಕಿತ್ಸೆಗಳು, ಯುನಾನಿ, ಸಿದ್ಧ, ಹೋಮಿಯೋಪತಿ ಚಿಕಿತ್ಸೆಗಳಲ್ಲಿ ಬರುವ ಥೆರಪಿ ಸೌಲಭ್ಯ ಕಲ್ಪಿಸಲಾಗುತ್ತದೆ. ಸದಾ ಕೆಲಸದ ಒತ್ತಡದಲ್ಲಿರುವವರು, ಖನ್ನತೆಗೆ ಒಳಗಾದವರು, ಒಂದೇ ಜಾಗದಲ್ಲಿದ್ದು ಬೇಜಾರಾದರೆ ಬದಲಾವಣೆ ಬಯಸುವ ಮನಸ್ಥಿತಿ ಹೊಂದಿರುವವರಿಗೆ “ವೆಲ್‌ನೆಸ್‌ ಟೂರಿಸಂ’ನಿಂದ ಹೆಚ್ಚಿನ ಪ್ರಯೋಜನ ಸಿಗಲಿದೆ.

 ಅವಿನಾಶ ಮೂಡಂಬಿಕಾನ

Advertisement

Udayavani is now on Telegram. Click here to join our channel and stay updated with the latest news.

Next